ತುಮಕೂರು: ಕ್ರೀಡೆಗಳು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಅತ್ಯವಶ್ಯಕವಾಗಿದ್ದು, ಇದರಿಂದ ಮನುಷ್ಯ ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಿಕೊಳ್ಳಬಹುದಾಗಿದೆ, ಆದುದರಿಂದ ಸರ್ಕಾರಿ ನೌಕರರು ತಮ್ಮ ಕೆಲಸದ ಒತ್ತಡದ ನಡುವೆಯೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿ ಹುದುಗಿರುವ ಪ್ರತಿಭೆ ಹೊರ ಹೊಮ್ಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಮಕೂರು ಜಿಲ್ಲೆ ಎಂದಿಗೂ ಸಹ ಕ್ರೀಡೆಗೆ ಪ್ರೋತ್ಸಾಹ ನೀಡುತ್ತದೆ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳನ್ನು ಜಿಲ್ಲೆ ಕೊಡುಗೆಯನ್ನಾಗಿ ನೀಡಿದೆ, ಇತ್ತೀಚೆಗೆ ಪ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಜಿಲ್ಲೆಯ ಹಾಲನೂರಿನ ಪ್ರಿಯಾ ಎಂಬ ಬಾಲಕಿ ಚಿನ್ನದ ಪದಕ ಗಳಿಸಿ ಜಿಲ್ಲೆಯ ಘನತೆ ಎತ್ತಿ ಹಿಡಿದಿದ್ದಾಳೆ ಎಂದು ಸ್ಮರಿಸಿದರು.
ತಾವೂ ಕೂಡ ಉತ್ತಮ ಕ್ರೀಡಾಪಟುವಾಗಿದ್ದು, ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿರುವುದಾಗಿ ತಿಳಿಸಿದ ಸಚಿವರು ಕ್ರೀಡೆ ಇಂದು ಜನಸಮುದಾಯದ ಮನಸ್ಸನ್ನು ಸೆಳೆದಿದೆ, ಮನಸ್ಸಿನ ಏಕಾಗ್ರತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದರು.
ಸೋತಾಗ ಮನಸ್ಸಿಗೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ಸೋಲು ಒಪ್ಪಿಕೊಂಡು ಮುನ್ನೆಡೆಯುವುದನ್ನು ಕ್ರೀಡೆ ಕಲಿಸುತ್ತದೆ, ಅಂತೆಯೇ ಜೀವನದ ಸೋಲನ್ನೂ ಸಹ ಒಪ್ಪಿಕೊಂಡು ಜೀವನದಲ್ಲಿ ಮುನ್ನುಗ್ಗುವುದನ್ನೂ ಕ್ರೀಡೆ ಕಲಿಸುತ್ತದೆ ಎಂದರು.
ಸರ್ಕಾರಕ್ಕೆ ಗೌರವ ದೊರಕುವುದು ಸರ್ಕಾರಿ ನೌಕರರು ನಿರ್ವಹಿಸುವ ಕೆಲಸದಿಂದ, ಪ್ರವಾಹ ಆದಂತಹ ಸಂದರ್ಭದಲ್ಲಿ ಮಳೆ ಹಾನಿ, ಪ್ರಾಣ ಹಾನಿ ಪ್ರಕರಣಗಳಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಕೊಡುಗೆಯಾಗಿ ನೀಡಿದ್ದಾರೆ ಮತ್ತು ಕೋವಿಡ್ ಸಂದರ್ಭದಲ್ಲೂ ಎರಡು ಕೋಟಿ ದೇಣಿಗೆಯನ್ನು ಸರ್ಕಾರಿ ನೌಕರರು ನೀಡಿರುವುದನ್ನು ಸಚಿವರು ಸ್ಮರಿಸಿದರು.
ಈ ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ 3.50 ಕೋಟಿ ರೂ. ಅನುದಾನ ಒದಗಿಸಿದ್ದು, ಸರ್ಕಾರಿ ನೌಕರರ ಪ್ರತಿಭೆಗಳು ಈ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊರಹೊಮ್ಮುವಂತಾಗಲಿ ಎಂದು ಸಚಿವರು ಆಶಿಸಿದರು.
ರಾಜ್ಯದಲ್ಲಿ 5.25ಲಕ್ಷ ಸರ್ಕಾರಿ ನೌಕರರಿದ್ದು, 2.50ಲಕ್ಷ ಹುದ್ದೆಗಳು ಖಾಲಿ ಇವೆ, ಇನ್ನು 5 ವರ್ಷದೊಳಗಾಗಿ ಈ ಎಲ್ಲಾ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
7ನೇ ವೇತನ ಆಯೋಗ ಸಂಬಂಧ ರಚಿಸಲಾಗಿರುವ ಸಮಿತಿಯು ನವೆಂಬರ್ 23 ರೊಳಗಾಗಿ ವರದಿ ನೀಡಿದ ನಂತರ ಇನ್ನುಳಿದ ಶೇ.23 ರಷ್ಟು ವೇತನ ಸವಲತ್ತು ನೀಡಲು ಕ್ರಮ ವಹಿಸಲಾಗುವುದು, ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಎನ್ ಪಿ ಎಸ್ ನಿಂದ ಓ ಪಿ ಎಸ್ ಸಂಬಂಧ ರಚಿಸಲಾಗಿರುವ ಸಮಿತಿಯು ವರದಿ ನೀಡಿದ ನಂತರ ತಪ್ಪದೆ ನೀಡಿದ ಭರವಸೆಯಂತೆ ಎನ್ ಪಿ ಎಸ್ನಿಂದ ಓ ಪಿ ಎಸ್ ಗೆ ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದ್ದು, ರಾಜ್ಯ ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸರ್ಕಾರದ ಜನಪರ ಯೋಜನೆಗಳ ಲಾಭವನ್ನು ಕಟ್ಟಕಡೆಯ ಜನರಿಗೂ ಸಹ ತಲುಪಿಸಲು ಸರ್ಕಾರಿ ನೌಕರರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ, ಆದುದರಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸವಲತ್ತುಗಳನ್ನು ಮುಂಬರುವ ಏಪ್ರಿಲ್ 22, 2024ರೊಳಗಾಗಿ ಒದಗಿಸಿಕೊಡಬೇಕು ಮತ್ತು ಎನ್ ಪಿ ಎಸ್ ರದ್ದಾಗಬೇಕು, ಒ ಪಿ ಎಸ್ ಜಾರಿಯಾಗಬೇಕು, ಎಲ್ಲಾ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಸೌಲಭ್ಯ ದೊರಕಬೇಕು, ಇದರಿಂದಾಗಿ 6 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸುರೇಶ್ ಗೌಡ, ಎಂ.ಟಿ.ಕೃಷ್ಣಪ್ಪ, ಮೇಯರ್ ಪ್ರಭಾವತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಮಹಾ ನಗರಪಾಲಿಕೆ ಆಯುಕ್ತೆ ಅಶ್ವಿಜ.ಬಿ.ವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ನರಸಿಂಹರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Comments are closed.