ಅಧಿಕಾರಿಗಳ ನಿರ್ಲಕ್ಷ್ಯ- ಕೆರೆ ಕಟ್ಟೆಗಳಿಗೆ ಅಪಾಯ

101

Get real time updates directly on you device, subscribe now.


ಕುಣಿಗಲ್: ಜನವಸತಿ ಪ್ರದೇಶದಲ್ಲಿ ಬರುವ ಜಲಸಂಪನ್ಮೂಲ ಪ್ರಮುಖ ತಾಣಗಳ ರಕ್ಷಣೆಗೆ ರಚಿಸಲಾದ ನಿಯಮಗಳ ಪಾಲನೆ ಮಾಡಬೇಕಾದ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಜಲ ಸಂಪನ್ಮೂಲಗಳ ಸಮೀಪದ ರಕ್ಞಣಾ ವಲಯ ಅತಿಕ್ರಮಿಸುವ ಬೆಕ್ಕುಗಳಿಗೆ ಗಂಟೆ ಕಟ್ಟುವವರು ಯಾರೆಂಬ ಪ್ರಶ್ನೆ ಕಾಡುವಂತಾಗಿದೆ.
ಗ್ರಾಮ ಪಂಚಾಯಿತಿ ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಲಸಂಪನ್ಮೂಲ ತಾಣಗಳಾದ ಕೆರೆ, ಕಟ್ಟೆ, ಕೆರೆಗೆ ನೀರು ಹರಿಸುವ ರಾಜಕಾಲುವೆ, ಕೆರೆಯಿಂದ ಕೃಷಿ ಪ್ರದೇಶಕ್ಕೆ ನೀರು ಹರಿಸುವ ಮುಖ್ಯಕಾಲುವೆ, ಉಪ ಕಾಲುವೆಗಳ ಪ್ರದೇಶದ ರಕ್ಷಣೆಗೆ ರಾಜ್ಯ ಸರ್ಕಾರವು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ 2018 ಜಾರಿಗೆ ತಂದಿದೆ, ಸದರಿ ಕಾಯಿದೆ ಯಡಿಯ14 (3)ರ ಅಡಿಯಲ್ಲಿ ಕೆರೆಯ ಹೊರಗಿನ ಸರಹದ್ದಿನಿಂದ ಮೂವತ್ತು ಮೀಟರ್ ರಕ್ಷಣಾ ವಲಯದೊಳಗೆ (ಬಫರ್ ಝೋನ್) ಯಾವುದೇ ಕೈಗಾರಿಕೆ, ಮನರಂಜನೆ ಕಟ್ಟಡ ಕಟ್ಟತಕ್ಕದಲ್ಲ ಎಂದಿದೆ, ಆದರೆ ದಿನದಿಂದ ದಿನಕ್ಕೆ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳು ವ್ಯಾಪಕ ಬೆಳವಣಿಗೆಯಾಗುತ್ತಿದ್ದು ಜಲ ಕಾಯಗಳಾದ ಕೆರೆಯ ಹೊರಗಿನ ಸರಹದ್ದಿನಲ್ಲಿ ಬರುವ ಮೂವತ್ತು ಮೀಟರ್ ರಕ್ಷಣಾ ವಲಯದಲ್ಲಿ ವ್ಯಾಪಕ ಅಕ್ರಮ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೂ ಜಲ ಕಾಯಗಳ ಸಂರಕ್ಷಣೆ ನಿಟ್ಟಿನಲ್ಲಿ ಪಾಲನೆ ಮಾಡಬೇಕಾದ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದು, ನಿಯಮ ಉಲ್ಲಂಸುವ ಬೆಕ್ಕುಗಳಿಗೆ ಗಂಟೆ ಕಟ್ಟುವವರು ಯಾರೆಂಬುವಂತಾಗಿದೆ, ಪಟ್ಟಣದ ದೊಡ್ಡಕೆರೆಯು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ ಪ್ರಮುಖ ತಾಣವಾಗಿದೆ, ಸದರಿ ಕೆರೆಗೆ ಹೊಂದಿಕೊಂಡಂತೆ ಸುಮಾರು ಎಂಟಕ್ಕೂ ಹೆಚ್ಚು ಹಳ್ಳಿಗಳಿದ್ದು ಈ ಹಳ್ಳಿಗಳ ಜನವಸತಿ ಪ್ರದೇಶದ ತ್ಯಾಜ್ಯ ನೀರು ಸಂಸ್ಕರಣೆ ಮಾಡದೆ ಕೆರೆಗೆ ಹರಿಬಿಡಲಾಗುತ್ತಿದೆ ಎನ್ನಲಾಗಿದೆ, ತ್ಯಾಜ್ಯ ನೀರು ಸಂಸ್ಕರಣೆ ಮಾಡದೆ ಕೆರೆಗೆ ಬಿಡುವುದು ಜಲ ಮಾಲಿನ್ಯ ತಡೆ ಕಾಯಿದೆ 1974 ಹಾಗೂ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1860ರ ಸೆಕ್ಚನ್ 277ರ ಪ್ರಕಾರ ದಂಡನೀಯ ಅಪರಾಧವಾಗಿದೆ.

ಕೆರೆಯ ಸಂರಕ್ಷಣೆ ನಿಟ್ಟಿನಲ್ಲಿ ಸ್ಥಳೀಯ ಪ್ರಾಧಿಕಾರವಾದ ಪುರಸಭೆ, ಗ್ರಾಮ ಪಂಚಾಯಿತಿಗಳು, ಕೆರೆಯ ಉಸ್ತುವಾರಿ ನೋಡಿಕೊಳ್ಳುವ ಹೇಮಾವತಿ ನಾಲಾವಲಯ, ಸಣ್ಣ ನೀರಾವವರಿ ಇಲಾಖಾಧಿಕಾರಿಗಳು ಕಾಯಿದೆ ಜಾರಿ ನಿಟ್ಟಿನಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಬೇಕಿದೆ, ಆದರೆ ಅಧಿಕಾರಿಗಳು ಕೆರೆಯ ಮುಂಭಾಗದಲ್ಲಿ ಕಾಯಿದೆಯ ಬಗ್ಗೆ ಅರಿವು ಮೂಡಿಸುವ ಫಲಕ ಹಾಕಿ ಕೈತೊಳೆದುಕೊಂಡರೆ, ಸಣ್ಣನೀರಾವರಿ, ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಕೆರೆ, ಕಾಲುವೆ ಇವಕ್ಕೂ ನಮಗೂ ಸಂಬಂಧ ಇಲ್ಲದಂತೆ ನಡೆದುಕೊಳ್ಳುತ್ತಾರೆಂದು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಆರೋಪಿಸುತ್ತಾರೆ.
ಬರಗಾಲ ಕಾಡುವ ದಿನಗಳಲ್ಲಿ ಜಲ ಕಾಯಗಳ ರಕ್ಷಣೆ ಮಾಡಿದಲ್ಲಿ ಕನಿಷ್ಟ ಜನ, ಜಾನುವಾರುಗಳಿಗಾದರೂ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತದೆ, ಈ ದಿಸೆಯಲ್ಲಿ ಕಾಯಿದೆಯ ಪಾಲನೆ ಮಾಡಲು ಅಧಿಕಾರಿಗಳು ಮುಂದಾಗುವರೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!