ಕೊರಟಗೆರೆ: ಮಹಿಳೆಯರು ಆರ್ಥಿವಾಗಿ ಸಬಲರಾಗುವುದರ ಜೊತೆಗೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬಲಿಷ್ಠರಾಗಲು ಹೆಚ್ಚು ಒತ್ತು ನೀಡಬೇಕು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ವಿಶೇಷ ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪ ಆವರಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕೊರಟಗೆರೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ್ ನ ಅರ್ಹ ಫಲಾನುಭವಿಗಳಿಗೆ ಪಿಎಂಎವೈ ಮನೆ ಮಂಜೂರಾತಿ ಪತ್ರ ವಿತರಣೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಇಲಾಖೆಗಳಿಂದ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರಿಗೆ ಶಕ್ತಿ ತುಂಬುವುದಕ್ಕಾಗಿ ಸ್ತ್ರೀಶಕ್ತಿ ಸಂಘಗಳನ್ನು ಪ್ರಾರಂಭಿಸಲಾಯಿತು, ಇದರಿಂದ ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗುತ್ತಿದ್ದರು, ಆದರೆ ಇಂದು ಹೆಣ್ಣು ಮನೆಯ ಹೊರಗಡೆಯೂ ಸಹ ದುಡಿಯುವ ಮೂಲಕ ತನ್ನ ಕುಟುಂಬದ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವುದನ್ನು ನಾವೆಲ್ಲರೂ ನೋಡಬಹುದಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ತಾಯಂದಿರಿಗೆ, ಗರ್ಭಿಣಿಯರಿಗೆ ಪೌಷ್ಟಿಕವಾದ ಆಹಾರ ದೊರೆಯದ ಕಾರಣ ಅಪೌಷ್ಟಿಕತೆಗೆ ಒಳಗಾಗುತ್ತಾರೆ, ಇದನ್ನು ತಪ್ಪಿಸಲು ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಅವರಿಗೆ ತಿಂಗಳಿಗೊಂದು ಆಹಾರದ ಕಿಟ್ ನೀಡಲಾಗುತ್ತಿದೆ, ಇದರ ಪೈಕಿ ತಾಲೂಕಿನಲ್ಲಿ 222 ಮಹಿಳೆಯರಿಗೆ ಆಹಾರದ ಕಿಟ್ ನೀಡಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ವಸತಿ ರಹಿತ ಕುಟುಂಬಗಳಿಗೆ ಪ್ರಧಾನಮಂತ್ರಿ ಅವಾಜ್ ಯೋಜನೆ ಅಡಿ ಮಂಜೂರಾದ 411 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗಿದೆ, ಈ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.25 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ 1.75 ಲಕ್ಷ ಧನ ಸಹಾಯ ನೀಡಲಾಗುವುದು ಎಂದು ತಿಳಿಸಿದರು.
ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳುವ ತಾಲೂಕಿನ 15,000 ರೈತರಿಗೆ ಕಾಮಗಾರಿ ಮಂಜೂರಾತಿ ಆದೇಶ ನೀಡಲಾಗಿದೆ, ಇದರಿಂದ ರೈತರು ಬರಗಾಲದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಹೇಳಿದರು.
ನಮ್ಮ ಪಕ್ಷ ಚುನಾವಣೆಗೂ ಮುನ್ನ ಘೋಷಿಸಿದ್ದ ಗ್ಯಾರಂಟಿಗಳನ್ನು ರಾಜ್ಯದ ಜನರ ಆಶೀರ್ವಾದದಿಂದ ಸರ್ಕಾರ ರಚನೆಯಾದ ಮೇಲೆ 4 ಗ್ಯಾರಂಟಿ ಅನುಷ್ಠಾನಗೊಳಿಸಿದ್ದು, ಈ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದ ಸಾವಿರಾರು ಕುಟುಂಬಗಳು ಇದರ ಸೌಲಭ್ಯ ಪಡೆಯುತ್ತಿದ್ದಾರೆ, ಇದಕ್ಕಾಗಿ ನಮ್ಮ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ ಎಂದರಲ್ಲದೆ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕೊರಟಗೆರೆ ತಾಲೂಕಿನಲ್ಲಿ 40,930 ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ದಂತೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.
ನಮ್ಮ ಸರ್ಕಾರವಿರುವುದು ಬಡವರ ಮತ್ತು ಜನಸಾಮಾನ್ಯರ ಅಭಿವೃದ್ಧಿಗಾಗಿ ಹೊರತು ಶ್ರೀಮಂತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯಾಗದೆ 80 ರಷ್ಟು ಮಳೆ ಬೆಳೆ ನಷ್ಟವಾಗಿದೆ, ಯಾವುದೇ ಬೆಳೆಯು ನಿರೀಕ್ಷಿತ ಮಟ್ಟದಲ್ಲಿ ಫಸಲು ನೀಡಿಲ್ಲವೆಂದು ಹೇಳಿದರು.
ಪೋಲಿಸ್ ಇಲಾಖೆಯು ರಾಜ್ಯದಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡುವುದರ ಮೂಲಕ ಅಧಿಕಾರಿಗಳು ಸಾರ್ವಜನಿಕರಲ್ಲಿ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲೆಯ ಆಡಳಿತ ವ್ಯವಸ್ಥೆಗೆ 4 ತಿಂಗಳಿನಿಂದ ನಿರಂತರವಾಗಿ ಪ್ರತಿವಾರ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆ ಮಾಡುವುದರ ಮೂಲಕ ಈ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಜನಸಾಮಾನ್ಯರಿಗೂ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕೆ ಗೃಹ ಸಚಿವರು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಯೋಜನೆಗಳ ಬಾಂಡ್ ಗಳನ್ನು ಅರ್ಹ ಫಲಾನುಭವಿಗಳಿಗೆ ಸಚಿವರ ಮೂಲಕ ವಿತರಿಸಲಾಯಿತು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ. ವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಎ.ಶ್ರೀಧರ್, ತಾಲೂಕ್ ಪಂಚಾಯತ್ ಆಡಳಿತಾಧಿಕಾರಿ ಜಿ.ದೀಪಶ್ರೀ, ತಾಲೂಕ್ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ.ದೊಡ್ಡಸಿದ್ದಯ್ಯ, ತಹಶೀಲ್ದಾರ್ ರಂಜಿತ್.ಕೆ.ಆರ್. ಮತ್ತಿತರರು ಹಾಜರಿದ್ದರು.
Comments are closed.