ಗುಬ್ಬಿ: ಈ ನಾಡಿನ ಅನೇಕ ಮಹನೀಯರ ಹೋರಾಟದ ಪ್ರತಿಫಲದಿಂದ ಕರ್ನಾಟಕ ಏಕೀಕರಣಗೊಂಡು ಸುವರ್ಣ ಸಂಭ್ರಮ ಆಚರಿಸಲು ಸಾಧ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಾದಾಪುರ ಶಿವಪ್ಪ ತಿಳಿಸಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಹೃದಯ ವೈಶಾಲ್ಯತೆಗೆ ಹೆಸರುವಾಸಿಯಾಗಿರುವ ಕನ್ನಡಿಗರ ಮನಸ್ಥಿತಿಯನ್ನು ಅನ್ಯ ಭಾಷಿಕರು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದಲೇ ಇಂದು ಬೆಂಗಳೂರಿನಲ್ಲಿ ಶೇ.75 ರಷ್ಟು ಹೊರ ರಾಜ್ಯದವರು ಇದ್ದರೆ, ಶೇ.25 ರಷ್ಟು ಮಾತ್ರ ಕನ್ನಡಿಗರು ಇರುವ ಪರಿಸ್ಥಿತಿ ನಿರ್ಮಾಣವಾಗಿದೆ, ಅದರಿಂದಲೇ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲು ಸಂಚು ರೂಪಿಸುತ್ತಿದ್ದಾರೆ, ಕನ್ನಡಿಗರು ಸ್ವಾಭಿಮಾನಿಗಳಾಗಿ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗೆ ಮುಂದಾಗ ಬೇಕೆಂದು ಕರೆ ನೀಡಿದರು.
ಇತ್ತೀಚೆಗೆ ಆಂಗ್ಲ ಭಾಷಾ ವ್ಯಾಮೋಹ ಹೆಚ್ಚಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ದುರಾದೃಷ್ಟಕರ, ಆದ್ದರಿಂದ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ವಿದೇಶಗಳಲ್ಲಿರುವ ಕನ್ನಡಿಗರು ಭಾಷೆಯ ವ್ಯಾಮೋಹ ಹೆಚ್ಚಿಸಿಕೊಳ್ಳುತ್ತಿದ್ದರೆ, ಕನ್ನಡಿಗರೇ ದೂರ ಸರಿಯುತ್ತಿರುವುದು ದುರಾದೃಷ್ಟಕರ ಎಂದ ಅವರು ಈ ನಾಡಿನ ಎಲ್ಲಾ ಸಾಹಿತಿಗಳು ಉತ್ತಮ ಸಾಹಿತ್ಯ ರಚನೆ ಮಾಡಿರುವುದರಿಂದಲೇ ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಬಿ.ಆರತಿ ಮಾತನಾಡಿ ರಾಜ್ಯೋತ್ಸವ ಕನ್ನಡಿಗರ ಹೆಮ್ಮೆಯ ಹಬ್ಬವಾಗಿದೆ, ಶಾಂತಿಗೆ ಹೆಸರುವಾಸಿಯಾಗಿರುವ ಈ ನಾಡಿನಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ, ಸಂಭ್ರಮಿಸುವ ಜೊತೆಗೆ ಎಲ್ಲರ ಸಹಕಾರದಿಂದ ಮಾತ್ರ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದರು.
ಸನ್ಮಾನಿತರಾದ ಸಾಹಿತಿ ಅರುಣ್ ಮಾತನಾಡಿ ರಾಜ್ಯೋತ್ಸವ ಇಡೀ ವಿಶ್ವದಲ್ಲಿಯೇ ದೊಡ್ಡ ಹಬ್ಬವಾಗಿದೆ, ಈ ಆಚರಣೆ ಒಂದು ದಿನಕ್ಕೆ ಸೀಮಿತವಾಗಿರದೆ, ನಿತ್ಯೋತ್ಸವವಾಗ ಬೇಕು, ಈ ನಾಡಿನ ಪರಂಪರೆ ವಿಶ್ವಮಟ್ಟಕ್ಕೆ ಬೆಳೆಸಲು ಎಲ್ಲರೂ ಒಗ್ಗೂಡಬೇಕಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಎಂಟು ಮಂದಿ ಸಾಧಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇಓ ಪರಮೇಶ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಪ್ರಭಾರ ಬಿಇಒ ಮಧುಸೂದನ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಯತೀಶ್, ಸಿಪಿಐ ಗೋಪಿನಾಥ್, ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಾಜಿ ಸೈನಿಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Comments are closed.