ಕುಣಿಗಲ್: ತುಮಕೂರು ಜಿಲ್ಲೆ ಅತಿ ಹೆಚ್ಚು ತೆಂಗು ಉತ್ಪಾದಿಸುವ ಜಿಲ್ಲೆಯಾಗಿದ್ದು, ಕಲ್ಪತರು ನಾಡು ಎಂದು ಪ್ರಸಿದ್ಧಿಯಾಗಿದೆ, ತಾಲೂಕಿನ ರೈತರು ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ತೆಂಗು ಉತ್ಪಾದನೆಯಲ್ಲಿ ಲಾಭದಾಯಕ ಉದ್ದಿಮೆಯಾಗಿಸಿ ಕೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿರ್ದೇಶಕಿ ಜಿ.ಕೆ.ಅನುಸೂಯಮ್ಮ ಹೇಳಿದರು.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಬುಕ್ಕಸಾಗರ ಗ್ರಾಮದಲ್ಲಿ ಕುಣಿಗಲ್ ತೆಂಗು ಉತ್ಪಾದಕರ ಕಂಪನಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ತೆಂಗಿನಲ್ಲಿ ಹೆಚ್ಚುವರಿ ಉತ್ಪಾದನೆ, ಸಾವಯವ ಕೃಷಿ ಹಾಗೂ ಲಾಭದಾಯಕ ಮಾರಾಟ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತೆಂಗು ಉತ್ಪಾದನೆ ಸೇರಿದಂತೆ ತೆಂಗಿನ ಬಳಕೆ, ತೆಂಗಿನ ಉಪ ಉತ್ಪನ್ನಗಳ ಲಾಭದಾಯಕ ಬಳಕೆ ಹೆಚ್ಚಾಗಿದೆ, ಸುಧಾರಿತ ತಂತ್ರಜ್ಞಾನವನ್ನು ತಾಲೂಕಿನ ರೈತರು ತೆಂಗು ಉತ್ಪಾದಕ ಕಂಪನಿ ಸೇರಿದಂತೆ ಇತರೆ ಸಂಸ್ಥೆಗಳೊಂದಿಗೆ ಆಯೋಜಿಸಲಾಗುವ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತೆಂಗು ಕೃಷಿ ಉದ್ಯಮದಲ್ಲಿ ಲಾಭ ಗಳಿಸುವ ಮೂಲಕ ತೆಂಗು ಹಾಗೂ ತೆಂಗಿನ ಉಪ ಉತ್ಪನ್ನಗಳನ್ನು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಉತ್ಪಾದಿಸಿ ಉದ್ದಿಮೆ ಮತ್ತಷ್ಟು ಲಾಭ ಗಳಿಸುವಂತೆ ಮಾಡಿಕೊಳ್ಳಬೇಕು, ಸಾಂಪ್ರದಾಯಕ ಕೃಷಿ ಪದ್ಧತಿಗೆ ಮಾರು ಹೋಗದೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯಾಗಿರುವ ಅಗಾಧ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು, ಅಲ್ಲದೆ ತೆಂಗು ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸಿ ರೂಪಿಸಿಕೊಳ್ಳುವುದು ತೆಂಗು ಬೆಳೆಗಾರರ ಕೈಯಲ್ಲಿದೆ ಎಂದರು.
ತೆಂಗು ಉತ್ಪಾದಕರ ಕಂಪನಿಯ ಅಧ್ಯಕ್ಷರು ಹಾಗೂ ಬೆಂಗಳೂರು ಜಿಕೆವಿಕೆ ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣ ಗೌಡ, ತೆಂಗು ಉತ್ಪಾದಕರಿಗೆ ಪ್ರಸ್ತುತವಾಗಿ ತೆಂಗು ಉತ್ಪಾದಕರ ಕಂಪನಿ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಮಾರುಕಟ್ಟೆ ವಿಸ್ತರಣೆ ಬಗ್ಗೆ ಹಲವು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಭಾಗ್ಯಲಕ್ಷ್ಮಿ, ತಿಪಟೂರು ಜಿವಿಕೆ ಹಿರಿಯ ವಿಜ್ಞಾನಿ ಡಾ.ಗೋವಿಂದೇಗೌಡ, ವಿಜ್ಞಾನಿಗಳಾದ ಡಾ.ನಿತ್ಯಶ್ರೀ, ಮನೋಜ್ ಹಾಗೂ ಸಾವಯವ ಕೃಷಿ ತಜ್ಞ ಕೆ.ಆರ್.ಹುಲ್ಲ ನಾಚೇಗೌಡ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು, ಬುಕ್ಕಸಾಗರ ಸೇರಿದಂತೆ ಸುತ್ತಮುತ್ತಲ ಗ್ರಾಮದ ತೆಂಗು ಬೆಳೆಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Comments are closed.