ತುಮಕೂರು: ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಕಟ್ಟಡ ಕಾರ್ಮಿಕರು ಬೆವರು ಸುರಿಸಿ ದುಡಿದು ಉಳಿಸಿದ ಸೆಸ್ ಹಣವನ್ನು ಅವೈಜ್ಞಾನಿಕವಾಗಿ ದುಂದು ವೆಚ್ಚ ಮಾಡುತ್ತಿದ್ದು, ಈ ಕೂಡಲೇ ಆರೋಗ್ಯ ತಪಾಸಣೆ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗಿರೀಶ್ ರಾಜ್ಯ ಸರ್ಕಾರ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅವೈಜ್ಞಾನಿಕ ನೀತಿಗಳ ಖಂಡಿಸಿ ಹಾಗೂ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಎಐಟಿಯುಸಿ ನೇತೃತ್ವದಲ್ಲಿ ನಗರದ ಟೌನ್ ಹಾಲ್ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆ ನಡೆಸಿ ಮಾತನಾಡಿ, ಈಗಾಗಲೇ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮ ತಕ್ಷಣ ನಿಲ್ಲಿಸಬೇಕು, ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು, ಬಾಕಿ ಇರುವ ಸುಮಾರು 14 ಲಕ್ಷ ಮಕ್ಕಳ ಶೈಕ್ಷಣಿಕ ಧನ ಸಹಾಯ ಕೂಡಲೇ ವಿಲೇವಾರಿ ಮಾಡಬೇಕು, ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಳ್ಳಬೇಕು ಮತ್ತು ಮಂಡಳಿ ಅಭಿವೃದ್ಧಿ ಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು, ಕಾರ್ಮಿಕರ ಸಮಸ್ಯೆ ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕ ಸಂಘಟನೆಯಾದ ಎಐಟಿಯುಸಿಗೆ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂದು ಗಿರೀಶ್ ಆಗ್ರಹಿಸಿದರು.
ಜಿಲ್ಲಾ ಖಜಾಂಚಿ ಅಶ್ವತ್ಥನಾರಾಯಣ ಮಾತನಾಡಿ ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ಹಲವಾರು ರೀತಿಯ ಕಿಟ್ಗಳು, ಲ್ಯಾಪ್ ಟಾಪ್ ಗಳು, ಟ್ಯಾಬ್ ಗಳು, ಶಾಲಾ ಕಿಟ್ ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇನ್ನು ಮುಂತಾದ ರೀತಿಯಲ್ಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್ ಹಣವನ್ನು ಮನಸೋ ಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996ರ ವಿರುದ್ಧವಾಗಿ ಮಂಡಳಿಯು ದುಂದು ವೆಚ್ಚ ಮಾಡಿದೆ, ಇವುಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಐಟಿಯುಸಿ ಸಂಘಟನೆ ಈಗಾಗಲೇ ಮನವಿ ಸಲ್ಲಿಸಿದೆ, ಆದರೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯಾಗಲಿ, ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವಾಗಲಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಬದಲಿಗೆ ಕಾರ್ಮಿಕ ಮಂತ್ರಿಗಳು ದಿ.20-08- 2023ರಂದು ಸಭೆ ಕರೆದಾಗ ನಮ್ಮ ಸರ್ಕಾರ ಯಾವುದೇ ಕಿಟ್ ಅಥವಾ ಇತರೆ ವಸ್ತು ರೂಪದಲ್ಲಿ ಈ ಹಿಂದೆ ನೀಡುತ್ತಿದ್ದ ಎಲ್ಲವನ್ನು ನಿಲ್ಲಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದ್ದರು.
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್ ಟಾಪ್ ಖರೀದಿಸಿದ್ದಾರೆ ಮತ್ತು ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಪ್ರತಿ ಜಿಲ್ಲೆಗೆ 33 ಸಾವಿರ ಕಾರ್ಮಿಕರಿಗೆ ತಲಾ 2850 ರೂ. ಗಳಂತೆ ಪ್ರತಿ ಜಿಲ್ಲೆಗೆ 10 ಕೋಟಿಯಂತೆ 31 ಜಿಲ್ಲೆಗೆ 310 ಕೋಟಿ ರೂ. ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಮಂಡಳಿಯ ಹಣ ತೆಗೆಯಲಾಗಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು ಬಾಬು ಮಾತನಾಡಿ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಆರೋಗ್ಯ ತಪಾಸಣೆ ಹಾಗೂ ಲ್ಯಾಪ್ ಟಾಪ್ ಖರೀದಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿತ್ತು, ಆದರೆ ಮುಖ್ಯಮಂತ್ರಿಗಳು ಇದನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ, ಈಗಾಗಲೇ ತುಮಕೂರು, ರಾಮನಗರ, ಬೆಳಗಾವಿಯಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದ್ದು, ಈ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಡೆಯುವ ಗುಮಾನಿ ಇದೆ, ಕಳೆದ ವರ್ಷ ನಡೆದ ಆರೋಗ್ಯ ತಪಾಸಣೆಯಲ್ಲಿ ಫಲಾನುಭವಿಗಳಿಗೆ ಕೇವಲ ತಪಾಸಣೆ ನಡೆಸಿದ ಫಲಿತಾಂಶವನ್ನಷ್ಟೆ ನೀಡಿ ಕೈತೊಳೆದುಕೊಳ್ಳಲಾಗಿದೆ, ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನಗಳಿಲ್ಲ, ಹೀಗಾಗಿ ನಿಖರವಾದ ಫಲಿತಾಂಶ ಲಭ್ಯವಾಗಿಲ್ಲ, ಎಷ್ಟೋ ಜನ ಕಾರ್ಮಿಕರಿಗೆ ಇಲ್ಲದ ಖಾಯಿಲೆಗಳು ಇವೆ ಎಂದು ವರದಿ ನೀಡಿದ ಉದಾಹರಣೆಗಳು ಇವೆ, ಇನ್ನು ಎಷ್ಟೋ ಜನಕ್ಕೆ ಫಲಿತಾಂಶದ ಚೀಟಿಯೂ ಸಿಕ್ಕಿಲ್ಲ ಎಂದು ತಿಳಿಸಿದರು.
ಜಿಲ್ಲಾ ಮುಖಂಡ ವಸಂತರಾಜು ಮಾತನಾಡಿ ನಮ್ಮ ಸಂಘವು ಕಾರ್ಮಿಕರ ಆರೋಗ್ಯ ತಪಾಸಣೆ ಬೇಡವೆಂದು ಹೇಳುತ್ತಿಲ್ಲ, ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಮಟ್ಟಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆ ಇವೆ, ಜೊತೆಗೆ ಸಹಕಾರಿ ಉಚಿತ ಚಿಕಿತ್ಸೆ ಇವೆ, ಮಂಡಳಿ ಇವರ ಜೊತೆ ಸೇರಿ ಉಚಿತ ಆರೋಗ್ಯ ತಪಾಸಣೆ ನಡೆಸಬಹುದು, ಇದಕ್ಕೆ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ, ಇದರ ಬದಲು ಮಂಡಳಿ ಹಣ ಬಳಸುವುದು ಸರಿಯಲ್ಲ, ಕೂಡಲೇ ಈ ಆರೋಗ್ಯ ತಪಾಸಣೆ ನಿಲ್ಲಿಸಬೇಕೆಂದು ಒತ್ತಾಯಿಸುತ್ತೇವೆ, ಇದರ ಬಗ್ಗೆ ಕಾರ್ಮಿಕ ಸಚಿವರಿಗೂ ಹಾಗೂ ಮಂಡಳಿಯ ಸಿಇಓ ಗಮನಕ್ಕೂ ತರಲಾಗಿದ್ದು, ಇದನ್ನು ಮೀರಿ ಆರೋಗ್ಯ ತಪಾಸಣೆ ನಡೆಸುತ್ತಿರುವ ಕುರಿತು ಕಾರ್ಮಿಕರು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು, ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು, ಗುಬ್ಬಿ ತಾಲ್ಲೂಕಿನ ದೊಡ್ಡತಿಮ್ಮಯ್ಯ, ಕೊರಟಗೆರೆಯ ವಿಜಯ್ ಕುಮಾರ್, ತುಮಕೂರು ನಗರ ಸಂಚಾಲಕ ರವಿಕುಮಾರ್, ಗೋವೀಂದಯ್ಯ, ಲತಾಮಣಿ, ತೇಜಸ್ವಿನಿ, ನಾರಾಯಣ ಸ್ವಾಮಿ, ಕುಪ್ಪೂರು ವೆಂಕಟೇಶ್, ಓಂಕಾರ್ ಮೂರ್ತಿ, ಬೋಜರಾಜು, ಕೃಷ್ಣಕುಮಾರಿ, ಹನುಮಯ್ಯ ಇತರರು ಇದ್ದರು.
Comments are closed.