ದುಬೈ: ಮಾನವ ಇತಿಹಾಸದಲ್ಲಿ ಲೌಕಿಕ ಮತ್ತು ಪಾರಮಾರ್ಥ್ಯಗಳಲ್ಲಿ ಔನ್ನತ್ಯ ಸಾಧಿಸಲು ಅತ್ಯವಶ್ಯಕವಾದ ಶಕ್ತಿ ಸಂದೇಶವನ್ನು ನೀಡಿದ ಮಹಾನ್ ಆಧ್ಯಾತ್ಮ ಗುರು ಸ್ವಾಮಿ ವಿವೇಕಾನಂದರು.
ಮಾನವೋತ್ಥಾನಕ್ಕೆಅಗತ್ಯವಾದಜೀವನ ಸಂಹಿತೆಯನ್ನು ಸನಾತನತ ತತ್ವಾಧಾರಿತ ಮೌಲ್ಯದ ಗಣಿಯಿಂದ ಹೊರತೆಗೆದು ಜಗತ್ತಿಗೆ ಉಣಬಡಿಸಿದ ವಿವೇಕಾನಂದರು ಸರ್ವರಿಂದಲೂ ಅಧ್ಯಯನಗೊಳ್ಳಲ್ಪಡಬೇಕು. ವಿವೇಕಾನಂದರ ಸಮರ್ಪಕ ಅಧ್ಯಯನದಿಂದ ವಿಶ್ವ ಕುಟುಂಬ-ವಸುಧೈವಕುಟುಂಬಕಂ ಪುನಃ ಪ್ರತಿಷ್ಠಾಪಿಸಲು ಸಾಧ್ಯ ಎಂದು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿನಿರ್ಭಯಾನಂದ ಸರಸ್ವತೀ ಶ್ರೀ ಅಭಿಪ್ರಾಯಪಟ್ಟರು.
ದುಬೈ ನಗರದಲ್ಲಿನ ಅನಿವಾಸಿ ಭಾರತೀಯರ ಸದಾಪೇಕ್ಷೆಯಂತೆ ಸ್ವಾಮಿ ವಿವೇಕಾನಂದರ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.
ಅತಿಥಿಗಳಾಗಿದ್ದ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ ಮಾತನಾಡಿ, ವಿವೇಕಾನಂದರ ಅಧ್ಯಯನದಿಂದಷ್ಟೇ ಭಾರತವನ್ನು ಸಮರ್ಪಕವಾಗಿ ಅರಿಯಲು ಸಾಧ್ಯವೆಂಬುದು ಏಷ್ಯಾಖಂಡದ ಪ್ರಥಮ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರರ ಅಭಿಪ್ರಾಯವಾದರೆ ಸ್ವಾಮಿ ವಿವೇಕಾನಂದರು ಆಧುನಿಕ ಜಗತ್ತಿನ ನಿರ್ಮಾಪಕರೆಂಬುದು ವಿಶ್ವವಿಖ್ಯಾತ ಇತಿಹಾಸಜ್ಞ ಶ್ರೀಬಾಮ್ ರವರ ಉದ್ಗಾರ. ಕೊಲಂಬಸ್ ಅಮೇರಿಕಾದ ಜಡನೆಲವನ್ನು ಕಂಡುಹಿಡಿದರೆ, ವಿವೇಕಾನಂದರು ಅಮೇರಿಕನ್ನರಿಗೆ ಚೈತನ್ಯವನ್ನು ಪರಿಚಯಿಸಿದವರು. ಆದ್ದರಿಂದ ವಿವೇಕಾನಂದರನ್ನು ಅಧ್ಯಯನ ಮಾಡುವುದರಿಂದ ಮಾನವಾಭ್ಯುದಯದ ಮಹಾಪಥದಲ್ಲಿ ಪಯಣಿಸುವಂತಾಗುತ್ತದೆ ಎಂದರು.
ಆಹ್ವಾನಿತರಾಗಿದ್ದ ರಾಮನಗರ ಜಿಲ್ಲೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ಪರಮಾನಂದಜೀ ಮಹಾರಾಜ್ ಅವರು ವಿವೇಕಾನಂದ ಅಧ್ಯಯನ ಕೇಂದ್ರದಯೋಗ್ಯ ನಿರ್ವಹಣೆಗೆ ಅತ್ಯವಶ್ಯಕವಾದ ನಡವಳಿಕೆ ಹಾಗೂ ನಿಯಮಗಳ ಪರಿಚಯಿಸಿ ಶುಭ ಹಾರೈಸಿದರು.
ಶ್ರೀಶಿವಾನಂದ ಸ್ವಾಗತಿಸಿದರು, ಚಿ.ಪರೇಶ್ ಭಾರದ್ವಾಜ್ ವಿವೇಕಾನಂದ ಬೋಧನೆಯನ್ನು ವಾಚಿಸಿದರು ಮತ್ತು ಶ್ರೀಲಕ್ಷ್ಮೀಶ್ ವಂದಿಸಿದರು.
ಭಜನೆ, ಪ್ರವಚನ ಮತ್ತು ಸಂವಾದದಲ್ಲಿ ಶ್ರೋತೃಗಳು ಅತ್ಯಂತ ಶ್ರದ್ಧೆಯಿಂದ ಪಾಲ್ಗೊಂಡರು.
Comments are closed.