ಅಸೂಯೆ, ಕೋಪ ಮನುಷ್ಯನ ಅಪಜಯಕ್ಕೆ ಕಾರಣ

451

Get real time updates directly on you device, subscribe now.

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ?
ತನಗಾದ ಆಗೇನು? ಅವರಿಗಾದ ಚೇಗೇನು?
ತನು”ನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.
ಬಸವಣ್ಣನವರ ಈ ವಚನ ಸಾರ್ವಕಾಲಕ್ಕೂ ಪ್ರಸ್ತುತ ಎನಿಸದಿರದು, ನಾನು ನನ್ನದು ಎಂಬ ಭಾವ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅದು ಭೌತಿಕವಾದ ಅಥವಾ ಮನಸ್ಸಿನಲ್ಲಿ ನಮ್ಮ ಬಗ್ಗೆ ನಾವೇ ಮಾಡಿಕೊಂಡ ಇಲ್ಲವೆ ಸಮಾಜ ನಿರ್ಮಿಸಿದ ರೂಪ ಬರಬಹುದು. ಇದಕ್ಕೆ ಧಕ್ಕೆಯುಂಟಾದಾಗ ನಮ್ಮಲ್ಲಿ ಕೋಪ ಹುಟ್ಟುತ್ತದೆ. ಕೋಪದ ಪರಿಣಾಮ ಅತ್ಯಂತ ವಿನಾಶಕಾರಿ. ತನ್ನದೆನ್ನುವುದು ಏನೂ ಇಲ್ಲ, ಇರುವುದೆಲ್ಲ ಕೂಡಲಸಂಗಮನದ್ದೇ ಎಂಬ ತಾತ್ಪರ್ಯ ಈ ವಚನದ್ದು.
ನಿಜಕ್ಕೂ ಸಾಮಾನ್ಯರಾದ ನಮಗೆ ಸಣ್ಣ ಮಾತಿಗೂ ಕೋಪ, ಸರಹದ್ದನ್ನು ಮೀರಿ ನಮ್ಮಲ್ಲಿ ನಾನು ನನ್ನದು ಎನ್ನುವ ಭಾವನೆ ಎಷ್ಟು ಆಳವಾಗಿ ಬೇರೂರಿರುತ್ತದೆಯೋ ಅಷ್ಟೇ ತೀವ್ರವಾದ ಕೋಪ ಧಕ್ಕೆ ಉಂಟುಮಾಡಿದವರ ಮೇಲೆ ಉಂಟಾಗುತ್ತದೆ. ಅದರ ಪರಿಣಾಮವಂತೂ ಎಲ್ಲರಿಗೂ ತಿಳಿದದ್ದೆ. ಅನೇಕ ಸಲ ನಾವು ನಮ್ಮೊಂದಿಗೆ ಕೋಪಮಾಡಿಕೊಂಡವರ ಮೇಲೆ ಮತ್ತಷ್ಟು ಕೋಪ ತೋರಿಸಿ ತಕ್ಕ ಶಾಸ್ತಿ ಮಾಡಿದೆ ಎಂದುಕೊಂಡು ನೆಮ್ಮದಿ ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಆದರೆ ವಾಸ್ತವದಲ್ಲಿ ಕೋಪ ಮಾಡಿಕೊಂಡಂಥ ಇಬ್ಬರ ನೆಮ್ಮದಿಯೂ ಹಾಳಾಗಿ ಹೋಗುತ್ತದೆ. ಇಂತಹ ವಿನಾಶಕಾರಿ ಕೋಪವನ್ನು ದೂರವಿಡಬೇಕಾದರೆ ಅದರ ಪರಿಣಾಮವನ್ನು ಚೆನ್ನಾಗಿ ಅರಿಯಬೇಕು.
ಬಸವಣ್ಣನವರು ಯೋಗ್ಯವಾದ ಉದಾಹರಣೆಯಿಂದ ಇದನ್ನು ತಿಳಿಸುತ್ತಾರೆ. ಕೋಪವನ್ನು ಕಿಚ್ಚಿಗೆ ಹೋಲಿಸಿ ಒಂದು ಮನೆಯಲ್ಲಿರುವ ಕಿಚ್ಚು ನೆರೆಮನೆಯವರನ್ನು ಸುಡುವುದಕ್ಕಿಂತ ಮೊದಲೆ ತನ್ನ ಮನೆಯನ್ನು ಸುಡುತ್ತದೆ. ಅಂದರೆ ಕೋಪವು ಮೊದಲು ಯಾರ ಮನದಲ್ಲಿ ಹುಟ್ಟುತ್ತದೆಯೋ ಅವರನ್ನು ಮೊದಲು ಹಾಳುಮಾಡಿ ಆನಂತರ ಮತ್ತೊಬ್ಬರನ್ನು ಹಾಳುಮಾಡುತ್ತದೆ. ಹಾಗಾಗಿ ನಾವು ಮತ್ತೊಬ್ಬರ ಮೇಲೆ ಕೋಪ ತೋರಿಸಿ ಬೀಗುವುದು ಅರ್ಥಹೀನ. ಆದ್ದರಿಂದ ನಾವು ನೀವೆಲ್ಲ ಕೋಪದ ಅಡಿಯಾಳಾಗುವುದನ್ನು ಮೊದಲು ತಡೆಯಬೇಕು. ಕೋಪದ ಕೈಗೆ ನಮ್ಮ ಮನಸ್ಥಿತಿ ಕೊಟ್ಟರೆ ಅದರಿಂದಾಗುವ ಪರಿಣಾಮ ಬಹಳ ಕ್ರೂರ. ಆದ್ದರಿಂದ ಸದಾ ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿ, ಕೋಪದ ಬದಲಾಗಿ ಶಾಂತಿ, ಪ್ರೀತಿ ಹಂಚುವ ಕಾಯದಲ್ಲಿ ತೊಡಗಬೇಕು. ಕೋಪದಿಂದ ಯಾವ ಲಾಭವೂ ಇಲ್ಲ; ಬದಲಾಗಿ ನಷ್ಟವೇ ಹೆಚ್ಚಾಗಿರುವುದರಿಂದ ನಗುವನ್ನು ಹಂಚುವ ಕೆಲಸ ಮಾಡಬೇಕಾಗಿದೆ.
ಮನಸ್ಸಿನಲ್ಲಿ ಒಮ್ಮಿಂದೊಮ್ಮೆಲೆ ಬಂದೆರಗುವ ನಕಾರಾತ್ಮಕ ಮನೋಭಾವವನ್ನು ತೊರೆದು ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಜನರು ಯಾವಾಗ ನಾವು ಋಣಾತ್ಮಕವಾಗಿರುತ್ತೇವೋ ಆಗ ನಮ್ಮ ವೈಫಲ್ಯವನ್ನು ನಿರೀಕ್ಷಿಸಿ ಮತ್ತು ಸಾಮರ್ಥ್ಯಗಳನ್ನು ಅನುಮಾನಿಸುತ್ತಾರೆ; ಅಂತಹ ಸಂದರ್ಭದಲ್ಲಿ ಮನಸ್ಸು ಕೊಂಚ ಪಥ ಬದಲಿಸಿ ಕೋಪಕ್ಕೆ ತುತ್ತಾಗುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಸಹನೆುಂದ ನಗುತ್ತಲೇ ಸವಾಲನ್ನು ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಆಗ ನಮ್ಮ ಬಗ್ಗೆ ಹೆಚ್ಚಿನ ವಿಶ್ವಾಸ ಮತ್ತು ನಂಬಿಕೆ ಮೂಡುತ್ತದೆ. ಇದರಿಂದಾಗಿ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಜೀವನದಲ್ಲಿ ಸಂತೋಷ ಮತ್ತು ಪ್ರಗತಿಗೆ ಸಕಾರಾತ್ಮಕ ಮನೋಭಾವ ಅತ್ಯಗತ್ಯ. ಇಂತಹ ಮನಸ್ಥಿತಿ ಹೊಂದಿರುವವರ ಜೀವನದಲ್ಲಿ ಬೆಳಕು, ಭರವಸೆ ಮತ್ತು ಉತ್ಸಾಹ ಸದಾ ತುಂಬಿರುತ್ತದೆ. ಜೀವನದಲ್ಲಿ ಇಂತಹ ಮನೋಭಾವ ಅಳವಡಿಸಿಕೊಳ್ಳುವುದರಿಂದ ಎಲ್ಲವೂ ಯಾವಾಗಲೂ ಸರಾಗವಾಗಿ ಚಲಿಸುತ್ತದೆ.
ರಸ್ತೆಯಲ್ಲಿ ಯಾವುದೇ ಉಬ್ಬುಗಳು ಇರುವುದಿಲ್ಲ ಎಂದು ತೀರ್ಮಾನಿಸಲಾಗದು. ಅನಿರೀಕ್ಷಿತವಾಗಿ ಸಿಗುವ ಉಬ್ಬುಗಳು, ಅಡೆತಡೆಗಳನ್ನು ಎದುರಿಸಿ ದಾಟಿ ನಡೆದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಬದಲಾಗಿ ಕೇವಲ ಅಸೂಯೆ, ಕೋಪದ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಯಾವ ಯಶಸ್ಸನ್ನೂ ಗಳಿಸಲಾಗದು. ಜೀವನದಲ್ಲಿ ಸ್ನೇಹ, ಆತ್ಮೀಯತೆ, ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಂಡು ಅಳವಡಿಸಿಕೊಂಡರೆ ಎದುರಿಸಬಹುದಾದ ಯಾವುದೇ ಹಿನ್ನಡೆ ಏನೂ ಮಾಡಲಾಗದು ಹಾಗೂ ಮನಸ್ಸಿನ ಸ್ಥಿತಿಯನ್ನು ಬದಲಾಸಲಾಗದು. ಜೊತೆಗೆ ಯಾವುದೇ ಹಿನ್ನೆಡೆಯ ನಡುವೆಯೂ ಮುಂದುವರಿಯಬಹುದು. ಜೀವನ ಪ್ರೀತಿಯನ್ನು ಅರಿತಾಗ, ತಾಳ್ಮೆಯನ್ನು ರೂಢಿಸಿಕೊಂಡಾಗ ಮಾತ್ರ ಕೋಪವನ್ನು ಗೆಲ್ಲಬಹುದು ಮತ್ತು ಯಶಸ್ಸಿನ ಹಾದಿಯನ್ನು ಸುಲಭವಾಗಿ ಕ್ರಮಿಸಬಹುದು. ಅಸೂಯೆ, ಕೋಪ ಯಾವತ್ತೂ ಮನುಷ್ಯನ ಅಪಜಯಕ್ಕೆ ಕಾರಣ ಎಂಬುದನ್ನು ಯಾವತ್ತೂ ಮರೆಯದಿರಿ.
ಲಕ್ಷ್ಮೀಕಾಂತ್ ಎಲ್ ವಿ
ತುಮಕೂರು
ಮೊ. 9945803434

Get real time updates directly on you device, subscribe now.

Comments are closed.

error: Content is protected !!