ಡಿಜಿಟಲ್ ಸಾಕ್ಷರತೆಯಿಂದ ಮಹಿಳಾ ಸಬಲೀಕರಣ

108

Get real time updates directly on you device, subscribe now.


ತುಮಕೂರು: ಇಂದಿನ ಡಿಜಿಟಲ್ ಯುಗದಲ್ಲಿ ವಿವಿಧ ಸೇವೆ, ಸೌಲಭ್ಯ ಪಡೆಯಲು, ವ್ಯವಹಾರ ನಡೆಸಲು ಡಿಜಿಟಲ್ ವ್ಯವಸ್ಥೆ ಸುಲಭವಾಗಿದೆ, ಆದರೆ ಗ್ರಾಮೀಣ ಪ್ರದೇಶದ ಬಹುತೇಕರಿಗೆ ಡಿಜಿಟಲ್ ಬಳಕೆ ಬಗ್ಗೆ ತಿಳುವಳಿಕೆ ಇಲ್ಲದೆ ತೊಂದರೆಯಾಗುತ್ತದೆ, ಅಂತಹವರಿಗೆ ಡಿಜಿಟಲ್ ಸೇವೆ ಬಳಸಲು ಡಿಜಿಟಲ್ ಸಖಿಯರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಆಕ್ಸಿಸ್ ಲೈವ್ ಲೀ ಹುಡ್ ಸಂಸ್ಥೆಯ ದಕ್ಷಿಣ ಕರ್ನಾಟಕದ ಯೋಜನಾ ವ್ಯವಸ್ಥಾಪಕ ಹೆಚ್.ಆರ್.ಮಲ್ಲೇಶ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ಆಕ್ಸಿಸ್ ಲೈವ್ಲೀಹುಡ್ ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಆಶ್ರಯದಲ್ಲಿ ನಡೆದ ಡಿಜಿಟಲ್ ಸಖಿ ಕಾರ್ಯಕ್ರಮದ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ಡಿಜಿಟಲ್ ಬಳಕೆ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಜೊತೆಗೆ ಡಿಜಿಟಲ್ ವಂಚನೆ, ಮೊಬೈಲ್ ಗೆ ಬರುವ ನಕಲಿ ಕರೆಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಚಟುವಟಿಕೆಗಳ ಮೂಲಕ ತರಬೇತಿ ಪಡೆದ ಡಿಜಿಟಲ್ ಸಖಿ ಮಹಿಳೆಯರು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಅವರಿಗೆ ಡಿಜಿಟಲ್ ಬಳಕೆ ಬಗ್ಗೆ ಪ್ರಾತ್ಯಕ್ಷತೆ ಮೂಲಕ ತಿಳುವಳಿಕೆ ನೀಡುವರು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುವ ಕುರಿತು ತಿಳುವಳಿಕೆ ನೀಡುವರು, ಈ ಮೂಲಕ ಅರ್ಹರು ಸರ್ಕಾರಿ ಸೌಲಭ್ಯ ಪಡೆಯಲು ನೆರವಾಗುವರು, ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಅಗತ್ಯ ಸೇವೆ, ಮಾರ್ಗದರ್ಶನ ನೀಡುವರು, ಅಂತಹವರಿಗೆ ವಿವಿದ ಹಣಕಾಸು ಸಂಸ್ಥೆಗಳ ನೆರವಿನಿಂದ ಸಾಲಸೌಲಭ್ಯ ಒದಗಿಸಲಾಗುವುದು, ಇಂತಹ ಮಹಿಳೆಯರಿಗೆ ಈವರೆಗೆ ಸುಮಾರು ಆರು ಕೋಟಿ ರೂಪಾಯಿ ಸಾಲಸೌಕರ್ಯ ನೀಡಲಾಗಿದೆ ಎಂದು ಹೇಳಿದರು.

ಗ್ರಾಮೀಣ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆ, ಆರ್ಥಿಕ ಮಾರ್ಗದರ್ಶನ ನೀಡಲು, ಮಹಿಳಾ ಸಬಲೀಕರಣ ಮಾಡುವಲ್ಲಿ ಸಂಸ್ಥೆ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಲ್ಲೇಶ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಡಿಜಿಟಲ್ ಜ್ಞಾನವಿಲ್ಲದೆ, ಸರ್ಕಾರದ ಯೋಜನೆಗಳ ಅರಿವಿಲ್ಲದೆ ಅನೇಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ಡಿಜಿಟಲ್ ಸಾಕ್ಷರರಾಗಿ ಜ್ಞಾನ ಪಡೆದು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ತಿಳಿಸಿದರು.
ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ತೇಜಾವತಿ ಮಾತನಾಡಿ, ಮನೆಗಳಲ್ಲಿ ಆರ್ಥಿಕ ಚಟುವಟಿಕೆ ನಡೆಸುತ್ತಿರುವ ಗುಡಿ ಕೈಗಾರಿಕೆ ಅವಲಂಬಿಸಿರುವ ಮಹಿಳೆಯರು, ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿ ದಿನೇಶ್ ಮಾತನಾಡಿ, ಮಹಿಳೆಯರು ಡಿಜಿಟಲ್ ಸಾಕ್ಷರರಾಗಿ ಸರ್ಕಾರದ ಯೋಜನೆ, ಸೌಕರ್ಯಗಳನ್ನು ತಾವೇ ತಿಳಿದು ಬಳಸಿಕೊಳ್ಳವಂತಾಗಬೇಕು, ಸಂಸ್ಥೆ ಮಾಡುತ್ತಿರುವ ಡಿಜಿಟಲ್ ಅರಿವು ಕಾರ್ಯಕ್ರಮ ಶ್ಲಾಘನೀಯ ಎಂದರು. ಜಿಲ್ಲೆಯ ಡಿಜಿಟಲ್ ಸಖಿಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!