ತುಮಕೂರು: ಗ್ರಾಮೀಣರ ಸಮಸ್ಯೆಗೆ ಸ್ಪಂದಿಸುವುದು, ಹಳ್ಳಿ ಜನರ ಕೆಲಸ ಮಾಡಿಕೊಡುವುದು ಗ್ರಾಮ ಲೆಕ್ಕಾಧಿಕಾರಿಗಳ ಕೆಲಸ, ಆದರೆ ಇದ್ಯಾವುದನ್ನು ಮಾಡದ ಗ್ರಾಮ ಲೆಕ್ಕಾಧಿಕಾರಿಗಳು ಹಣ ಮಾಡುವ ದಂಧೆಗೆ ಇಳಿದು ಬಿಟ್ಟಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಒಂದೇ ಕಡೆ ಬೇರು ಬಿಟ್ಟುಕೊಂಡಿರುವ ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎಂಬಂತಾಗಿದೆ, ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕಿನಲ್ಲೂ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜನೆ ಹೆಸರಿನಲ್ಲಿ ಮೂಲ ಕರ್ತವ್ಯ ಸ್ಥಳದಿಂದ ಇತರೆ ಸ್ಥಳಗಳಿಗೆ ನಿಯೋಜಿಸುತ್ತಿದ್ದು, ಇದು ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿದೆ, ಡಿಸಿ ಕಚೇರಿ, ಎಸಿ ಕಚೇರಿ, ತಾಲ್ಲೂಕು ಕಚೇರಿ ಸೇರಿದಂತೆ ಮತ್ತಿತರ ಆಯಕಟ್ಟಿನ ಜಾಗಗಳಿಗೆ ನಿಯೋಜನೆ ಮಾಡುತ್ತಿರುವುದ ಗ್ರಾಮ ಲೆಕ್ಕಾಧಿಕಾರಿಗಳಿಗೆ ವರವಾಗಿ ಪರಿಣಮಿಸಿದೆ, ಕಚೇರಿಗಳಲ್ಲಿ ಕೂರುವ ವಿಎ ಗಳು ಜನರ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ, ಕಂದಾಯ ಪಾವತಿ, ಖಾತೆ, ಆದಾಯ ಪತ್ರ, ಜಾತಿ ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ದಾಖಲಾತಿ ಪಡೆಯಲು ಗ್ರಾಮೀಣ ಜನರು ನಗರ ಪ್ರದೇಶಕ್ಕೆ ಬಂದು ಕಚೇರಿಗಳಿಗೆ ಅಲೆಯುವಂತಾಗಿದೆ, ಅಲ್ಲದೆ ದುಡ್ಡು ಕೊಟ್ಟರೆ ಮಾತ್ರ ವಿಎ ಗಳು ಕೆಲಸ ಮಾಡುತ್ತಾರೆ, ಇಲ್ಲವಾದರೆ ಜನರ ಕೈಗೆ ಸಿಗದಂತೆ ತಪ್ಪಿಸಿಕೊಂಡು ತಿರುಗಾಡುತ್ತಾರೆ ಎಂಬುದು ಸಾರ್ವಜನಿಕರ ದೂರು.
ಇದಿಷ್ಟೇ ಅಲ್ಲದೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದ ಆದೇಶ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಕಂದಾಯ ನಿರೀಕ್ಷಕ ಹುದ್ದೆಗೆ ಬಡ್ತಿ ನೀಡುತ್ತಿರುವುದು ಕಂಡು ಬರುತ್ತಿದೆ, ಇದರಿಂದ ಕಂದಾಯ ಇಲಾಖೆಯಲ್ಲಿ ಅನ್ಯಾಯ, ಅಕ್ರಮಕ್ಕೆ ದಾರಿಯಾಗುತ್ತಿದೆ.
ಈ ಎಲ್ಲಾ ಅಂಶಗಳನ್ನು ಮನಗಂಡ ಸಾಮಾಜಿಕ ಹೋರಾಟಗಾರ ಬೆಳಗುಂಬ ವೆಂಕಟೇಶ್ ಗೃಹ ಮಂತ್ರಿಗಳಿಗೆ ಮತ್ತು ಅಪರ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಗ್ರಾಮ ಲೆಕ್ಕಾಧಿಕಾರಿಗಳ ನಿಯೋಜನೆ ರದ್ದು ಮಾಡಬೇಕು, ಅವರ ಮೂಲ ಕರ್ತವ್ಯ ಸ್ಥಾನಕ್ಕೆ ಹಾಜರಾಗುವಂತೆ ಆದೇಶಿಸಬೇಕು, ಕಾನೂನು ಬಾಹಿರವಾಗಿ ಕಂದಾಯ ನಿರೀಕ್ಷಕ ಹುದ್ದೆಗೆ ಬಡ್ತಿ ನೀಡುತ್ತಿರುವುದನ್ನು ನಿಯಂತ್ರಿಸ ಬೇಕು, ಒಂದೇ ಕಡೆ ಬೇರು ಬಿಟ್ಟಿರುವವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪತ್ರ ಬರೆದಿದ್ದಾರೆ, ಈ ಪತ್ರಕ್ಕೆ ಸ್ಪಂದಿಸಿರುವ ಗೃಹ ಮಂತ್ರಿ ಮತ್ತು ಅಪರ ಪ್ರಾದೇಶಕ ಆಯುಕ್ತರು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ, ಆದರೆ ಜಿಲ್ಲಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಗ್ರಾಮ ಲೆಕ್ಕಾಧಿಕಾರಿಗಳ ಆಟಾಟೋಪ ಮುಂದುವರೆಯಲು ಬಿಟ್ಟಿದ್ದಾರೆ, ಹಣ ಮಾಡುತ್ತಿರುವ ಕೆಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಡಿವಾಣ ಹಾಕಬೇಕಾದ ಜಿಲ್ಲಾಧಿಕಾರಿಗಳು ತಮಗೇನು ಗೊತ್ತಿಲ್ಲದಂತೆ ಇದ್ದು ಬಿಟ್ಟಿದ್ದಾರೆ, ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಂತೆ ಜಿಲ್ಲಾಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಗ್ರಾಮ ಲೆಕ್ಕಾಧಿಕಾರಿಗಳನ್ನು ಬೇರೆ ಕಡೆ ನಿಯೋಜನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ, ಆದರೆ ಅವರ ಗಮನಕ್ಕೂ ಬಾರದೆ ಬೇರೆ ಬೇರೆ ವೃತ್ತಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ, ಹೀಗೆ ನಿಯೋಜನೆ ಮಾಡುವ ಅಧಿಕಾರ ಕೊಟ್ಟವರು ಯಾರು ಎಂಬ ಪ್ರಶ್ನೆಯೂ ಮೂಡುತ್ತದೆ, ಜಿಲ್ಲಾಧಿಕಾರಿಗಳು ಇನ್ನಾದರೂ ಎಚ್ಚೆತ್ತು ವಿಎಗಳ ದರ್ಬಾರ್ ಮತ್ತು ದಂಧೆಗೆ ಕಡಿವಾಣ ಹಾಕಬೇಕಿದೆ, ಜೊತೆಗೆ ಗ್ರಾಮೀಣ ಜನರಿಗೆ ಸಮರ್ಪಕ ಕರ್ತವ್ಯ ನಿರ್ವಹಿಸಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಆರ್ ಐ ಮಂಜುನಾಥ್ ದರ್ಬಾರ್ ಜೋರು!
ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಈಗ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರೆವೆನ್ಯೂ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರ ಕಾರ್ಯ ವೈಖರಿಗೆ ಜನ ಬೆಚ್ಚಿ ಬಿದ್ದಿದ್ದಾರೆ, ಹೆಬ್ಬೂರಿನಲ್ಲಿ ಕರ್ತವ್ಯ ನಿರ್ವಹಿಸುವ ಇವರು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ವ್ಯವಹಾರ ನಡೆಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಯಾರದೋ ಆಸ್ತಿ ಯಾರ ಹೆಸರಿಗೋ ಮಾಡುವುದು, ವಂಶವೃಕ್ಷ ಹೀಗೆ ಮಾಡಿಸಿ ಎಂದು ಸಲಹೆ ನೀಡುತ್ತಾರೆ, ಕಾನೂನು ಪಾಲಿಸುವುದು ಎಂದರೆ ಈ ಆರ್ ಐಗೆ ಅಲರ್ಜಿ ಎಂಬಂತಾಗಿದೆ, ಸಾಗುವಳಿ ಚೀಟಿ, ಕ್ರಯ, ಪೌತಿ ಖಾತೆ ಹೀಗೆ ಯಾವ ವಿಚಾರದಲ್ಲೂ ಅಕ್ರಮದ ದಾರಿ ತೋರಿಸುವುದು ಇವರ ಕಾಯಕ ಎಂದು ನೊಂದ ಸಾರ್ವಜನಿಕರು ಆಪಾದಿಸುತ್ತಾರೆ, ಇವರ ಆಟಕ್ಕೂ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಬೇಕು ಎಂಬ ಆಗ್ರಹವನ್ನು ಮಾಡಿದ್ದಾರೆ.
ವಿಎಗಳ ನಿಯೋಜನೆ ರದ್ದಾಗಲಿ
ಜನರ ಸಮಸ್ಯೆಗೆ ಸ್ಪಂದಿಸಿ ಮೂಲ ಕರ್ತವ್ಯ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸಬೇಕಾದ ಗ್ರಾಮ ಲೆಕ್ಕಾಧಿಕಾರಿಗಳು ನಿಯೋಜನೆ ಹೆಸರಿನಲ್ಲಿ ನಗರದ ಕಚೇರಿಗಳಲ್ಲಿ ಬೀಡು ಬಿಟ್ಟಿದ್ದಾರೆ, ಇದರಿಂದ ಗ್ರಾಮೀಣ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಈ ಸಂಬಂಧ ಗೃಹ ಸಚಿವರು ಮತ್ತು ಅಪರ ಪ್ರಾದೇಶಕ ಆಯುಕ್ತರಿಗೆ ಪತ್ರ ಬರೆದು ನಿಯೋಜನೆ ರದ್ದು ಮಾಡಿ ಮೂಲ ಕರ್ತವ್ಯ ಸ್ಥಾನಕ್ಕೆ ಮರಳುವಂತೆ ಸೂಚನೆ ನೀಡಬೇಕು ಎಂದು ಕೋರಲಾಗಿತ್ತು, ಇದಕ್ಕೆ ಸ್ಪಂದನೆ ದೊರೆತಿದ್ದು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಬಂದಿದೆ, ಜಿಲ್ಲಾಧಿಕಾರಿಗಳು ಈ ತಕ್ಷಣದಿಂದ ಗ್ರಾಮ ಲೆಕ್ಕಾಧಿಕಾರಿಗಳ ನಿಯೋಜನೆ ರದ್ದು ಮಾಡಿ ಮೂಲ ಕರ್ತವ್ಯ ಸ್ಥಾನಕ್ಕೆ ಕಳಿಸಬೇಕು, ಆ ಮೂಲಕ ಸಾರ್ವಜನಿಕರ ಕೆಲಸ ಸುಗಮವಾಗುವಂತೆ ನೋಡಿಕೊಳ್ಳಬೇಕು.
-ಬೆಳಗುಂಬ ವೆಂಕಟೇಶ್, ಸಾಮಾಜಿಕ ಹೋರಾಗಾರ
Comments are closed.