ಪೊಲೀಸಪ್ಪನ ಮನೆಗೆ ಸ್ಕೆಚ್ ಹಾಕಿದ ಕಳ್ಳರು!

ಇಬ್ಬರು ಕಳ್ಳರು ಅಂದರ್!!

267

Get real time updates directly on you device, subscribe now.

ಶಿರಾ: ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಇಲ್ಲಿನ ವಿದ್ಯಾನಗರದ ಪಾರ್ಕ್ ಬಳಿ ಭಾನುವಾರ ಬೆಳಗ್ಗೆ ಜರುಗಿದೆ.

ಪಾರ್ಕ್ ಸಮೀಪದಲ್ಲಿರುವ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹೇಶ್ ಎಂಬುವರ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಬಾಗಿಲು ಮುರಿದು ಒಳನುಗುವ ಯತ್ನ ನಡೆಸಿದ್ದಾರೆ. ಇದನ್ನು ಗಮನಿಸಿದ ಪಕ್ಕದ ಮನೆಯವರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯಪವೃತ್ತರಾದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆಯನ್ನು ಸುತ್ತುವರೆದು ಕಳ್ಳರನ್ನು ಹಿಡಿಯುವ ಯತ್ನ ನಡೆಸಿದ್ದಾರೆ.

ಈ ವೇಳೆ ಕಳ್ಳನೊಬ್ಬ ತನ್ನ ಬಳಿ ಇದ್ದ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಅಬ್ದುಲ್ ಕಲೀಮ್ ಮತ್ತು ಧರ್ಮೇಂದ್ರ ಎಂಬ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೂ ಛಲ ಬಿಡದ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಖಾಲಿದ್ ಮತ್ತು ರಿಯಾನ್ ಎಂದು ಗುರುತಿಸಲಾಗಿದೆ.

ಇವರುಗಳ ಪೈಕಿ ರಿಯಾನ್ ತನ್ನ ಬಳಿ ಇದ್ದ ಚಾಕುವಿನಿಂದ ತನ್ನನ್ನೆ ಗಾಯಗೊಳಿಸಿಕೊಂಡಿದ್ದು, ಎಲ್ಲ ಗಾಯಾಳುಗಳಿಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಷಯ ತಿಳಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ. ಮರಿಯಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡಿದ್ದ ಪೊಲೀಸರನ್ನು ಸಂತೈಸಿದ್ದಾರೆ. ನಂತರ ಘಟನಾ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಬಂಧಿತ ಕಳ್ಳರಿಂದ ವಶಪಡಿಸಿಕೊಳ್ಳಲಾಗಿದ್ದ, ಕಳ್ಳತನಕ್ಕೆ ಬಳಸಲಾಗುವ ಕಟರ್, ಡ್ರ್ಯಾಗನ್ ಮುಂತಾದುವುಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

Get real time updates directly on you device, subscribe now.

Comments are closed.

error: Content is protected !!