ತುಮಕೂರು: ನಗರದ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ 47ನೇ ವರ್ಷದ ಗಣೇಶ ಮೂರ್ತಿಯನ್ನು ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಹಾಗೂ ಅದ್ದೂರಿ ತೆಪ್ಪೋತ್ಸವದೊಂದಿಗೆ ನಗರದ ಅಮಾನಿಕೆರೆಯಲ್ಲಿ ವಿಸರ್ಜಿಸಲಾಯಿತು.
ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ 47ನೇ ಗಣೇಶೋತ್ಸವದ ಅಂಗವಾಗಿ 30 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹಾಗೂ ಗೋಡೆಕೆರೆಯ ಮೃತ್ಯುಂಜಯ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಿದರು.
ವಿವಿಧ ಬಗೆಯ ಹೂವುಗಳಿಂದ ಅಲಂಕೃತವಾಗಿದ್ದ ವಾಹನದಲ್ಲಿ ಕೂರಿಸಿದ್ದ ಗಣೇಶಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ವೈಭವದ ಗಣೇಶೋತ್ಸವದ ಮೆರವಣಿಗೆ ಉದ್ಘಾಟಿಸಿದರು.
ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ನಾಸಿಕ್ ಡೋಲು, ಮಂಗಳವಾದ್ಯ, ಕೋಲಾಟ, ಸೋಮನ ಕುಣಿತ, ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಡಂಕವಾದ್ಯ, ಚಂಡೆ ವಾದ್ಯ, ಚಿಟ್ಟಿ ಮೇಳ, ನಾಗಸ್ವರ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ನೋಡುಗರ ಗಮನ ಸೆಳೆದವು, ಜೊತೆಗೆ ಮೆರವಣಿಗೆ ದಾರಿಯುದ್ದಕ್ಕೂ ಭಕ್ತರು ಗಣೇಶನಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ವಿನಾಯಕ ನಗರದಿಂದ ಹೊರಟ ಗಣೇಶಮೂರ್ತಿಯ ಮೆರವಣಿಗೆ ಬಿ.ಹೆಚ್.ರಸ್ತೆ ಮೂಲಕ ಟೌನ್ ಹಾಲ್ ವೃತ್ತ, ಎಂ.ಜಿ.ರಸ್ತೆ, ಹೊರಪೇಟೆ, ಮಂಡಿಪೇಟೆ, ಆಯಿಲ್ ಮಿಲ್ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮೂಲಕ ಅಮಾನಿಕೆರೆ ತಲುಪಿತು,
ಇದೇ ಸಂದರ್ಭದಲ್ಲಿ 6 ಟ್ರ್ಯಾಕ್ಟರ್ ಗಳಲ್ಲಿ ವಿವಿಧ ದೇವರುಗಳ ಮೆರವಣಿಗೆಯೂ ನಡೆಯಿತು.
ಅಮಾನಿಕೆರೆಯಲ್ಲಿ ವೈಭವದ ತೆಪ್ಪೋತ್ಸವ ನಡೆದು ಗಣೇಶಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜಿಸಲಾಯಿತು, ಅಮಾನಿಕೆರೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ಅಂಗವಾಗಿ ನಡೆದ ತಪ್ಪೋತ್ಸವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಗಣೇಶೋತ್ಸವದಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್, ಕಾರ್ಯದರ್ಶಿ ರಾಘವೇಂದ್ರ ರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಪ್ರಭು, ಸಾಂಸ್ಕ ತಿಕ ಸಮಿತಿಯ ಟಿ.ಹೆಚ್.ಪ್ರಸನ್ನಕುಮಾರ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜಣ್ಣ, ಎನ್. ವೆಂಕಟೇಶ್ ಕಲ್ಪನ ಹಾಲಪ್ಪ, ನಿರ್ದೇಶಕರಾದ ಎಂ.ಲಿಂಗಪ್ಪ, ಜಿ.ಎಸ್.ಸಿದ್ದರಾಜು, ಕೆ.ನರಸಿಂಹಮೂರ್ತಿ, ಟಿ.ಆರ್ ನಟರಾಜು, ಟಿ.ಹೆಚ್.ಮಹೇಶ್, ಜಿ.ಸಿ.ವಿರುಪಾಕ್ಷ, ಡಾ.ಎಸ್.ವಿ.ವೆಂಕಟೇಶ್, ಹೇಮರಾಜು ಸಿಂಚ, ಎ.ಎಸ್.ವಿಜಯಕುಮಾರ್, ಟಿ.ಆರ್.ವೆಂಕಟೇಶ್ಬಾಬು, ಟಿ.ಕೆ.ಪದ್ಮರಾಜ್, ಎಂ.ಎನ್.ಉಮಾಶಂಕರ್, ಆರ್.ಎಲ್.ರಮೇಶ್ಬಾಬು, ಡಾ.ಅನುಸೂಯ ರುದ್ರಪ್ರಸಾದ್, ರೇಣುಕಾ ಪರಮೇಶ್, ಇಂದ್ರಾಣಿ ಮತ್ತಿತರರು ಭಾಗವಹಿಸಿದ್ದರು.
Comments are closed.