ಗುಬ್ಬಿ: ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ತುಮಕೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ 108 ನಂದಿ ಧ್ವಜ ಕುಣಿತದ ಕಲಾವಿದರ ತಂಡವು ಸಿದ್ಧವಾಗಿದ್ದು, ಅದಕ್ಕಾಗಿ ಗುಬ್ಬಿ ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಬಸ್ ನಿಲ್ದಾಣದ ವರೆಗೂ ನಂದಿಧ್ವಜ ಮೆರವಣಿಗೆಯನ್ನು ಪ್ರಾಯೋಗಿಕವಾಗಿ ನಡೆಸಲಾಯಿತು.
ಸಿದ್ದರಾಮ ಸೇನೆ ವತಿಯಿಂದ ಆಯೋಜನೆ ಮಾಡಿರುವ ಈ ಒಂದು ತಂಡ ಜಿ.ಎಸ್.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಮೈಸೂರಿನ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಮುಂದಾಗಿದೆ.
ಈ ಸಂದರ್ಭದಲ್ಲಿ ಜಿ.ಎಸ್.ಪ್ರಸನ್ನ ಕುಮಾರ್ ಮಾತನಾಡಿ, ನಮ್ಮ ಪುರಾತನ ಸಂಸ್ಕೃತಿ, ಸಂಸ್ಕಾರ, ಜನಪದ ಕಲೆ ಉಳಿಯಬೇಕು ಎಂದರೆ ಇಂತಹ ವೇದಿಕೆಗಳನ್ನು ನಮ್ಮ ಗ್ರಾಮೀಣ ಭಾಗದ ಕಲಾವಿದರಿಗೆ ಮಾಡಿಕೊಡಬೇಕಾಗಿದೆ, ಹಾಗಾಗಿ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಕಲಾವಿದರು ಒಂದು ತಂಡದಲ್ಲಿ ಸಾಗುವ ಮೂಲಕ ಇದೊಂದು ಐತಿಹಾಸಿಕ ಹೆಜ್ಜೆಯೂ ಆಗುತ್ತದೆ,
ಸರಕಾರದ ಯಾವುದೇ ಹಣವನ್ನು ಬರಗಾಲದ ಸಮಯದಲ್ಲಿ ಬಳಕೆ ಮಾಡಿಕೊಳ್ಳದೆ ಸ್ವಂತ ಹಣದಿಂದ ಈ ಒಂದು ಕಾರ್ಯಕ್ರಮ ಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸಿದ ಅವರು ಮುಂದಿನ ದಿನದಲ್ಲಿ ನಾವು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಕೂಡ 300ಕ್ಕೂ ಹೆಚ್ಚು ಕಲಾವಿದರನ್ನು ಕರೆದುಕೊಂಡು ಹೋಗಿ ನಮ್ಮ ನಾಡಿನ ಸಂಸ್ಕೃತಿ ಬೆಳಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮ ಸೇನೆಯ ಹೇಮಂತ್, ಸಿದ್ದೇಶ್, ಶಿವು ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಜಿಲ್ಲೆಯ ಹಲವು ಭಾಗಗಳಿಂದ ಆಗಮಿಸಿದ ಜಾನಪದ ಕಲಾವಿದರು ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು.
Comments are closed.