ನಿವೃತ್ತ ಪೊಲೀಸರ ಸಂಘಕ್ಕೆ ನಿವೇಶನ ನೀಡಿ

102

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಆಶಯವಿದೆ, ಸಂಘಕ್ಕೆ ಸರ್ಕಾರ ನಿವೇಶನ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದ್ದು, ಗೃಹ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಲ್.ಜಗದೀಶ್ ಹೇಳಿದರು.

ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಶನಿವಾರ ನಡೆದ ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ 24ನೇ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ನಿವೃತ್ತರಾದ ಬಹಳಷ್ಟು ಪೊಲೀಸ್ ಅಧಿಕಾರಿಗಳು ಸಂಘದ ಸದಸ್ಯತ್ವ ಪಡೆದಿಲ್ಲ, ಅವರೆಲ್ಲಾ ಸದಸ್ಯರಾಗಿ ಸಂಘದ ವಿವಿಧ ಸೌಲಭ್ಯ ಪಡೆಯಬೇಕು ಎಂದು ಮನವಿ ಮಾಡಿದರು.

ಒಂದು ಲಕ್ಷ ರೂಪಾಯಿವರೆಗೆ ಚಿಕಿತ್ಸಾ ಸೌಲಭ್ಯವಿರುವ ಆರೋಗ್ಯ ವಿಮಾ ಯೋಜನೆ ನವೀಕರಣ ಮಾಡಿ ಅದರ ಪ್ರಯೋಜನ ಪಡೆಯುವಂತೆ ಸದಸ್ಯರಿಗೆ ಸಲಹೆ ಮಾಡಿದ ಅವರು ಸಂಘದಿಂದ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.

ಸಂಘದ ಗೌರವಾಧ್ಯಕ್ಷ ನಿವೃತ್ತ ಎಸ್ಪಿ ಆನಂದ್ ಮಾತನಾಡಿ, ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಸಂಘದ ಸದಸ್ಯತ್ವ ಪಡೆಯಲು ಹಾಲಿ ಸದಸ್ಯರು ಮನವೊಲಿಸಬೇಕು, ಅವರೂ ಸೌಕರ್ಯ ಪಡೆಯಲಿ, ಸಂಘ ಪ್ರಗತಿಯ ಹಾದಿಲ್ಲಿ ಸಾಗುತ್ತಾ ಬೆಳವಣಿಗೆ ಕಾಣುತ್ತಿದೆ, ಆರೋಗ್ಯ ಶಿಬಿರ ಸೇರಿದಂತೆ ಸದಸ್ಯರಿಗೆ ವಿವಿಧ ಕಾರ್ಯಕ್ರಮ ಮಾಡಲಾಗುತ್ತಿದೆ, ಸರ್ಕಾರದಿಂದ ನಗರದಲ್ಲಿ ನಿವೇಶನ ಪಡೆದು ಸಂಘದ ಸ್ವಂತ ಕಟ್ಟಡ ನಿರ್ಮಾಣ ಪ್ರಯತ್ನ ನಡೆದಿದೆ ಎಂದರು.

ಸಂಘದ ಉಪಾಧ್ಯಕ್ಷ ಗಂಗಣ್ಣ ಮಾತನಾಡಿ, ಸಂಘದಿಂದ ಮಾಡುವ ಕಾರ್ಯ ಚಟುವಟಿಕೆಗಳು ಮುಂದೆ ಸಂಘದಲ್ಲಿ ತೊಡಗಿಕೊಳ್ಳುವ ನಿವೃತ್ತ ಅಧಿಕಾರಿಗಳಿಗೂ ಅನುಕೂಲವಾಗುತ್ತದೆ, ಈ ಮೂಲಕ ಸಾರ್ಥಕ, ಶಾಶ್ವತ ಕಾರ್ಯವಾಗಿ ಸಂಘದ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ಹಲವು ರೀತಿಯ ನೆರವು ನೀಡುತ್ತಿದೆ, ಆದರೆ ನಿವೃತ್ತ ಯೋಧರಿಗೆ ದೊರೆಯುವ ಸೌಲಭ್ಯ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಸರ್ಕಾರ ನೀಡಬೇಕು ಎಂದು ಗಂಗಣ್ಣ ಮನವಿ ಮಾಡಿದರು.

ಸೈಬರ್ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸ್ ಸಿಬ್ಬಂದಿ ಹರೀಶ್ ಮಾತನಾಡಿ, ಎಲ್ಲೋ ಕುಳಿತ ಸೈಬರ್ ಕ್ರೈಂ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ದೋಚುವ ಹಾಗೂ ವಿವಿಧ ಮಾದರಿಯ ಸೈಬರ್ ಕ್ರೈಂಗಳ ಬಗ್ಗೆ ಮಾಹಿತಿ ನೀಡಿದರು, ಅಂತಹ ಅಪರಾಧ ತಡೆಯುವ ಹಾಗೂ ಸೈಬರ್ ವಂಚಕರ ಬಗ್ಗೆ ಎಚ್ಚರಿಕೆ ವಹಿಸುವ ಕುರಿತು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಶಿವಬಸವಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!