ತುಮಕೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿದು ಪರೀಕ್ಷೆಗಳೂ ಪೂರ್ಣಗೊಂಡಿದ್ದರೂ ಇನ್ನೂ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಹಣ ಪಾವತಿಯಾಗಿಲ್ಲ, ಈ ಸಾಲಿನ ಎಸ್ ಎಸ್ ಪಿ ಗಾಗಿ ಅರ್ಜಿ ಸಲ್ಲಿಸಿರುವ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೈಕಿ ಶೇ. 50 ಕ್ಕೂ ಕಡಿಮೆ ವಿದ್ಯಾರ್ಥಿಗಳಿಗೆ ಮಾತ್ರ ಶುಲ್ಕ ಮರುಪಾವತಿ ಹಾಗೂ ನಿರ್ವಹಣಾ ವೆಚ್ಚ ಸೇರಿ ವಿದ್ಯಾರ್ಥಿ ವೇತನದ ಹಣ ಪಾವತಿ ಆಗಿದ್ದು, ಮಿಕ್ಕ ವಿದ್ಯಾರ್ಥಿಗಳಿಗೆ ಹಣ ಪಾವತಿಯಾಗಿಲ್ಲ.
2022- 23ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ಮುಗಿದಿದ್ದು, ಸ್ನಾತಕ ಪದವಿಗಳ 2023- 24ನೇ ಸಾಲಿನ ತರಗತಿಗಳು ಆರಂಭವಾಗಿವೆ, 2023- 24ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಎಸ್ ಎಸ್ ಪಿ ಈಗಾಗಲೇ ತೆರೆದಿದೆ, ಆದರೆ ಕಳೆದ ಸಾಲಿನ ವಿದ್ಯಾರ್ಥಿ ವೇತನದ ಹಣ ಪಾವತಿಯೇ ಇನ್ನು ಆಗಿಲ್ಲ, ಜೊತೆಗೆ 2023- 24ನೇ ಸಾಲಿನ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಇತರೆ ಶುಲ್ಕಗಳೂ ಹೆಚ್ಚಾಗಿದ್ದು ಬಡ ವಿದ್ಯಾರ್ಥಿಗಳು ಸಾಲ ಮಾಡಿ ಶುಲ್ಕ ಪಾವತಿ ಮಾಡುವ ಪರಿಸ್ಥಿತಿ ಬಂದಿದೆ, ವಿದ್ಯಾರ್ಥಿ ವೇತನದ ಹಣವೂ ಬಾರದೆ, ಶುಲ್ಕ ಏರಿಕೆಯೂ ಆಗಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಾಗಿದೆ.
ಈ ಸಮಸ್ಯೆಗೆ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರ ಬಡ ವಿದ್ಯಾರ್ಥಿಗಳ ಅಳಲು ಆಲಸಿ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿಕೊಡುವ ಬದ್ಧತೆ ತೋರಬೇಕು.
ಅಧಿಕಾರಿಗಳ ನಿರ್ಲಕ್ಷ್ಯ
ಸರಕಾರ ಹಿಂದುಳಿದವರಿಗೆ ಸಹಾಯವಾಗಲಿ, ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ ಅನೇಕ ಯೋಜನೆ ಜಾರಿಗೆ ತರುತ್ತದೆ, ಅದರಲ್ಲಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗಲಿ ಎಂದು ವಿದ್ಯಾರ್ಥಿ ವೇತನ ನೀಡುವ ಯೋಜನೆಯೂ ಒಂದು, ಆದರೆ ಇಂತಹ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವಲ್ಲಿ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾದ ಕಾರಣ ಅವರು ಪುನಃ ಹಿಂದುಳಿಯುತ್ತಿದ್ದಾರೆ.
ವಿದ್ಯಾರ್ಥಿ ವೇತನಕ್ಕಾಗಿ ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಏನಾದರೂ ಗೊಂದಲ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಬಗೆಹರಿಸಿಕೊಳ್ಳಿ ಎಂದು ಕೆಲವು ದೂರವಾಣಿ ಸಂಖ್ಯೆಗಳನ್ನು ಇಲಾಖೆ ನೀಡುತ್ತವೆ, ಆದರೆ ಅವು ಯಾವುದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ, ಅವುಗಳಿಗೆ ಎಷ್ಟು ಬಾರಿ ಕರೆ ಮಾಡಿದರೂ ಒಬ್ಬರೂ ಕರೆ ಸ್ವೀಕರಿಸುವುದಿಲ್ಲ, ಒಂದು ವೇಳೆ ಅಪ್ಪಿತಪ್ಪಿ ಸ್ವೀಕರಿಸಿದರೆ ಅವರಿಂದ ಸರಿಯಾದ ಪ್ರತಿಕ್ರಿಯೆ ಸಿಗುವುದಿಲ್ಲ, ಸಂಬಂಧಪಟ್ಟವರು ಊಟಕ್ಕೆ ಹೋಗಿದ್ದಾರೆ, ಮೀಟಿಂಗ್ ಇದೆ, ಫೋನ್ ಮಾಡಿದರೆ ಸಾಕಾಗಲ್ಲ, ನೀವೇ ಕಚೇರಿಗೆ ಬನ್ನಿ ಎಂದು ಹೇಳುವರು, ನಮ್ಮ ಕೆಲಸ ಆದರೆ ಸಾಕು ಎಂದು ಕಚೇರಿಗೆ ಹೋದರೆ ಅಲ್ಲಿಯೂ ಅದೇ ರಾಗ ಅದೇ ಹಾಡು, ಈಗ ಅವರಿಲ್ಲ, ನಾಳೆ ಬನ್ನಿ ಎಂಬ ಉತ್ತರ ಅವರ ಬಾಯಲ್ಲಿ ಸಿದ್ಧವಾಗಿರುತ್ತೆ, ಇಂಥ ಸಂಪತ್ತಿಗೆ ಯೋಜನೆ ಯಾಕೆ ಮಾಡಬೇಕು ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ.
Comments are closed.