ಕುಣಿಗಲ್: ವಿದ್ಯಾರ್ಥಿಗಳು ಕೇವಲ ಉತ್ತೀರ್ಣರಾದರೆ ಸಾಲದು, ಔದ್ಯೋಗಿಕ ರಂಗದಲ್ಲಿ ಬೇಡಿಕೆ ಇರುವ ಉದ್ಯೋಗಗಳ ಬಗ್ಗೆ ಗಮನಹರಿಸಿ ಶಿಕ್ಷಣದ ಜೊತೆ ಕೌಶಲ್ಯವೃದ್ಧಿಸಿಕೊಳ್ಳುವತ್ತಾ ಗಮಹರಿಸಬೇಕಿದೆ ಎಂದು ಶಾಸಕ ಡಾ.ರಂಗನಾಥ ಹೇಳಿದರು.
ಶನಿವಾರ ತಾಲೂಕು ಆಡಳಿತ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳು ಅದರಲ್ಲೂ ತಳ ಸಮುದಾಯದ ಮಕ್ಕಳು ಬದಲಾದ ಆಧುನಿಕ ಜಗತ್ತಿನ ವೇಗಕ್ಕೆ ತಕ್ಕಂತೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಜೊತೆಯಲ್ಲಿ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ವೃದ್ಧಿಸಿಕೊಳ್ಳಲು ಮುಂದಾಗಬೇಕು, ಎರಡು ಸಾವಿರ ವರ್ಷದ ಹಿಂದೆ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಇಂದು ಹಿಂದುಗಳ ಮನೆಯಲ್ಲಿ ಧಾರ್ಮಿಕ ಚೈತನ್ಯ ವೃದ್ಧಿಸುತ್ತಿದೆ, ಕೌಟುಂಬಿಕ ಮೌಲ್ಯಗಳ ಜೀವಂತಿಕೆ ಏನೆಂದು ತೋರಿಸಿಕೊಟ್ಟ ರಾಮಾಯಣ ಇಂದಿನ ಪೀಳಿಗೆಯ ಯುವ ಜನತೆ ಮೊಬೈಲ್ ಗೀಳಿನಿಂದ ಹೊರ ಬಂದು ಮನನ ಮಾಡುವ ಮೂಲಕ ಮನ, ಮನೆ ಎರಡರಲ್ಲೂ ರಾಮನ ಆದರ್ಶ ಪಾಲಿಸಿ ನೆಮ್ಮದಿಯುತ ಜೀವನ ನಿರ್ವಹಣೆ ಮಾಡಬೇಕಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಮಹರ್ಷಿ ವಾಲ್ಮೀಕಿ ಬಗ್ಗೆ ಯಾವುದೇ ಅಪವಾದಗಳಿರಲಿ ಅದು ಗಣನೆಗೆ ಬಾರದು, ಅವರು ನೀಡಿದ ಮಹಾನ್ ಕಾವ್ಯ ರಾಮಾಯಣ ಸಹಸ್ರ ವರ್ಷಗಳೆ ಕಳೆದರೂ ಇಂದಿಗೂ ಜನಮಾನಸದಲ್ಲಿ ಉಳಿದಿದೆ, ಕೌಟುಂಬಿಕ ಮೌಲ್ಯಗಳ ಜೊತೆ ಸಮಾಜದಲ್ಲಿ ಸ್ತ್ರೀಯರ ನಡವಳಿಕೆ ಬಗ್ಗೆಯೂ ರಾಮಾಯಣದಲ್ಲಿ ಬಹಳಷ್ಟು ಉಲ್ಲೇಖ ಇದೆ, ಇವುಗಳ ಬಗ್ಗೆ ಅರಿವು ಹೊಂದುವ ಮೂಲಕ ಸಾರ್ಥಕ ಜೀವನ ನಡೆಸಬೇಕೆಂದರು.
ವಾಲ್ಮೀಕಿ ಸಮುದಾಯದ 12ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಆಯೋಜಿಸಿದ್ದು ಶಾಸಕರು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ ನಗದು ನೀಡಿ ಸನ್ಮಾನಿಸಿದರು. ಜಿ.ಕೆ.ನಾಗಣ್ಣ ಉಪನ್ಯಾಸ ನೀಡಿದರು, ತಹಶೀಲ್ದಾರ್ ವಿಶ್ವನಾಥ್, ತಾಪಂ ಇಒ ಜೋಸೆಫ್, ಸಮಾಜ ಕಲ್ಯಾಣಾಧಿಕಾರಿ ಶಿವಲಿಂಗಯ್ಯ, ಬಿಇಒ ಬೋರೇಗೌಡ, ಸಮುದಾಯದ ಮುಖಂಡರಾದ ಶಿವಮ್ಮ, ಲಿಂಗರಾಜು, ಪುರಸಭೆ ಸದಸ್ಯರಾದ ರಂಗಸ್ವಾಮಿ, ದೇವರಾಜು, ಪ್ರಮುಖರಾದ ವರದರಾಜು, ಮಂಜುನಾಥ ಇತರರು ಇದ್ದರು.
Comments are closed.