ತುಮಕೂರು: ಜಿಲ್ಲೆಯ ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದರಿರುವ ಬೆಳೆಗಳನ್ನು ಉಳಿಸಿಕೊಳಲ್ಕು ದಿನದಲ್ಲಿ ಕನಿಷ್ಠ ಏಳು ಗಂಟೆ ತ್ರಿಪೇಸ್ ವಿದ್ಯುತ್ ನೀಡಬೇಕು ಎಂದು ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ರಾಜ್ಯದ ಉಪಾಧ್ಯಕ್ಷ ಎ.ಗೋವಿಂದರಾಜು ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ನಗರದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಬೆಸ್ಕಾಂ ವತಿಯಿಂದ ರೈತರ ಪಂಪ್ ಸೆಟ್ ಗಳಿಗೆ ನಿರಂತರ ಐದು ಗಂಟೆಗಳ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡುವ ಸಂಬಂಧ ರೈತ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದಾಗಿ ಜಿಲ್ಲೆಯ 10 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ, ಹಾಗಾಗಿ ಹೇಮಾವತಿ ನೀರನ್ನೇ ನಂಬಿದ್ದ ಸುಮಾರು 2010 ಕೆರೆಗಳಿಗೆ ನೀರಿಲ್ಲದಂತಾಗಿದೆ, ಜಿಲ್ಲೆಯಲ್ಲಿ ಇರುವ ಸುಮಾರು 3 ಲಕ್ಷ ಕೊಳವೆ ಬಾವಿಗಳಿಂದ 20 ಟಿಎಂಸಿ ನೀರೆತ್ತಿ ಸುಮಾರು ಆರು ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು, ಅಡಿಕೆ. ಜೋಳ, ಭತ್ತ, ರಾಗಿ ಇನ್ನಿತರ ತೋಟಗಾರಿಕಾ ಬೆಳೆ ಬೆಳೆದಿದ್ದು, ಸರಕಾರ ನೀಡಿದ ಭರವಸೆಯಂತೆ 7 ಗಂಟೆ ವಿದ್ಯುತ್ ನೀಡಿದರೆ ಮಾತ್ರ ಬೆಳೆ ಉಳಿಸಿಕೊಳ್ಳಲು ಸಾಧ್ಯ ಎಂದರು.
ಸರಕಾರ ವಿದ್ಯತ್ ಉತ್ಪಾದನೆಯ ಕೊರತೆಯ ನೆಪ ಹೇಳಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದು ಇದು ರೈತರನ್ನು ಆತಂಕಕ್ಕೀಡ ಮಾಡಿದೆ, ಅಕ್ಟೋಬರ್ ಮಾಹೆಯಲ್ಲಿಯೇ ಈ ಪರಿಸ್ಥಿತಿಯಾದರೆ ಮುಂದಿನ ದಿನಗಳು ಹೇಗೆ ಎಂಬ ಭಯ ಎಲ್ಲರನ್ನು ಕಾಡುತ್ತಿದೆ, ರೈತ ಬೆಳೆದರೆ ಮಾತ್ರ ಅನ್ನ, ಹಾಗಾಗಿ ಕೈಗಾರಿಕೆಗಳಿಗೆ ನೀಡುವ ಒತ್ತನ್ನು ಕೃಷಿಗೂ ನೀಡಬೇಕು, ಲಭ್ಯವಿರುವ ಕಡೆ ಖರೀದಿಸಿ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ ರೈತರು ತಮ್ಮ ಪಂಪ್ ಸೇಟ್ ಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರು ಇದುವರೆಗೂ ಅವರಿಗೆ ಸಂಪರ್ಕ ಕಲ್ಪಿಸಿಲ್ಲ, ಸರಕಾರ ಇವರಿಗೆ ಸಂಪರ್ಕ ಕಲ್ಪಿಸಿದರೆ ವಿದ್ಯುತ್ ಉಳಿತಾಯವಾಗಲಿದೆ, ಇದರ ಜೊತೆಗೆ ಹೊಸ ಸಂಪರ್ಕವನ್ನು ಸಂಪೂರ್ಣವಾಗಿ ರೈತರೇ ಶೇ.10 ರ ಸರ್ವಿಸ್ ಚಾರ್ಜ್ ನೊಂದಿಗೆ ಭರಿಸುವಂತೆ ಮಾಡಿರುವ ಆದೇಶ ರದ್ದು ಪಡಿಸಿ ಈ ಹಿಂದಿನಂತೆ ರಿಯಾಯಿತಿ ದರದಲ್ಲಿ ಸಂಪರ್ಕ ಕಲ್ಪಿಸಬೇಕೆಂದು ಮುಖ್ಯ ಇಂಜಿನಿಯರ್ ಹಾಗೂ ತುಮಕೂರು ಜಿಲ್ಲಾ ನೋಡಲ್ ಅಧಿಕಾರಿ ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.
ಐದಾರು ರೈತರು ಸೇರಿ ಹೆಚ್ಚಿನ ಸಾಮರ್ಥ್ಯದ ಟಿಸಿ ಅಳವಡಿಸಿಕೊಳ್ಳಲು ಅವಕಾಶ, ಉಪ ಸ್ಥಾವರಗಳ ಓವರ್ ಲೋಡ್ ತಪ್ಪಿಸಲು ಉಪ ಸ್ಥಾವರಗಳ ಸಂಖ್ಯೆ ಹೆಚ್ಚಳ, 11 ಕೆವಿ ಸ್ಟೇಷನ್ ಗಳ ಮೇಲ್ದರ್ಜೆಗೆರಿಸುವುದು, 220 ಸ್ಟೇಷನ್ ಗಳ ಹೆಚ್ಚಳ ಸೇರಿದಂತೆ ರೈತರು ಅನುಭವಿಸುತ್ತಿರುವ ಹಲವಾರು ವಿದ್ಯುತ್ ಸಮಸ್ಯೆಗಳನ್ನು ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಎಳೆ ಎಳೆಯಾಗಿ ಅಧಿಕಾರಿಗಳ ಮುಂದೆ ಬಿಡಿಸಿಟ್ಟರು.
ಇದಕ್ಕೆ ಪೂರಕವೆಂಬಂತೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಶಂಕರಪ್ಪ, ಶಬ್ಬೀರ್ ಪಾಷಾ ಸೇರಿದಂತೆ ಹಲವರು ರೈತರಿಗೆ ಬೆಸ್ಕಾಂ ನಿಂದ ಆಗುತ್ತಿರುವ ಸಮಸ್ಯೆ ಗಮನಕ್ಕೆ ತಂದರು.
ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದ ಬೆಸ್ಕಾಂ ಸಿಇ, ನೋಡಲ್ ಅಧಿಕಾರಿ ಮಂಜುನಾಥ್, ರಾಜ್ಯದಲ್ಲಿ ಒಂದು ದಿನಕ್ಕೆ 15 ರಿಂದ 16 ಸಾವಿರ ಮೇ. ವ್ಯಾ ವಿದ್ಯುತ್ ಬೇಡಿಕೆಯಿದ್ದು, ಸದ್ಯ 9 ರಿಂದ 10 ಸಾವಿರ ಮೇ. ವ್ಯಾ ಮಾತ್ರ ಲಭ್ಯವಿದೆ, ಇದರಲ್ಲಿ ಕೈಗಾರಿಕೆ, ಮನೆಗಳಿಗೆ, ರೈತರ ಪಂಪ್ ಸೆಟ್ ಗಳಿಗೆ ಹಂಚಿಕೆ ಮಾಡಬೇಕು, ಹಾಗಾಗಿ ಲಭ್ಯವಿರುವ ವಿದ್ಯುತ್ ನಲ್ಲಿ ಬೆಳಗಿನ ಹೊತ್ತು ಮೂರು ಗಂಟೆ ರಾತ್ರಿ ವೇಳೆ ಎರಡು ಗಂಟೆ ಸೇರಿ ದಿನದಲ್ಲಿ ಐದು ಗಂಟೆ ವಿದ್ಯುತ್ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ, ಅಲ್ಲದೆ ಬೇಡಿಕೆ ಪೂರೈಸಲು ಹಿಮಾಚಲ ಪ್ರದೇಶದಿಂದ ವಿದ್ಯುತ್ ಖರೀದಿಸಲಾಗುತ್ತಿದೆ, ಅಲ್ಲದೆ ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಖರೀದಿಸಲು ಸರಕಾರ ಮುಂದಾಗಿದೆ, ಮುಂದಿನ ದಿನಗಳಲ್ಕಿ ವಿದ್ಯುತ್ ಲಭ್ಯವಾದರೆ ಏಳು ಗಂಟೆ, ಇಲ್ಲವೇ ಸರಕಾರ ನಿಗದಿಪಡಿಸಿದಂತೆ ಐದು ಗಂಟೆ ತ್ರಿಪೇಸ್ ಗುಣಮಟ್ಟದ ವಿದ್ಯುತ್ ನೀಡಲು ಕ್ರಮ ವಹಿಸಲಾಗುವುದು ಎಂದರು.
ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕೇಶ್ ಮಾತನಾಡಿ, ಜಿಲ್ಲೆಗೆ ದಿನಕ್ಕೆ 900 ಮೆ. ವ್ಯಾಟ್ ವಿದ್ಯುತ್ ಅಗತ್ಯವಿದೆ, ಆದರೆ ಲಭ್ಯವಿರುವುದು 650 ರಿಂದ 700 ಮಾತ್ರ, ಹಾಗಾಗಿ ಸಿಪ್ಟ್ ವಹಿ ರೈತರ ಪಂಪ್ ಸೆಟ್ ಗಳಿಗೆ ಹಗಲಿನಲ್ಲಿ ಮೂರು ಗಂಟೆ ಇರುಳಿನಲ್ಲಿ ಎರಡು ಗಂಟೆ ವಿದ್ಯುತ್ ನೀಡಲು ಎಲ್ಲಾ ಕ್ರಮ ವಹಿಸಲಾಗಿದೆ, ಸಮರ್ಪಕ ವಿದ್ಯುತ್ ಸರಬರಾಜಿಗೆ ಉಪ ಸ್ಥಾವರಗಳ ಹೆಚ್ಚಳ, 220 ಕೆವಿ ಸ್ಟೇಷನ್ ಗಳ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ, ರೈತರು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಬೆಸ್ಕಾಂ ಇಇ ಗಳಾದ ಸೈಯದ್ ಮಹಮೂದ್, ಅನಂತರಾಮಯ್ಯ, ಜಯದೇವಪ್ಪ, ಅನಂತ ಲಕ್ಷ್ಮಿ, ಪ್ರಶಾಂತ್ ಕೂಡ್ಲಗಿ, ಜಗದೀಶ್.ಜಿ, ಎಲ್ಲಾ ಎಇಇ ಮತ್ತು ರೈತ ಮುಖಂಡರು ಪಾಲ್ಗೊಂಡಿದ್ದರು.
Comments are closed.