ದಸರಾ ಪ್ರಯುಕ್ತ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಸಿದ್ಧ

89

Get real time updates directly on you device, subscribe now.


ತುಮಕೂರು: ತುಮಕೂರು ದಸರಾ ಸಮಿತಿಯಿಂದ 33ನೇ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 21 ರಿಂದ 24ರ ವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಪರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಡಹಬ್ಬವಾಗಿರುವ ದಸರಾ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಜಿಲ್ಲೆಯ ಸಮಸ್ತ ನಾಗರಿಕರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದರು.

ಅಕ್ಟೋಬರ್ 21ರ ಶನಿವಾರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 4 ಕಲ್ಯಾಣೋತ್ಸವದೊಂದಿಗೆ 2023ನೇ ಸಾಲಿನ ದಸರಾ ಕಾರ್ಯಕ್ರಮ ಆರಂಭವಾಗುತ್ತಿದ್ದು, ಬೆಂಗಳೂರಿನ ಶ್ರೀವಾನಿ ಫೌಂಡೇಶನ್ ವತಿಯಿಂದ ಶ್ರೀನಿವಾಸ ಕಲಶೋತ್ಸವ ನಡೆಸಿಕೊಡುತ್ತಿದ್ದಾರೆ, ಈ ಕಾರ್ಯಕ್ರಮದ ಪೂರ್ವದಲ್ಲಿ ಕೊಸಗಿ ಗುರುರಾಜ್ ಮತ್ತು ತಂಡದವರಿಂದ ನಾದೋಪಾಸನೆಯ ಅಂಗವಾಗಿ ಶ್ರೀವಾರಿ ಕೀರ್ತನೆಗಳನ್ನು ಸಮರ್ಪಿಸುತ್ತಿದ್ದಾರೆ, ಕಲ್ಯಾಣೋತ್ಸವದ ನಂತರ ಸ್ವಾಮಿಯ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ ಎಂದರು.

ಅಕ್ಟೋಬರ್ 22ರ ಭಾನುವಾರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಯೋಗ ದಸರಾ ಕಾರ್ಯಕ್ರಮ ನಡೆಯಲಿದ್ದು, ವಚನಾನಂದ ಶ್ರೀಗಳು ನಡೆಸಿಕೊಡಲಿದ್ದಾರೆ, ಸಂಜೆ 5.30 ಗಂಟೆಗೆ ವರ ಉತ್ಸವದ ಸಾಂಸ್ಕೃತಿಕ ಕಾರ್ಯದ ಉದ್ಘಾಟನೆಯನ್ನು ಚಲನಚಿತ್ರ ಮತ್ತು ಕಿರುತೆರೆಯ ನಟರು ಹಾಗೂ ವಾಗ್ಮಿಗಳಾದ ಸುನಿಲ್ ಪುರಾಣಿಕ್ ನೆರವೇರಿಸಲಿದ್ದಾರೆ, ತುಮಕೂರಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸುತಿದ್ದು, ತಿಪಟೂರಿನ ಬಿಳಿಗೆರೆ ಸಾವಯವ ಕೃಷಿಕರಾದ ಚಂದ್ರಪ್ರಕಾಶ್ ಅವರನ್ನು ಗೌರವಿಸಲಾಗುವುದು, ನಂತರ ಕಾಮಿಡಿ ಕಿಲಾಡಿ ಖ್ಯಾತಿಯ ಜಗಪ್ಪ ಮತ್ತು ತಂಡದವರಿಂದ ಹಾಗೂ ರಸ ಸಂಜೆ ಕಾರ್ಯಕ್ರಮ ಜರುಗಲಿದೆ.

ಆಕ್ಟೋಬರ್ 23ರ ಸೋಮವಾರ ಸಾಂಸ್ಕೃತಿಕ ನಾಡಹಬ್ಬವನ್ನು ಸಂಜೆ 5.30 ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಉದ್ಘಾಟನೆ ಮಾಡಲಿದ್ದಾರೆ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಗಮಿಸುತ್ತಿದ್ದಾರೆ, ಇವರೊಂದಿಗೆ ಸಂಸದ ಜಿ.ಎಸ್.ಬಸವರಾಜು, ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಮಹಾ ನಗರ ಪಾಲಿಕೆ ಮಹಾಪೌರರಾದ ಎಂ.ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಆಗಮಿಸುತ್ತಿದ್ದಾರೆ, 4 ತಲೆಮಾರಿನ ಸಹ ಕುಟುಂಬಕ್ಕೆ ಜೀವಂತವಾಗಿಟ್ಟಿರುವ ತಿಪಟೂರಿನ ತರೀಕೆರೆ ಕೊನೆಹಳ್ಳಿಯ ಗಂಗಮ್ಮ ಶಿವರಾಮಯ್ಯ ಅವರನ್ನು ಸನ್ಮಾನಿಸಲಾಗುವುದು, ಸಾಂಸ್ಕೃತಿಕ ನಾಡಹಬ್ಬದ ಉದ್ಘಾಟನೆ ನಂತರ ಕುಂದಾಪುರದ ರೂಪಕಲಾ ಬಳಗ ಅವರ ಮಜಾ ಟಾಕೀಸ್ ಖ್ಯಾತಿಯ ಮೂರು ಮುತ್ತುಗಳು ತಂಡದಿಂದ ನಗೆಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಕ್ಟೋಬರ್ 24ರ ಮಂಗಳವಾರ ವಿಜಯದಶಮಿ ಪ್ರಯುಕ್ತ ಧಾರ್ಮಿಕ ದಸರಾ ಪ್ರಯುಕ್ತ ಮನಿ, ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದ ವಿವಿಧ ದೇವಾಲಯಗಳ ಉತ್ತಮ ಮೂರ್ತಿಗಳ ಮೆರವಣಿಗೆ ನಡೆಸಲಿದೆ, ತಹಶೀಲ್ದಾರ್ ಸಿದ್ದೇಶ್ ಸಾಮೂಹಿಕ ಶಮೀಪೂಜೆ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಪತ್ರಕರ್ತ ಲಕ್ಷ್ಮೀ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ, ನಂತರ ಸಂಜೆ 5.30 ಗಂಟೆಗೆ ಆಕರ್ಷಕ ಕಲಾ ತಂಡಗಳೊಂದಿಗೆ ವಿದ್ಯುತ್ ಅಲಂಕೃತ ನಗರದ ಪ್ರಮುಖ ರಾಜಮಾರ್ಗಗಳಲ್ಲಿ ನಗರದ ವಿವಿಧ ದೇವಾಲಯಗಳ ಉತ್ಸವ ಮೂರ್ತಿಯ ವೈಭವಯುತ ವಿಜಯದಶಮಿ ಮೆರವಣಿಗೆ ನಡೆಯಲಿದೆ ಎಂದು ಡಾ.ಪರಮೇಶ್ ವಿವರ ನೀಡಿದರು.

ದಸರಾ ಉತ್ಸವದ ಅಂಗವಾಗಿ ಸುಮಾರು 28 ಎಲೆಕ್ಟ್ರಿಕಲ್ ಗುತ್ತಿಗೆದಾರರು ನಗರದ 28 ಕಿ.ಮೀ ವಿದ್ಯುತ್ ಅಲಂಕಾರ ಮಾಡಿದ್ದು, ಸಾರ್ವಜನಿಕರು ವೀಕ್ಷಿಸಿ ಅವುಗಳಿಗೆ ಮಾರ್ಕ್ಸ್ ನೀಡುವ ಮೂಲಕ ಯಾರು ಹೆಚ್ಚು ಆಕರ್ಷಕವಾಗಿ ವಿದ್ಯುತ್ ಅಲಂಕಾರ ಮಾಡಿದ್ದಾರೆ ಎಂದು ಎಸ್ ಎಂ ಎಸ್ ಮೂಲಕ ತಿಳಿಸಿದರೆ, ಅಂತವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುದು ಎಂದು ದಸರಾ ಉತ್ಸವ ಸಮಿತಿ ಖಜಾಂಚಿ ಜಿ.ಎಸ್.ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಪರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕಾರ್ಯದರ್ಶಿ ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಗೋವಿಂದರಾವ್, ಉಪಾಧ್ಯಕ್ಷ ಗುರುಕುಲ ಮಲ್ಲಿಕಾರ್ಜುನ್, ಸಂದೀಪಗೌಡ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!