ಹೈನುಗಾರಿಕೆ, ರೇಷ್ಮೆಯಿಂದ ರೈತರಿಗೆ ಲಾಭ

85

Get real time updates directly on you device, subscribe now.


ತುಮಕೂರು: ರೈತರು ಏಕ ಬೆಳೆ ಪದ್ಧತಿಗೆ ಮಾರು ಹೋಗದೆ ಕೃಷಿಯಲ್ಲಿ ಬಹು ಬೆಳೆ ಪದ್ದತಿಯ ಜೊತೆಗೆ, ಹೈನುಗಾರಿಕೆ ಮತ್ತು ರೇಷ್ಮೆಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ತಿಳಿಸಿದ್ದಾರೆ.

ನಗರದ ಅಮರ ಜೋತಿ ನಗರದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ರೇಷ್ಮೆ ಇಲಾಖೆ, ರೇಷ್ಮೆ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕೃಷಿ ಸಿಂಚಯ್ ಯೋಜನೆಯಡಿ ರೇಷ್ಮೆ ತಾಕುಗಳಿಗೆ ಹನಿ ನೀರಾವರಿ ಅಳವಡಿಸುವುದರ ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ ಇದ್ದರೆ ಮಾತ್ರ ಇಂದು ಕೃಷಿ ಲಾಭದಾಯಕವಾಗಿ ಪರಿಣಮಿಸಲಿದೆ ಎಂದರು.

ತುಮಕೂರು ಬಯಲು ಸೀಮೆಯ ಪ್ರದೇಶ, ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದಿದ್ದರೂ ಜನರು ಹೆಚ್ಚು ಆದಾಯ ಎಂಬ ಕಾರಣಕ್ಕೆ ಅಡಿಕೆ ಬೆಳೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ಇದು ಮುಂದೊಂದು ದಿನ ಅಪಾಯ ತಂದೊಡ್ಡಲಿದೆ, ಅಡಿಕೆ ನಮ್ಮ ಭೂ ಪ್ರದೇಶದಲ್ಲಿ ಬೆಳೆಯುವ ಬೆಳೆಯಲ್ಲ, ಹಾಗಾಗಿ ಬಯಲು ಸೀಮೆಯಲ್ಲಿ ಬೆಳೆಯಬಹುದಾದ ಆಹಾರ ಬೆಳೆಗಳ ಜೊತೆಗೆ ತೋಟಗಾರಿಕೆಯಲ್ಲಿ ಡ್ರಾಗನ್ ಪ್ರೂಟ್, ಕಿರು ದಾನ್ಯಗಳನ್ನು ಬೆಳೆದು ಲಾಭ ಗಳಿಸಬಹುದು, ಬಹು ಬೆಳೆ ಪದ್ಧತಿಯಲ್ಲಿ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯಲಿದೆ, ಹಾಗಾಗಿ ರೈತರು ಅದರಲ್ಲಿಯೂ ಯುವ ರೈತರು ಈ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಮತ್ತು ಕೇಂದ್ರ ಸರಕಾರ ಹನಿ ನೀರಾವರಿ ಶೇ.70 ರಿಂದ 90ರ ವರೆಗೆ ಸಬ್ಸಿಡಿ ಘೋಷಿಸಿದೆ, ಹಾಯಿ ನೀರಾವರಿ ಪದ್ಧತಿಯಿಂದ ನೀರು ಪೋಲಾಗುವ ಜೊತೆಗೆ ನಾವು ಬಳಸುವ ಗೊಬ್ಬರ, ಲಘು ಪೋಷಕಾಂಶಗಳು ಸಮರ್ಪಕವಾಗಿ ಗಿಡಗಳಿಗೆ ದೊರೆಯವುದಿಲ್ಲ, ಆದರೆ ಹನಿ ನೀರಾವರಿಯಿಂದ ಈ ತೊಂದರೆಯಿಲ್ಲ, ಇದನ್ನು ರೈತರು ಅರ್ಥ ಮಾಡಿಕೊಂಡು ಹನಿ ನೀರಾವರಿ ಪದ್ಧತಿಯನ್ನು ರೇಷ್ಮೆ ಬೆಳೆಗೆ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಎರಡು ಮಳೆಗಳು ಕೈಕೊಟ್ಟಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ, ಹಾಗಾಗಿ ರೇಷ್ಮೆ ಬೆಳೆಗಾರರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಬರದಲ್ಲಿಯೂ ಸಂವೃದ್ದ ಹಿಪ್ಪುನೇರಳೆ ಸೊಪ್ಪು ಪಡೆಯಬಹುದು, ಬರಗಾಲ ರೇಷ್ಮೆ ಬೆಳೆಗೆ ಹೆಚ್ಚು ಸೂಕ್ತ ಕಾಲ, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಜಿಲ್ಲೆಯ ಸುಮಾರು 6300 ಹೆಕ್ಟೇರ್ ಪ್ರದೇಶದಲ್ಲಿ 11 ಸಾವಿರ ರೈತರು ರೇಷ್ಮೆ ಕೃಷಿ ನಡೆಸುತ್ತಿದ್ದು, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡಿರುವವರ ಸಂಖ್ಯೆ ಕೇವಲ 2300 ಜನ ಮಾತ್ರ, ಜಿಲ್ಲೆಗೆ ಶೇ.100 ರಷ್ಟು ಬೈವೊಲ್ಟಿನ್ ರೇಷ್ಮೆ ಬೆಳೆ ಪ್ರದೇಶವಾಗಬೇಕೆಂಬ ಸರಕಾರದ ಇಚ್ಚೆ ಪೂರ್ಣಗೊಳ್ಳಬೇಕಾದರೆ ಎಲ್ಲರೂ ಹನಿ ನೀರಾವರಿ ಅಳವಡಿಸಿಕೊಂಡು ಬೈವೊಲ್ಟಿನ್ ಗೂಡು ಬೆಳೆದರೆ ಹೆಚ್ಚಿನ ಸಂಪಾದನೆಯ ಜೊತೆಗೆ ಕೃಷಿಯಲ್ಲಿ ಉಳಿಯಬಹುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಕೆವಿಕೆ ಹಿರೇಹಳ್ಳಿ ಕೃಷಿ ವಿಜ್ಞಾನಿ ಡಾ.ಪ್ರಶಾಂತ್, ಕೊಡತಿ ಆರ್.ಎಸ್.ಆರ್.ಎಸ್ ನ ಡಾ.ಕುಲಕರ್ಣಿ, ರೇಷ್ಮೆ ಸಹಾಯಕ ನಿರ್ದೇಶಕ ಚೇತನ್, ಜಿಲ್ಲೆಯ ವಿವಿಧ ತಾಲೂಕುಗಳ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ಎ.ಸಿ.ನಾಗೇಂದ್ರ, ಬೊಮ್ಮಯ್ಯ, ಆರ್.ರಂಗನಾಥ್, ನಾಗರಾಜು, ಮುರುಳೀಧರ್, ರಾಜ್ ಗೋಪಾಲ್ ಹಾಗೂ ನೂರಾರು ರೇಷ್ಮೆ ಬೆಳೆಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!