ಬಾಲ್ಯ ವಿವಾಹದ ಸುಳಿಗೆ ಸಿಗದಂತೆ ಎಚ್ಚರವಾಗಿರಿ

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಿ: ಜಿಲ್ಲಾಧಿಕಾರಿ

93

Get real time updates directly on you device, subscribe now.


ತುಮಕೂರು: ಬಾಲ್ಯ ವಿವಾಹದಿಂದ ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸುವ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ, ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವುದಲ್ಲದೆ ತಾಯಿ- ಶಿಶು ಮರಣ ಹಾಗೂ ಅಪೌಷ್ಟಿಕ ಮಕ್ಕಳ ಜನನಕ್ಕೂ ಈ ಸಾಮಾಜಿಕ ಪಿಡುಗು ಕಾರಣವಾಗಲಿದೆ, ಆದುದರಿಂದ ವಿದ್ಯಾರ್ಥಿಗಳು ಬಾಲ್ಯ ವಿವಾಹ ಎಂಬ ಪಿಡುಗಿನ ಸುಳಿಗೆ ಸಿಗದೆ ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ನಗರದ ಜಿಲ್ಲಾ ನಗರ ಗ್ರಂಥಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ಪೋಷಕರು ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮಾಹಿತಿ ತಿಳಿದ ಕೂಡಲೇ ಸಹಾಯವಾಣಿ 1098 ಮತ್ತು 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು, ಆಗ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಮದುವೆ ನಿಲ್ಲಿಸುತ್ತಾರೆ ಎಂದರಲ್ಲದೆ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ 21 ಬಾಲ್ಯ ವಿವಾಹ ನಿಲ್ಲಿಸಲಾಗಿದೆ ಎಂದು ಹೇಳಿದರು.

ಮೊಟ್ಟ ಮೊದಲ ಬಾರಿಗೆ 1978ರಲ್ಲಿ ಹೆಣ್ಣಿನ ಮದುವೆ ವಯಸ್ಸನ್ನು 15 ವರ್ಷದಿಂದ 18 ವರ್ಷಕ್ಕೆ ಏರಿಕೆ ಮಾಡುವುದರ ಮೂಲಕ ಬಾಲ್ಯ ವಿವಾಹ ನಿಷೇಧ ಮಾಡಲು ಹೊಸ ಕಾನೂನು ಜಾರಿಗೆ ತರಲಾಯಿತು ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಜಾರಿಯಲ್ಲಿದ್ದ ಸತಿ ಸಹಗಮನ ಪದ್ಧತಿ ಹೋಗಲಾಡಿಸಲು ಹಲವಾರು ಹೋರಾಟ ನಡೆದ ಪರಿಣಾಮ ಅದನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಸಾಧ್ಯವಾಯಿತು, ಈಗ ಗಂಡು ಹೆಣ್ಣು ಸರಿ ಸಮಾನರು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಕೆ.ಬಿ.ಗೀತಾ ಮಾತನಾಡಿ, ಬಾಲ್ಯಾವಸ್ಥೆಯಲ್ಲಿರುವ ಮಕ್ಕಳಿಗೆ ತಮ್ಮ ಮುಂದಿನ ಜೀವನದ ಬಗ್ಗೆ ತಿಳಿದಿರುವುದಿಲ್ಲ, ಅಂತಹ 18 ವರ್ಷದೊಳಗಿನ ಮಕ್ಕಳಿಗೆ ಬಾಲ್ಯ ವಿವಾಹ ಮಾಡಿದರೆ ಅಂತಹವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವುದರ ಮೂಲಕ ಅವರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.
ತಮ್ಮ ಗ್ರಾಮಗಳಲ್ಲಿ ನಡೆಯುವ ಬಾಲ್ಯ ವಿವಾಹಗಳ ಮಾಹಿತಿಯನ್ನು ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ತಿಳಿಸಬೇಕು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಬಾಲ್ಯ ವಿವಾಹ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು, ನಿಮಗೆ ಏನೇ ಸಮಸ್ಯೆ ಆದರೂ ನ್ಯಾಯಾಲಯ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದರು.

ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿಗೆ ಮದುವೆ ಮಾಡುವುದರಿಂದ ಅವರಿಗೆ ಜನಿಸುವ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುವುದರ ಜೊತೆಗೆ ಅಂಗವಿಕಲತೆಯಿಂದ ಜನಿಸುವ ಸಾಧ್ಯತೆ ಹೆಚ್ಚು ಇರುತ್ತದೆ, ಬಾಲ್ಯ ವಿವಾಹ ತಡೆಯುವುದರ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಮ್ಮ ಮನೆಯ ಹಿರಿಯರಿಗೆ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಬೇಕು, ನಿಮ್ಮ ಗ್ರಾಮಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಗೊತ್ತಾದರೆ ನಮಗೆ ಮಾಹಿತಿ ನೀಡಿ ಅಥವಾ ಸಹಾಯವಾಣಿಗೆ ಕರೆ ಮಾಡಿ ಎಂದು ಹೇಳಿದರು.

ಕಾನೂನು ಮೀರಿ ಪೋಷಕರು ಬಾಲ್ಯ ವಿವಾಹ ಮಾಡಿದರೆ ಮಾಡಿಕೊಂಡವರ, ಮಾಡಿದವರ ಹಾಗೂ ಮದುವೆಯಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ, ಆದ್ದರಿಂದ ಯಾರು ಬಾಲ್ಯ ವಿವಾಹ ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮೊದಲು ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವುದರ ಜೊತೆಗೆ ಯಾವುದಾದರೂ ಒಂದು ಉದ್ಯೋಗ ಪಡೆದುಕೊಂಡ ನಂತರ ಮದುವೆ ಮಾಡಿಕೊಂಡರೆ ನೆಮ್ಮದಿಯಿಂದ ಜೀವನ ಮಾಡುವುದರೊಂದಿಗೆ ನಿಮ್ಮ ಮುಂದಿನ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯವಿವಾಹ ಸಂಪೂರ್ಣ ನಿಷೇಧ ಕಾಯ್ದೆಯನ್ನು 2006- 07ರಲ್ಲಿ ಜಾರಿಗೆ ತರಲಾಯಿತು, ಇದರಲ್ಲಿ 21 ಸೆಕ್ಷನ್ ಗಳಿವೆ ಎಂದು ಹೇಳಿದರು.

2016ರ ಕಾಯ್ದೆ ಸೆಕ್ಷನ್ 5ರ ಪ್ರಕಾರ ಎಲ್ಲಿಯಾದರೂ ಬಾಲ್ಯ ವಿವಾಹ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ದಾವೆ ಹೂಡಿದರೆ ಅದನ್ನು ನಿಲ್ಲಿಸಲು ತಡೆಯಾಜ್ಞೆ ನೀಡುವ ಅಧಿಕಾರ ನ್ಯಾಯಾಲಯಕ್ಕಿದೆ ಎಂದು ಹೇಳಿದರು.
ಹೊಸ ಕಾಯ್ದೆ ತಿದ್ದುಪಡಿ ನಂತರ ಪೋಕ್ಸೋ ಪ್ರಕರಣದಡಿ ಬಂಧನವಾಗಿರುವವರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದರಲ್ಲದೆ, ಪೊಲೀಸ್ ಇಲಾಖೆಯವರು ಸುಮೊಟೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅವರಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ, ತುಮಕೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡೋಣ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನುಷಾ ಪ್ರತಿಜ್ಞಾವಿಧಿ ಬೋಧಿಸಿದರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಉಪ ನಿರ್ದೇಶಕ ಎಂ.ಎಸ್.ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!