ತುಮಕೂರು: ಸದಾ ಬದಲಾಗುವ ಶಿಕ್ಷಣ ಪರಿಸರದಲ್ಲಿ ಹೊಸ ಪ್ರವೃತಿ ಹೊತ್ತು ತರುವ ಶಿಕ್ಷಣ ನೀತಿಗಳನ್ನು ವಿಶ್ವ ವಿದ್ಯಾಲಯಗಳು ಶಿಕ್ಷಕರಿಗೆ ಪರಿಚಯಿಸಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಜ್ಞಾನ ಪಸರಿಸಲು ಸಹಕಾರಿಯಾಗಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ವಿವಿ ವಿದ್ಯಾರ್ಥಿ ಕ್ಷೇಮಪಾಲನ ಘಟಕ, ತುಮಕೂರು ವಿಶ್ವ ವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- 2020 5ನೇ ಮತ್ತು 6ನೇ ಸೆಮಿಸ್ಟರ್ ಬಿಕಾಂ ಪಠ್ಯ ಕ್ರಮ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೇವಲ ಪಠ್ಯಕ್ರಮ ನವೀಕರಿಸುವುದಷ್ಟೇ ಅಲ್ಲ, ಶಿಕ್ಷಕರು ವಿನೂತನ ಪ್ರವೃತ್ತಿಗಳಿಗೆ ಉನ್ನತೀಕರಣಗೊಳ್ಳಬೇಕು, ಶಿಕ್ಷಣ ನೀತಿಗಳಲ್ಲಿ ಬದಲಾವಣೆ ವಿದ್ಯಾರ್ಥಿಗಳ ಒಳಿತಿಗಾಗಿ ಮಾಡುವುದು, ಪ್ರಸ್ತುತ, ಪ್ರಚಲಿತ ವಿಷಯ ಕಲಿಯಬೇಕು, ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಜ್ಞಾನವನ್ನು ಅಳೆದು ಗೌರವಿಸುತ್ತಾರೆ, ಹಾಗಾಗಿ ಹೊಸತನ್ನು ಕಲಿಯುವ ಹಂಬಲ, ಗುಣ ಮೊದಲು ಶಿಕ್ಷಕರಲ್ಲಿ ಪ್ರವೃತ್ತಿಯಾಗಬೇಕು ಎಂದರು.
ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಹಣಕಾಸು ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡುವ ಯಾವುದೇ ಸಂಸ್ಥೆಯು ಭವಿಷ್ಯ ಕಾಣಲಿದೆ, ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ನಿರ್ವಹಣಾ ಕೌಶಲ್ಯವೇ ಎಂದಿಗೂ ಪ್ರಮುಖ ಪ್ರವೃತ್ತಿ ಎಂದು ತಿಳಿಸಿದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್ ಕೆ.ಮಾತನಾಡಿ, ದೇಶದ ಬೆನ್ನೆಲುಬು ರೈತನಾದರೆ, ದೇಶವನ್ನು ರಕ್ಷಿಸುವವನು ಯೋಧ, ಹಾಗೆಯೇ ದೇಶವು ಆರ್ಥಿಕವಾಗಿ ಸಬಲವಾಗಿರಬೇಕು ಎಂದರೆ ವಾಣಿಜ್ಯ ಆಡಳಿತವೂ ಅಷ್ಟೇ ಮುಖ್ಯ ಎಂದರು.
ತುಮಕೂರು ವಿಶ್ವ ವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆಯ ಅಧ್ಯಕ್ಷ ನರಸಿಂಹಮೂರ್ತಿ.ಟಿ.ಎನ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ ಪರಮಶಿವಯ್ಯ, ಪ್ರೊ.ಜಿ.ಸುದರ್ಶನರೆಡ್ಡಿ, ಪ್ರೊ.ಬಿ.ಶೇಖರ್, ತುಮಕೂರು ವಿಶ್ವ ವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆಯ ಕಾರ್ಯದರ್ಶಿ ಡಾ.ದಿನೇಶ್ ಕುಮಾರ್.ಸಿ. ಭಾಗವಹಿಸಿದ್ದರು.
Comments are closed.