ತುಮಕೂರು: ಮನುಕುಲಕ್ಕೆ ಸಮಾನತೆ, ನ್ಯಾಯ, ಧರ್ಮ ಪಸರಿಸಿದ ಮಹರ್ಷಿ ವಾಲ್ಮೀಕಿ ಪೂಜ್ಯನೀಯರಾಗಿದ್ದಾರೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿ ತೋರಿಸಿ ಕೊಟ್ಟಂತಹ ಅವರ ವಿಚಾರಧಾರೆಗಳು, ತತ್ವಗಳನ್ನು ಅರಿತು ನಾವೆಲ್ಲರು ಬಾಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾ ನಗರಪಾಲಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಾಣ ಗ್ರಂಥದಲ್ಲಿನ ನೈತಿಕ ಮೌಲ್ಯಗಳು, ಪ್ರತಿ ವ್ಯಕ್ತಿಯ ಜೀವನದಲ್ಲಿ ನಡೆಯುವ ಹಲವು ಘಟನೆಗಳಿಗೆ ಹತ್ತಿರವಾಗಿವೆ, ರಾಮಾಯಣ ಗ್ರಂಥದಲ್ಲಿನ ಮೌಲ್ಯಗಳು ವ್ಯವಸ್ಥೆಗಳ ಸುಧಾರಣೆಗೆ ಹಾಗೂ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ರೀತಿಯಲ್ಲಿದೆ ಎಂದರು.
ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ವ್ಯಕ್ತಿಯು ಅಂದಿನ ಕಾಲಘಟ್ಟದಲ್ಲಿ ಜರುಗಿದ ಜನರ ಜೀವನ ಶೈಲಿಯ ಕುರಿತು ಸಾಹಿತ್ಯ ಸೃಷ್ಟಿಸುವ ಮೂಲಕ ಅಸಾಧಾರಣನಾಗಿ ರೂಪುಗೊಂಡ ರೀತಿ ಸರ್ವರಿಗೂ ಆದರೀಣಿಯವಾದದ್ದು, ನಾಡಿನ ಬಹುತೇಕ ಕವಿಗಳು ಅವರನ್ನು ಸಾಹಿತ್ಯದಲ್ಲಿ ಉಲ್ಲೇಖಿಸಿದ್ದು ಋಷಿ ವಾಲ್ಮೀಕಿಯು ಎಲ್ಲಾ ಜನಾಂಗದವರಿಗೂ ಆದರ್ಶ ಪುರುಷರಾಗಿದ್ದಾರೆ ಎಂದರು.
ಚಿತ್ರದುರ್ಗದ ಮದಕರಿ ನಾಯಕನ ಇತಿಹಾಸ ಓದದೇ ಕರ್ನಾಟಕದ ಇತಿಹಾಸ ಪೂರ್ಣವಾಗುವುದಿಲ್ಲ, ಜಿಲ್ಲೆಯಲ್ಲಿ ಪ. ಪಂಗಡದ 18 ವಸತಿ ನಿಲಯಗಳಿದ್ದು, 4 ಸಾವಿರಕ್ಕೂ ಹೆಚ್ಚು ಸಮುದಾಯದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ, ನಾನು ಸಮುದಾಯಗಳಿಗೆ ಮನವಿ ಮಾಡುತ್ತೇನೆ, ಸರ್ಕಾರ ದೀನದಲಿತರ ಅಭಿವೃದ್ಧಿಗಾಗಿ ಹಲವು ಯೋಜನೆ ಹಾಗೂ ಕಾರ್ಯಕ್ರಮ ರೂಪಿಸಿದೆ, ಒದಗಿಸಿರುವ ಶೈಕ್ಷಣಿಕ ಮೀಸಲಾತಿ ಹಾಗೂ ಮತ್ತಿತರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಸಮುದಾಯದ ಶೋಷಿತ ಮತ್ತು ದುರ್ಬಲ ವರ್ಗದವರು ವಿದ್ಯಾವಂತರಾಗಿ ದೇಶದ ಪ್ರಗತಿಗೆ ಕೈ ಜೋಡಿಸಬೇಕು, ಸಮುದಾಯಗಳು ಅಭಿವೃದ್ಧಿಗೊಂಡರೆ ದೇಶ ಅಭಿವೃದ್ಧಿಗೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಗೆ ಒಂದು ಲಕ್ಷ ಬಹುಮಾನ ಮಂಜೂರಾತಿ ಪತ್ರ ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.
ಸಂಜಯ್ ಕುಮಾರ್ ಸ್ವಾಮೀಜಿ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಸುರೇಶಗೌಡ, ಜಿಲ್ಲಾಧಿಕಾರಿ ಶ್ರೀನಿವಾಸ.ಕೆ, ಜಿಪಂ ಸಿಇಒ ಜಿ.ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಮುದಾಯದ ಮುಖಂಡರು ಹಾಜರಿದ್ದರು.
Comments are closed.