ಶಿರಾ: ಕೋವಿಡ್ ಪರಿಣಾಮ ಶಾಲೆಗಳು ಸರಿಯಾಗಿ ನಡೇಯದೆ ತೊಂದರೆಗೀಡಾಗಿರುವ ಸರ್ಕಾರಿ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನದ ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಡಿಜಿಟಲ್ ಸ್ಕ್ರೀನ್ ಮೂಲಕ ಮಕ್ಕಳಿಗೆ ಪಾಠ ಪ್ರವಚನ ನಡೆಸಲು ಅನುಕೂಲವಾಗುವಂತೆ ದೂರತರಂಗ ಶಿಕ್ಷಣ ವ್ಯವಸ್ಥೆ ಅಳವಡಿಸಲು ಪಾವಗಡದ ರಾಮಕೃಷ್ಣ ಸೇವಾಶ್ರಮ ಮುಂದಾಗಿದೆ ಎಂದು ಆಶ್ರಮದ ಜಪಾನಂದ ಸ್ವಾಮೀಜಿ ನುಡಿದರು.
ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇನ್ಫೋಸಿಸ್ ಫೌಂಡೇಶನ್ ಜೊತೆಯಲ್ಲಿ ಡಿಜಿಟಲ್ ಶಿಕ್ಷಣ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಸಿಕ್ಕುವ ಸ್ಮಾರ್ಟ್ ಕ್ಲಾಸ್ ಅನುಭವ ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲೂ ದೊರಕಲಿದೆ, ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಮಕ್ಕಳಲಿ ಅರಿವಿನ ಮಟ್ಟವನ್ನು ಏರಿಸುವ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಆಶ್ರಮ ಅಳಿಲು ಸೇವೆ ಸಲ್ಲಿಸುವ ಸಂಕಲ್ಪ ಮಾಡಿದೆ ಎಂದರು.
ದೊಡ್ಡದಾದ ಡಿಜಿಟಲ್ ಪರದೆ, ಪ್ರೊಜೆಕ್ಟರ್ ಕ್ಯಾಮೆರಾ ಬಳಸಿ, ಲ್ಯಾಪ್ ಟಾಪ್ನಲ್ಲಿ ಈಗಾಗಲೇ ರೂಪಿಸಿರುವ ಪಾಠಗಳನ್ನು ಮಕ್ಕಳು ನೋಡುತ್ತಾ ನಲಿಯುತ್ತಾ ಕಲಿಯಲಿದ್ದಾರೆ. ಮಕ್ಕಳ ಕಲಿಕೆಗೆ ವಿದ್ಯುತ್ ಅಭಾವ ಭಂಗತರಬಾರದು ಎನ್ನುವ ಕಾರಣಕ್ಕೆ ಆರು ಗಂಟೆಗಳ ಕಾಲ ಕೆಲಸ ನಿರ್ವಹಿಸುವ ಯುಪಿಎಸ್ ಕೂಡಾ ನೀಡಲಿದ್ದೇವೆ.
ಟ್ಯಾಬ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ವಿಚಾರ ಕೂಡಾ ಒಳ್ಳೆಯದೇ ಆದರೂ ಡಿಜಿಟಲ್ ಶಿಕ್ಷಣ ಅದಕ್ಕಿಂತ ಭಿನ್ನವಾಗಿ ಗುಂಪಿನಲ್ಲಿ ಕಲಿಯಲು ಅವಕಾಶ ಕಲ್ಪಿಸಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಲೆ ಸುಮಾರು 50 ಜನ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಪಾಠ ನಡೆಸಲು ಅವಕಾಶವಿದೆ, ಒಂದು ವಿಷಯದ ನಂತರ ಮತ್ತೊಂದು ವಿಷಯಕ್ಕೆ ವರ್ಗಾವಣೆಗೊಳ್ಳುವ ಅವಕಾಶವಿದೆ, ಅಲ್ಲದೇ ಡಿಜಿಟಲ್ ಪರದೆಯನ್ನು ಬೇಕೆಂದಾಗ ಬಿಳಿ ಬೋರ್ಡ್ ಆಗಿ ಪರಿವರ್ತಿಸಿ, ಶಿಕ್ಷಕರು ಅದರ ಮೇಲೆ ಬರೆದು ವಿಷಯವನ್ನು ಅರ್ಥಮಾಡಿಸಲೂ ಅವಕಾಶವಿದೆ. ಇದರ ನಿರ್ವಹಣೆಯನ್ನು ಸ್ವತಃ ಇನ್ಫೋಸಿಸ್ ಫೌಂಡೇಶನ್ ವಹಿಸಿದೆ ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಳ್ಳುತ್ತಿರುವ ಈ ಪದ್ಧತಿ ರಾಜ್ಯಾದ್ಯಂತ ಹಬ್ಬಿಸಲು ಅವಕಾಶವಿದೆ. ಮೊದಲಿಗೆ ಮಧುಗಿರಿ ಜಿಲ್ಲೆಯ 20 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶಿರಾ ತಾಲ್ಲೂಕಿನ ಬರಗೂರು, ಲಕ್ಕನಹಳ್ಳಿ, ಹೊನ್ನಗೊಂಡನಹಳ್ಳಿ, ಚಂಗಾವರ ಮತ್ತು ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮೊದಲ ಹಂತದಲ್ಲಿ ಹೊಸ ವ್ಯವಸ್ಥೆ ಅಳವಡಿಸಲಿದ್ದೇವೆ. ಮುಂದೆ ಅದನ್ನು ಬೇರೆ ಶಾಲೆಗಳಿಗೂ ವಿಸ್ತರಿಸುತ್ತೇವೆ ಎಂದರು.
ಇದೇ ಶನಿವಾರ ಬರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಳ್ಳಲಿರುವ ಶಿಕ್ಷಣ ಪದ್ಧತಿಯಲ್ಲಿ ಜಿಲ್ಲಾ ಸಚಿವ ಮಾಧುಸ್ವಾಮಿ, ಶಾಸಕ ರಾಜೇಶ್ಗೌಡ, ಚಿದಾನಂದ ಎಂ.ಗೌಡ, ಸಂಸದ ಎ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಶಿಕ್ಷಣ ಇಲಾಖೆ ಮುಖ್ಯಸ್ಥರೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಜರಿರಲಿದ್ದಾರೆ ಎಂದು ವಿವರಿಸಿದರು.
ಮಧುಗಿರಿ ಉಪನಿರ್ದೇಶಕ ರೇವಣಸಿದ್ದಯ್ಯ ಮಾತನಾಡಿ, ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಶನ್ಗೆ ಕೃತಜ್ಞತೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್, ಶಶಿಕುಮಾರ್, ಬಸವರಾಜು, ಮನು ಮಹೇಶ್ ಇತರರು ಹಾಜರಿದ್ದರು.
Get real time updates directly on you device, subscribe now.
Next Post
Comments are closed.