ತುಮಕೂರು: 2023ರ ಅಕ್ಟೋಬರ್ ಮಾಹೆಯ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಸಾಲ ಮತ್ತು ಸಬ್ಸಿಡಿ ಮಂಜೂರಾತಿ ಅರ್ಜಿಗಳನ್ನು ಕಡ್ಡಾಯವಾಗಿ ಇತ್ಯರ್ಥ ಪಡಿಸದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಸ್ ಎಲ್ ಬಿಸಿ ಹಾಗೂ ಆರ್ ಬಿಐಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ಪ್ರಭು ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಪ್ರಸಕ್ತ ಸಾಲಿನ ಯೋಜನೆಗಳು, ಕಳೆದ ತೆರೈ ಮಾಸಿಕದಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಶೇಕಡಾವಾರು ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ), ಎನ್ ಎಲ್ ಎಂ, ಪಿಎಂಇಜಿಪಿ, ಉದ್ಯೋಗಿನಿ, ಪಿಎಂಎವೈ, ಎಪಿವೈ, ಪಿಎಂ ಸ್ವನಿಧಿ ಮತ್ತು ವಸತಿ ಯೋಜನೆ ಮೊದಲಾದ ಯೋಜನೆಗಳಡಿ ವಿವಿಧ ಇಲಾಖೆಗಳಿಂದ ಬ್ಯಾಂಕುಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಪ್ರಗತಿ ಪರಿಶೀಲನೆ ಮಾಡಿದ ಅವರು ಸಮಾಜದ ಬಡ ಹಾಗೂ ಅಶಕ್ತ ವರ್ಗದವರಿಗಾಗಿ, ನಿರುದ್ಯೋಗಿಗಳಿಗಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಸರ್ಕಾರದಿಂದ ರೂಪಿಸಲ್ಪಟ್ಟಿರುವ ಯೋಜನೆಗಳಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಬ್ಯಾಂಕುಗಳು ಅನಗತ್ಯ ವಿಳಂಬ ಮಾಡದೇ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು.
ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಕ್ಕಾಗಿ ಬ್ಯಾಂಕ್ ಗಳ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸದರಿ ಯೋಜನೆಯ ಕುರಿತು ಹಾಗೂ ಸಾಲ ಪಡೆಯಲು ಇರಬೇಕಾದ ಅರ್ಹತೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿ, ಅರ್ಜಿದಾರರು ನೀಡುವ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಬ್ಯಾಂಕ್ ಗಳಿಗೆ ಕಳಿಸಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳಬೇಕು, ಸರ್ಕಾರಿ ಯೋಜನೆಗಳ ಸಂಪೂರ್ಣ ಯಶಸ್ವಿಗೆ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಒಳಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸಬೇಕು, ಈಗಾಗಲೇ ಅಂಬೇಡ್ಕರ್ ನಿಗಮ, ಕೈಮಗ್ಗ ಇಲಾಖೆಯ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೆಕು, ಬಡತನ ರೇಖೆಗಿಂತ ಕೆಳಗಿರುವವರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕೆನ್ನುವುದೇ ಸರ್ಕಾರದ ಉದ್ದೇಶವಾಗಿದ್ದು ಮುದ್ರಾ ಯೋಜನೆ ಮತ್ತು ಸ್ಟಾರ್ಟಪ್ ಗಳಿಗೆ ಸಮರ್ಪಕವಾಗಿ ಸಾಲ ವಿತರಿಸುವ ಮೂಲಕ ಎಲ್ಲಾ ಬ್ಯಾಂಕ್ ಗಳು ಜಿಲ್ಲೆ ಯುವ ಜನತೆಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ನೆರವಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಅರ್ಹರಿಗೆ ತಲುಪಿಸುವ ಕೆಲಸವನ್ನು ಸೇವಾ ಮನೋಭಾವದಿಂದ ನಿರ್ವಹಿಸಲು ಕರೆ ನೀಡಿದರು.
ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಲಾಖೆಗಳ ವಿವಿಧ ಯೋಜನೆಗಳ ಪ್ರಗತಿ ವಿವರಗಳ ಪಡೆದು ಅಗತ್ಯ ನಿರ್ದೇಶನಗಳ ನೀಡಿ ಮಾತನಾಡಿದ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಸ್.ಬಸವರಾಜ್, ಕೇಂದ್ರ ಸರ್ಕಾರದ ಪ್ರಾಯೋಜಿತ ಸಾಲ ಮತ್ತು ಸಬ್ಸಿಡಿ ಯೋಜನೆಗಳ 2023- 24ನೇ ಸಾಲಿನ ಗುರಿಗಳ ಸಾಲಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಬಾರದು, ಫಲಾನುಭವಿಗಳಿಗೆ ಸಮರ್ಪಕವಾಗಿ ಸಾಲ ಸಿಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ, ಈ ತಿಂಗಳ ಅಂತ್ಯಕ್ಕೆ ಎಲ್ಲವೂ ಸರಿ ಹೋಗಬೇಕು, ಕೆಲವು ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ಸಾಲ ಸೌಲಭ್ಯ ನೀಡಲು ಅನಾವಶ್ಯಕ ಹೆಚ್ಚಿನ ದಾಖಲಾತಿ ಕೇಳುತ್ತಿರುವುದು ಗಮನಕ್ಕೆ ಬಂದಿದೆ, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ತಾಂತ್ರಿಕ ಕಾರಣ ನೀಡಿ ವಿಳಂಬ ಮಾಡಲಾಗುವ ವರ್ತನೆ ಸಹಿಸಲು ಸಾಧ್ಯವಿಲ್ಲ, ಸಾಮಾಜಿಕ ಸುರಕ್ಷತಾ ಯೋಜನೆಗಳ ಫಲವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಬಂಧಕ ಪ್ರಕಾಶ್ ಮಾತನಾಡಿ, ಬ್ಯಾಂಕ್ ಗಳ ಠೇವಣಿಯಲ್ಲಿ 2023 ಜೂನ್ 30ರ ಅಂತ್ಯಕ್ಕೆ 18,280.50 ಕೋಟಿ ಜಮಾ ಆಗಿದ್ದು, ಮುಂಗಡ ಸಾಲವಾಗಿ 17,702.20 ಕೋಟಿ ನೀಡಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಸಾಲದಲ್ಲಿ ದುರ್ಬಲ ವರ್ಗಗಳಿಗೆ ಎಸ್ ಸಿ, ಎಸ್ ಟಿ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಬ್ಯಾಂಕಿಂಗ್ ಸಾಲ ಸೌಲಭ್ಯ ವಿಸ್ತರಿಸುವ ಕಾರ್ಯ ಚುರುಕುಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಯೋಜನಾ ನಿರ್ದೇಶಕ ನಾರಯಣ ಸ್ವಾಮಿ, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಭಾ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ರೇಷ್ಮೇ ಇಲಾಖೆಯ ಉಪ ನಿರ್ದೇಶಕ ರಾಮಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಎನ್ ಜಿ ಒ ಗಳು, ಎಲ್ಲಾ ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Comments are closed.