ತುಮಕೂರು: ಆದಿ ಕಾವ್ಯವಾದ ರಾಮಾಯಣದ ರಚನೆಕಾರ ವಾಲ್ಮೀಕಿ ಮಹರ್ಷಿ ಬೇಡ ಕುಲದವನು, ಈತ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದು ಸಪ್ತರ್ಶಿಗಳ ಪ್ರಭಾವದಿಂದ ತನ್ನ ಕ್ರೂರ ವೃತ್ತಿ ತ್ಯಾಗ ಮಾಡಿ ನಂತರ ರಾಮಾಯಣ ರಚಿಸಿ ಆದಿಕವಿ ಎನಿಸಿಕೊಂಡಿದ್ದಾನೆ, ಇಂಥಹ ಮಹಾ ಪುರುಷನನ್ನು ಬೇಡರು ತಮ್ಮ ಕುಲದ ಮೂಲ ಪುರುಷನೆಂದು ಭಾವಿಸಿ ವಾಲ್ಮೀಕಿ ಬುಡಕಟ್ಟನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಇಂತಹ ಮಹಾನ್ ಕವಿಯ ಚರಿತ್ರೆಯಲ್ಲಿ ಹಲವಾರು ಭಾವುಕ ಅತಿಶಯೋಕ್ತಿಗಳು ರೂಢಿಗೆ ಬಂದು ಸ್ವಾಭಾವಿಕವಾಗಿದ್ದು ರಾಮನಾಮ ಮಹಿಮೆ ಪ್ರತಿಷ್ಠಾಪಿಸಲೋಸುಗ ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ದುಷ್ಟನಿದ್ದ ಎಂದೂ ರಾಮನಾಮದ ಮಹಿಮೆಯಿಂದ ಋಷಿಯಾದನೆಂದೂ ಹೇಳುವುದು ಪ್ರಚಾರಕ್ಕೆ ಬಂದ ಸಂಗತಿ ಆಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಮಹಾನ್ ಕವಿಯಾದ ವಾಲ್ಮೀಕಿ ರಚಿಸಿದ ರಾಮಾಯಣವನ್ನು ಇಡೀ ಜಗತ್ತಿಗೆ ಎಲ್ಲಾ ಭಾಷೆಗಳಿಗೆ ತರ್ಜುಮೆಯಾಗಿರುವುದು ಅದರ ಮಹತ್ವವನ್ನು ತಿಳಿಸುತ್ತದೆ, ರಾಮಾಯಣ ಮಹಾಕಾವ್ಯವು ಅವಿಭಕ್ತ ಕುಟುಂಬ ಪದ್ಧತಿ ಮತ್ತು ಅದರೊಳಗಿನ ಭ್ರಾತೃತ್ವ ಪ್ರೇಮ ಸಾರುವ ಒಂದು ವಿಶೇಷ ಕಾವ್ಯವಾಗಿದೆ ಎಂದರು.
ವಾಲ್ಮೀಕಿ ತನ್ನ ರಾಜ್ಯದಲ್ಲಿ ಒಂದೊಂದು ಮಾನವೀಯ ಗುಣಗಳಿಗೂ ಒಂದೊಂದು ಪಾತ್ರ ಸೃಷ್ಟಿಸಿ ಅದರ ಮೂಲಕ ಒಳಿತು ಕೆಡುಕುಗಳನ್ನು ವಿವರಿಸುತ್ತಾ ದುಷ್ಟನಿಗ್ರಹ ಶಿಷ್ಟ ಪರಿಪಾಲನಾ ತಂತ್ರ ಅನುಸರಿಸಿದ್ದಾನೆ ಎಂದರು.
ಕಾರ್ಯದರ್ಶಿ ಸಣ್ಣಹೊನ್ನಯ್ಯ ಕಂಟಲಗೆರೆ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜ್, ಸಂಚಾಲಕರಾದ ಕೆ.ಎಸ್.ಉಮಾಮಹೇಶ್ ಹಾಜರಿದ್ದರು.
Comments are closed.