ತುಮಕೂರು: ಬೋಧನೆ-ಸಂಶೋಧನೆ ವಿಶ್ವವಿದ್ಯಾನಿಲಯಗಳ ಧ್ಯೇಯವಾಗಬೇಕು, ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಪ್ರಚಾರ ಪಡಿಸುವ ಜಾವಾಬ್ದಾರಿ ಹೊತ್ತಾಗ ಮಾತ್ರವೇ ಜನಸಾಮಾನ್ಯರಿಗೂ ವಿಜ್ಞಾನ ತಲುಪುವುದು ಎಂದು ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ, ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 17ನೇ ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವುದು, ಪ್ರಬಂಧಗಳನ್ನು ಬರೆಸುವುದು, ಅಧ್ಯಯನ ಸಂಶೋಧನೆಯಿಂದ ವಿಜ್ಞಾನವನ್ನುಎಲ್ಲರಿಗೂ ತಲುಪುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ ಕಾರ್ಯವಾಗಬೇಕು, ಗಾಂಧೀಜಿಯವರು ಹೇಳಿದಂತೆ ಮಾನವತ ಶೂನ್ಯ ವಿಜ್ಞಾನ ಮಹಾಪಾಪ, ಮಾನವ ನಾಶಕ್ಕಾಗಿ ವಿಜ್ಞಾನ ಬೇಡ, ಪ್ರಕೃತಿಗಾಗಿ, ಮನುಷ್ಯನಿಗಾಗಿ, ಸಕಲ ಜಲಚರಗಳಿಗಾಗಿ ಒಳಿತಾಗುವ, ಮಾನವ ಕಲ್ಯಾಣಕ್ಕೆ ಪೂರಕವಾಗುವ ವಿಜ್ಞಾನದ ಅಗತ್ಯ ಎಂದರು.
ಕನ್ನಡದ ಮೂಲಕ ವಿಜ್ಞಾನ ಪಸರಿಸುವ ಕೆಲಸ ನಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸುತ್ತದೆ, ವಿಜ್ಞಾನದ ಭಾಷೆಯನ್ನು ಮಕ್ಕಳು ಅರ್ಥೈಸಿಕೊಂಡರೆ ಸಂಶೋಧನೆಗಳ ಮಹಾಪೂರವೇ ಹರಿದುಬರಲಿದೆ, ಆವಿಷ್ಕಾರಗಳು ದೇಶವನ್ನು ಬಲಪಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಬಿ.ಎನ್.ಸುರೇಶ್, ವಿಜ್ಞಾನ- ತಂತ್ರಜ್ಞಾನ ಮೇಳೈಸಿದರೆ ಪ್ರಗತಿ ಹೊಂದಬಹುದು, ಉಪಕರಣಗಳ ಆವಿಷ್ಕಾರಗಳಿಂದ ದೇಶ ಮುಂದುವರೆಯಲು ಸಾಧ್ಯ, ಕಳೆದ ಐದು ದಶಕಗಳಲ್ಲಿ ಭಾರತದ ಸಾಧನೆ ಗಮನಾರ್ಹ, ದೇಶದ ಆರ್ಥಿಕತೆ ವಿಶ್ವದ 5ನೇ ಸ್ಥಾನದಲ್ಲಿದೆ ಎಂದರು.
ವಿಜ್ಞಾನವು ಜ್ಞಾನ ಹೆಚ್ಚಿಸಿ, ತಂತ್ರಜ್ಞಾನದ ಸಂಕೇತದಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಲಭಿಸುವಂತಹ ಆವಿಷ್ಕಾರಗಳಾಗುತ್ತವೆ, ಔಷಧಿಗಳ ರಾಜಧಾನಿಯಾಗಿರುವ ಭಾರತ ಗುಣಮಟ್ಟದಲ್ಲಿ ವಿಶ್ವಕ್ಕೆ ಪ್ರಥಮ ಸ್ಥಾನದಲ್ಲಿದೆ, ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿ ಹೊಂದುತ್ತಿದೆ, ವಿಶ್ವದ ಅತೀ ಹೆಚ್ಚು ಸಂಶೋಧನ ಪ್ರಬಂಧ ಮಂಡಿಸಿರುವ ದೇಶಗಳಲ್ಲಿ ಭಾರತ 3ನೇ ಸ್ಥಾನದಲ್ಲಿದೆ, ಇವೆಲ್ಲಕ್ಕೂ ವಿಜ್ಞಾನವೇ ಕಾರಣ ಎಂದು ತಿಳಿಸಿದರು.
ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ, ಜನಸಂಖ್ಯೆ ಏರುತ್ತಿದೆ, ವಾತಾವರಣದ ಬದಲಾವಣೆಯಲ್ಲಿ ಏರುಪೇರಾಗುತ್ತಿದೆ, ಮುಂದಿನ ಪೀಳಿಗೆಯವರಿಗೆ ವಿಜ್ಞಾನವನ್ನು ಕಡ್ಡಾಯವಾಗಿ ಅಭ್ಯಸಿಸುವ ಕಾಲ ಬಂದಿದೆ, ವಿಜ್ಞಾನದಿಂದ ಮಾತ್ರ ಏಳ್ಗೆ, ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಕಷ್ಟಗಳನ್ನು ಕಾಣದೆ ಆಸೆಗಳನ್ನು ನೆರವೇರಿಸಿಕೊಳ್ಳುತ್ತಿರುವ ಶತಮಾನದಲ್ಲಿರುವ ನಮ್ಮ ಯುವ ಪೀಳಿಗೆಗೆ ವಿಜ್ಞಾನದಿಂದಷ್ಟೇ ಬದುಕು ಸಾಧ್ಯವೆಂದು ತಿಳಿಯುವ ಕಾಲ ಸನಿಹದಲ್ಲಿದೆ, ಹೊಟ್ಟೆಯಲ್ಲಿ ಹಸಿವಿದ್ದಾಗ ಮಾತ್ರ ಸಾಧನೆಗೆ ಸ್ಫೂರ್ತಿ ಬರುವುದು ಎಂದು ಹೇಳಿದರು.
ಕರ್ನಾಟಕದಲ್ಲಿ ವಿಜ್ಞಾನ ಕನ್ನಡೀಕರಣ ಆಗುತ್ತಿರುವುದು ಸಂತೋಷದ ವಿಷಯ, ಶೈಕ್ಷಣಿಕ ಸಂಸ್ಥೆಗಳು ವಿಜ್ಞಾನದ ಬೆಳವಣಿಗೆಗೆ ಕೈಜೋಡಿಸಬೇಕು, ಯುವ ಪ್ರತಿಭೆಗಳು ಅರಳಬೇಕು, ವಿಜ್ಞಾನದ ಭಾಷೆ ಪ್ರಾದೇಶಿಕರಣಗೊಳ್ಳಬೇಕು, ಕನ್ನಡದಲ್ಲಿ ವಿಜ್ಞಾನ ಬೆಳೆಯಬೇಕು ಎಂದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಸಮ್ಮೇಳನಗಳ ಗುರಿ ಆವಿಷ್ಕಾರಗಳನ್ನು ಪೋಷಿಸುವಂತಿರಬೇಕು, ಇದರಿಂದ ತಂತ್ರಜ್ಞಾನ ಬೆಳವಣಿಗೆಯ ಸಾಧನೆಯಾಗಲಿದೆ, ಜನ ಸಾಮಾನ್ಯರಿಗೆ ತಲುಪುವಂತಹ ವಿಜ್ಞಾನದ ಅವಶ್ಯಕತೆಯಿದೆ, ಭಾಷೆಯ ಮೇಲೆ ನಿರ್ಲಕ್ಷ್ಯ ಬೇಡ, ನಮ್ಮ ಭಾಷೆಯಲ್ಲಿ ವಿಜ್ಞಾನ ಅರ್ಥ ಮಾಡಿಕೊಂಡು ಅದನ್ನು ದೇಶದ ಅಭಿವೃದ್ಧಿಗೆ ಸಾಧನವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ಭಾರತಿಯ ಉಪಾಧ್ಯಕ್ಷ ಡಾ.ಸತೀಶ್ ಶೆಣೈ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿಜ್ಞಾನದ ಸಫಲತೆ ಮುಟ್ಟಬೇಕು, ವಿಜ್ಞಾನ ಮಾದರಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಶಿಕ್ಷಣ ಸಂಸ್ಥೆಗಳದ್ದಾಗಿರಬೇಕು, ಚಂದ್ರನನ್ನು ಮುಟ್ಟಿದ್ದಾಯಿತು, ಚಂದ್ರನ ಮೇಲೆ ಮಾನವ ಕಾಲಿಡುವ ಸಮಯ ವಿಜ್ಞಾನದಿಂದ ಒದಗಿ ಬಂದಿದೆ, ವಿಜ್ಞಾನದಿಂದಷ್ಟೇ ಮುಂದಿನ ಹಂತದ ಆತ್ಮವಿಶ್ವಾಸ ಬರಲು ಸಾಧ್ಯ, ಪ್ರಾಥಮಿಕ ಯೋಚನಾ ಶಕ್ತಿ ಪ್ರಾದೇಶಿಕ ಭಾಷೆಗಳಿಂದ ಬರುತ್ತದೆ ಎಂದರು.
2023ನೇ ಸಾಲಿನ ಭಾರತರತ್ನ ಡಾ.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಡಿ ಆರ್ ಡಿ ಓ ನಿರ್ದೇಶಕ ಡಾ.ಟಿ.ಎಂ.ಕೊಟ್ರೇಶ್ ಅವರಿಗೆ, ಡಾ. ಭೀಮ್ ಸೇನ್ ಜೋಶಿ ಸಾಂಸ್ಕೃತಿಕ ವಿಜ್ಞಾನ ಪುರಸ್ಕಾರವನ್ನು ಕರ್ನಾಟಕ ಸಂಗೀತ ವಿದ್ವಾಂಸ ವಿದ್ವಾನ್ ಎಸ್.ಶಂಕರ್ ಅವರಿಗೆ, ಡಾ.ಸಿ.ಎನ್.ಆರ್.ರಾವ್ ವಿಜ್ಞಾನ ಪುರಸ್ಕಾರವನ್ನು ಹಿರಿಯ ವಿಜ್ಞಾನಿ ಹಾಗೂ ಐಐಎಸ್ ಸಿ ಪ್ರಾಧ್ಯಾಪಕ ಡಾ.ಎಂ.ಎಂ.ನಾಯಕ್ ಅವರಿಗೆ ನೀಡಿ ಗೌರವಿಸಲಾಯಿತು.
ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕದ ಅಧ್ಯಕ್ಷ ಕ್ಯಾಪ್ಟನ್ ಕಾರ್ಣಿಕ್, ಪ್ರಧಾನ ಕಾರ್ಯದರ್ಶಿ ರಮೇಶ್.ಎಚ್, ಕಾರ್ಯಧ್ಯಕ್ಷ ಡಾ.ಸಿ.ರೇಣುಕಾ ಪ್ರಸಾದ್, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ, ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ, ಡಾ.ಮಂಗಳಾ ಗೌರಿ.ಎಂ. ಭಾಗವಹಿಸಿದ್ದರು.
Comments are closed.