ಕುಣಿಗಲ್: ಬೆಳೆಯುತ್ತಿರುವ ಪಟ್ಟಣದ ಅಗತ್ಯಕ್ಕೆ ತಕ್ಕಂತೆ ಪಟ್ಟಣದ ಜನತೆಗೆ ದಿನವೂ 24/7 ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಅಮೃತ ನಗರ ಯೋಜನೆ ಸಹಕಾರಿಯಾಗಿದ್ದು, ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಶಾಸಕ, ಸಂಸದರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗುತ್ತಿದೆ.
2000-01ರ ಹಿಂದೆ ಪುರಸಭೆಯು 18 ವಾರ್ಡ್ಗಳಿಗೆ ಸೀಮಿತವಾಗಿದ್ದು 2000- 01 ಇಸವಿಯಲ್ಲಿ ಪುರಸಭೆ ಕ್ಷೇತ್ರ ಪುನರ್ ವಿಂಗಡನೆಯಾಗಿ 23 ವಾರ್ಡ್ಗಳಿಗೆ ವಿಸ್ತರಣೆಯಾಯಿತು, ವಿಸ್ತರಣೆಯಾದ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ 1999- 2000ನೇ ಇಸವಿಯಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ ಮೊದಲು ಕೊತ್ತಗೆರೆ ಕೆರೆಯಿಂದ ನೀರೂ ಪೂರೈಕೆ ಮಾಡಲು ಅಂದಿನ ಶಾಸಕ ಎಸ್.ಪಿ.ಮುದ್ದಹನುಮೇ ಗೌಡರು ಚಿಂತನೆ ನಡೆಸಿದ್ದು ನಂತರದ ದಿನಗಳಲ್ಲಿ ಕುಣಿಗಲ್ ದೊಡ್ಡಕೆರೆಯಿಂದ ಒಟ್ಟಾರೆ ಶೇಖರಣ ಪ್ರಮಾಣ 455 ಎಂ ಸಿ ಎಫ್ ಟಿ (ಅರ್ಧ ಟಿಎಂಸಿ) ಪೈಕಿ ವಾರ್ಷಿಕ 50ಎಂಸಿಎಫ್ ಟಿ ಕುಡಿಯುವನೀರು ಬಳಕೆ ಮಾಡಲು ನಬಾರ್ಡ್ ಸಹಭಾಗಿತ್ವದಲ್ಲಿ 2007-08 ನೇ ಸಾಲಿನಲ್ಲಿ ಅಂದಿನ ಶಾಸಕ ಎಚ್.ನಿಂಗಪ್ಪ ಅವಧಿಯಲ್ಲಿ ಕಾಮಗಾರಿಗೆ 673.50 ಲಕ್ಷ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದು, ಸದರಿ ಯೋನೆಯಡಿಯಲ್ಲಿ ದೊಡ್ಡಕೆರೆಯಲ್ಲಿ ಜಾಕ್ ವೆಲ್ ನಿರ್ಮಿಸಿ, ಸಂತೇ ಮೈದಾನದ ಸಮೀಪದಲ್ಲಿ 5.80 ಎಂ ಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣ ಸೇರಿದಂತೆ ಪಟ್ಟಣದ ವಿವಿಧೆಡೆ ಐದು ಲಕ್ಷ ಲೀ. ಸಾಮರ್ಥ್ಯದ ನಾಲ್ಕು ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು, ಹಲವು ಕಾರಣಗಳಿಂದ ಎರಡೆ ಟ್ಯಾಂಕ್ ನಿರ್ಮಾಣಗೊಂಡು 2013- 14ರಲ್ಲಿ ಯೋಜನೆಯನ್ನು ಶಾಸಕ ಬಿ.ಬಿ.ರಾಮಸ್ವಾಮಿಗೌಡ ಉದ್ಘಾಟಿಸಿದರು.
ನಂತರದ ದಿನಗಳಲ್ಲಿ ಶಾಸಕ ಡಾ.ರಂಗನಾಥ್ ಅವಧಿಯಲ್ಲಿ, ಸಂಸದ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ಬಾಕಿ ಟ್ಯಾಂಕ್ ನಿರ್ಮಾಣದ ಜೊತೆಯಲ್ಲಿ ಅಮೃತ್ ಯೋಜನೆಯಡಿಯಲ್ಲಿ 41 ಕೋಟಿ ರೂ. ವೆಚ್ಚದಲ್ಲಿ 2050ಕ್ಕೆ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ 24/7 ನೀರು ಪೂರೈಕೆಗೆ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲಾಗಿದ್ದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದೆ, ಅಮೃತ್ ನಗರ ಯೋಜನೆಯಡಿಯಲ್ಲಿ ಹೊಸದಾಗಿ ಮೂರು ಟ್ಯಾಂಕ್, 20 ಲಕ್ಷ ಲೀ ಸಾಮರ್ಥ್ಯದ ಶುದ್ಧೀಕರಿಸಿದ ನೀರು ಸಂಗ್ರಹಾರ, ವಿದ್ಯುತ್ ಅವಶ್ಯಕತೆ ಇಲ್ಲದೆಯೆ ಗುರುತ್ವಾಕರ್ಷಣ ಬಲದಿಂದ ಪಟ್ಟಣದ ವಿವಿಧ ವಾರ್ಡ್ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಯೋಜನೆ ಅನುಷ್ಠಾನಕ್ಕೆ ಮೂರು ಡಿವಿಜನ್ ಮಾಡಿಕೊಂಡಿದ್ದು ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಲಸಾಗುತ್ತಿದೆ,
ಈ ಮಧ್ಯೆ ಅಮೃತ್ ಯೋಜನೆಗೆ ಪ್ರತಿಯೊಂದು ಕುಡಿಯುವ ನೀರು ಸಂಪರ್ಕಕ್ಕೂ ಮೀಟರ್ ಅಳವಡಿಸಿ ಬಳಸಿದಷ್ಟು ತೆರಿಗೆ ವಸೂಲು ಮಾಡಬೇಕಿದೆ, ಆದರೆ ಈ ಹಿಂದೆ ಪಟ್ಟಣದ ಏಳು ವಾರ್ಡ್ಗಳಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಸಿದ್ದು, ಜನತೆ ಮೀಟರ್ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದ್ದು ಹಲವಾರು ಮೀಟರ್ ಗಳು ಏನಾಗಿವೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ, ಪಟ್ಟಣದಲ್ಲೆ ಕೆರೆ ಇದ್ದು ಕೆರೆ ತುಂಬಾ ನೀರಿದ್ದರೂ ಕುಡಿಯುವ ನೀರು ನಾಲ್ಕರಿಂದ ಐದು ದಿನಕ್ಕೆ ಪೂರೈಕೆಯಾಗುತ್ತಿದ್ದು ಜನರನ್ನು ಬವಣೆಯಿಂದ ಪಾರು ಮಾಡಲು ಅಮೃತ್ ಯೋಜನೆ ಸಹಕಾರಿಯಾಗಿದ್ದು ಪಟ್ಟಣದ ಜನತೆ ಅಮೃತ್ ಯೋಜನೆಗೆ ಎಷ್ಟರ ಮಟ್ಟಿಗೆ ಸಹಕಾರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
Comments are closed.