ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಲಿ

95

Get real time updates directly on you device, subscribe now.


ತುಮಕೂರು: ಸರ್ಕಾರಿ ನೌಕರರಾದ ನಾವುಗಳು ಸಾರ್ವಜನಿಕರ ಸೇವೆ ಮಾಡಲು ಸರ್ಕಾರಿ ಕೆಲಸಕ್ಕೆ ಸೇರಿದ್ದು, ಅಧಿಕಾರ ಚಲಾಯಿಸಲು ಅಲ್ಲ ಎಂಬುದನ್ನು ಸರ್ಕಾರಿ ಅಧಿಕಾರಿಗಳು, ನೌಕರರು ಅರಿತು ಕರ್ತವ್ಯ ನಿರ್ವಹಿಸಿದಾಗ ಜನಸಾಮಾನ್ಯರ ಬಹುತೇಕ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಎಂದು ಗೌರವಾನ್ವಿತ ನ್ಯಾ.ರಾಮಲಿಂಗೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕೇಂದ್ರ ಗ್ರಂಥಾಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಏರ್ಪಡಿಸಲಾಗಿದ್ದ ಜಾಗೃತಿ ಅರಿವು ಸಪ್ತಾಹ- 2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭ್ರಷ್ಟಾಚಾರ ಸಮಸ್ಯೆಗೆ ಪರಿಹಾರ ನಮ್ಮಲ್ಲಿಯೇ ಇದೆ, ಸರ್ಕಾರಿ ನೌಕರರಾದ ನಾವು ಭ್ರಷ್ಟಾಚಾರ ಮಾಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದಲ್ಲಿ ಈ ಸಮಸ್ಯೆ ನಿರ್ಮೂಲನೆಯಾಗಲಿದೆ, ಭ್ರಷ್ಟಾಚಾರ ಇಲ್ಲದೆ ಜನರ ಸೇವೆ ಮಾಡಿಕೊಟ್ಟಲ್ಲಿ ಜನರು ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
ಲಂಚವೆಂಬ ಹರ್ಷದ ಕೂಳಿಗೆ ಆಸೆಪಟ್ಟಲ್ಲಿ ಸರ್ಕಾರಿ ನೌಕರಿ ಎಂಬ ವರ್ಷದ ಕೂಳು ಕಳೆದುಕೊಳ್ಳಬೇಕಾಗುತ್ತದೆ, ಆದುದರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸರ್ಕಾರಿ ನೌಕರರಾದ ನಾವು ನಮ್ಮ ಹಂತದಲ್ಲಿಯೇ ಭ್ರಷ್ಟಾಚಾರಕ್ಕೆ ಒಳಗಾಗುವುದಿಲ್ಲವೆಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಲೀಬಾಷಾ ಮಾತನಾಡಿ, ಭ್ರಷ್ಟಾಚಾರ ಸಮಾಜಕ್ಕೆ ಹಾನಿಯುಂಟು ಮಾಡುತ್ತದೆ, ಈ ಅನಿಷ್ಟ ಪಿಡುಗಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ, ಜನರ ಭಾಗವಹಿಸುವಿಕೆ ಹೆಚ್ಚಿರುವಂತಹ ಇಲಾಖೆಗಳಿಗೆ ಸಂಬಂಧಿಸಿದಂತೆ ಕೆಲಸ ಆಗುವುದಿಲ್ಲವೆಂಬ ಹೆಚ್ಚಿನ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ ಎಂದರು.

ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರಲ್ಲಿ ಮತ್ತು ಅಧಿಕಾರಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಅಕ್ಟೋಬರ್ 30 ರಿಂದ ನವೆಂಬರ್ 5 ರ ವರೆಗೆ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಬಂದಂತಹ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸಬೇಕು, ಹಿಂಬರಹ ಕೊಟ್ಟು ಅರ್ಜಿಯ ವಿಲೇವಾರಿಯ ಸಾಧ್ಯಾಸಾಧ್ಯತೆ ಕುರಿತಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿ ಕಳುಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಚೇರಿಗಳಲ್ಲಿ ತಿಂಗಳುಗಟ್ಟಲೆ ಕಡತಗಳನ್ನು ಬಾಕಿ ಇರಿಸುವುದು ಸಹ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ, ಆದುದರಿಂದ ಕಚೇರಿ ಮುಖ್ಯಸ್ಥರು ತಮ್ಮ ಹಂತದಲ್ಲಿಯೇ ಕಚೇರಿ ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಬೇಕು, ಈ ಮೂಲಕ ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕಡಿಮೆ ಸಂಬಳ, ಅತಿ ಬೇಗ ಹಣ ಗಳಿಸುವ ಹಂಬಲ ಇವೆಲ್ಲವೂ ಭ್ರಷ್ಟಾಚಾರಕ್ಕೆ ದಾರಿ ಮಾಡಿ ಕೊಡುತ್ತವೆ, ಭ್ರಷ್ಟಾಚಾರ ಇಂದಿನ ಪಿಡುಗಲ್ಲ, ಇದು ಬಹಳ ಹಿಂದಿನಿಂದಲೂ ಕ್ಯಾನ್ಸರ್ ತರಹ ನಮ್ಮ ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿ ಆವರಿಸಿದೆ ಎಂದು ತಿಳಿಸಿದರು.

ಸರ್ಕಾರಿ ಸೇವೆಗೆ ಸೇರುವವರೆಗೆ ಒಂದು ತೊಳಲಾಟವಾದರೆ, ಸೇವೆಗೆ ಸೇರಿದ ನಂತರ ಒಳ್ಳೆಯ ಹುದ್ದೆ, ಒಳ್ಳೆಯ ಜಾಗಕ್ಕಾಗಿ ಮತ್ತೊಂದು ತೊಳಲಾಟ, ಈ ತೊಳಲಾಟದಿಂದ ಭ್ರಷ್ಟಾಚಾರದ ಬಲೆಯೊಳಗೆ ನೌಕರರು ಸಿಲುಕಿಗೊಂಡು ಜೀವನವಿಡೀ ಒದ್ದಾಡುತ್ತಾರೆ, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ತಿಳಿಸಿದರು.
ಲಂಚಗುಳಿತನವನ್ನು ತಡೆಯಲೆಂದೇ ಈ-ಪ್ರಕ್ಯೂರ್ ಮೆಂಟ್ ಮತ್ತು ಫಲಾನುಭವಿಗಳನ್ನು ಗುರುತಿಸಲು ಫ್ರೂಟ್ ತಂತ್ರಾಂಶ ಮತ್ತು ಸರ್ಕಾರಿ ಪಾವತಿಗಳಿಗೆ ಕೆ-2 ತಂತ್ರಾಂಶಗಳನ್ನು ಸರ್ಕಾರಿ ವ್ಯವಸ್ಥೆಯಲ್ಲಿ ಜಾರಿಗೆ ತರಲಾಗಿದೆ, ಲಂಚ ಕೊಡುವವರಿಗೂ ಸಹ ಶಿಕ್ಷೆಯಾಗಬೇಕು, ಆಗ ಭ್ರಷ್ಟಾಚಾರ ತಂತಾನೆ ಕಡಿಮೆಯಾಗುತ್ತದೆ ಎಂದರು.

ಪಾಲಿಕೆ ಆಯುಕ್ತೆ ಆಶ್ವಿಜ ಮಾತನಾಡಿ, ದೈನಂದಿನ ಸರ್ಕಾರಿ ಕೆಲಸ ಕಾರ್ಯಗಳ ನಿರ್ವಹಣೆಯಿಂದ ವಿಮುಖರಾಗುವುದನ್ನು ಭ್ರಷ್ಟಾಚಾರ ಎಂದು ಕರೆಯಬಹುದಾಗಿದೆ, ತಮಗೆ ಬೇಕಾದವರಿಗೆ ಕೆಲಸ ಮಾಡಿಕೊಡುವುದು ಅರ್ಜಿಗಳನ್ನು ವಿಲೇ ಇಡುವುದು, ಸಾರ್ವಜನಿಕರನ್ನು ಅಲೆದಾಡಿಸುವುದೂ ಸಹ ಭ್ರಷ್ಟಾಚಾರದ ವಿವಿಧ ಮುಖಗಳು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರಭು ಮಾತನಾಡಿ, ಪ್ರಪಂಚದಾದ್ಯಂತ ಶೇ.55 ರಷ್ಟು ದೇಶಗಳು ತಮ್ಮ ಆಡಳಿತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿದೆ, ಪ್ರಜಾಪ್ರಭುತ್ವ ವಿಫಲವಾದಲ್ಲಿ ಜನರು ಪರ್ಯಾಯ ವ್ಯವಸ್ಥೆಯ ಬಗ್ಗೆ ಯೋಚಿಸುತ್ತಾರೆ, ಯಾವ ದೇಶದಲ್ಲಿ ಆ ದೇಶದ ಸಂವಿಧಾನದ ಮೂಲ ಆಶಯ ವಿಫಲವಾಗುತ್ತದೆ ಅಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಿಎಫ್ ಒ ಅನುಪಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ವಿಶೇಷ ಅಭಿಯೋಜಕ ಬಸವರಾಜು ಇದ್ದರು.

Get real time updates directly on you device, subscribe now.

Comments are closed.

error: Content is protected !!