ಕುಣಿಗಲ್: ವಿದ್ಯುತ್ ಕ್ಷೇತ್ರ ಖಾಸಗಿಕರಣ ಖಂಡಿಸಿ ಸಿಐಟಿಯು ತಾಲೂಕು ಸಂಚಾಲಕ ಅಬ್ದುಲ್ ಮುನಾಫ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು ಕುಣಿಗಲ್ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ಸಂಘಟಿತರಾದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿದರು, ಸಭೆಯನ್ನುದ್ದೇಶಿಸಿ ಅಬ್ದುಲ್ ಮುನಾಫ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ನೇತೃತ್ವದ ಸರ್ಕಾರ ಕಾರ್ಪೋರೇಟ್ ಬಂಡವಾಳ ಪರ ಒಲವು ತೋರಿಸಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಗೊಳಿಸಲು ಪೂರಕವಾಗಿ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಮುಂದಾಗಿದ್ದಾರೆ, ಇದರಿಂದ ಸಾಮಾನ್ಯ ಜನತೆಗೆ ವಿದ್ಯುತ್ ಗಗನ ಕುಸುಮವಾಗುವ ಸಂಭವವಿದೆ ಅಲ್ಲದೆ, ಮೊಬೈಲ್ ಬಳಸುವ ರೀತಿ ಮೊದಲೆ ಹಣ ನೀಡಿ ವಿದ್ಯುತ್ ಬಳಕೆ ಮಾಡುವ ಸ್ಥಿತಿ ನಿರ್ಮಾಣವಾಗಿ ವಿದ್ಯುತ್ ಬಡ ಜನತೆಯ ಕೈಗೆಟುಕದೆ ಉಳ್ಳವರಿಗೆ ಮಾತ್ರ ಎಂಬುವಂತಾಗುತ್ತದೆ, ರೈತರ ಪಂಪ್ ಸೆಟ್ ಗಳಿಗೆ ಪ್ರಿಪೇಡ್ ಮೀಟರ್ ಅಳವಡಿಸಬೇಕಾದ ಕಾರಣ ರೈತರು ಸಾವಿರಾರೂ ದರ ಪಾವತಿ ಮಾಡುವ ಅನಿವಾರ್ಯತೆ ಸ್ಥಿತಿ ಉಂಟಾಗುತ್ತದೆ, ವಿದ್ಯುತ್ ಕ್ಷೇತ್ರವನ್ನು ಖಾಸಗಿ ಬಂಡವಾಳ ಶಾಹಿಗಳಿಗೆ ನೀಡುವ ಕಾರಣ ಉತ್ಪಾದನೆ, ವಿತರಣೆಯಲ್ಲಿ ಖಾಸಗಿಯವರು ನಿಗದಿಪಡಿಸಿದ ದರವನ್ನೆ ಜನತೆ ಪಾವತಿ ಮಾಡಬೇಕಿದೆ, ಇದರಿಂದ ಸಣ್ಣಪುಟ್ಟ ಕೈಗಾರಿಕೆ ಸೇರಿದಂತೆ ಮನೆಗಳಿಗೂ ವಿದ್ಯುತ್ ಸಮರ್ಪಕವಾಗಿ ಸಿಗದೆ ಪರದಾಡುವ ಸ್ಥಿತಿ ಇದ್ದು ಕೇಂದ್ರ ಸರ್ಕಾರ ವಿದ್ಯುತ್ ಮಸೂದೆ ಹಿಂಪಡೆಯಬೇಕು, ಸರ್ಕಾರವೆ ವಿದ್ಯುತ್ ಉತ್ಪಾದನೆ, ವಿತರಣೆಗೆ ಕ್ರಮ ವಹಿಸಬೇಕು, ಬಂಡವಾಳ ಶಾಹಿಗಳನ್ನು ದೂರ ಇಟ್ಟು ಸಾಮಾನ್ಯ ಜನರ ಮೇಲೆ ಅನವಶ್ಯಕವಾಗಿ ಹಾಕಲಾಗುವ ತೆರಿಗೆ ರದ್ದುಗೊಳಿಸಬೇಕೆಂದರು.
ವಿವಿಧ ಸಂಘಟನೆ ಮುಖಂಡರಾದ ಯೋಗೇಶ್, ಶಿವಶಂಕರ್, ಶಾಂತಕುಮಾರಿ, ನಫೀಸಾ ಬಾನು, ಶಂಕರ್, ಕೃಷ್ಣಪ್ಪ, ಅಯೂಬ್, ರಾಜು ವೆಂಕಟಪ್ಪ, ವಸೀಹಾಬಾನು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
Comments are closed.