ಕನ್ನಡದ ಹಬ್ಬ ಒಂದು ದಿನಕ್ಕೆ ಸೀಮಿತವಾಗದಿರಲಿ

78

Get real time updates directly on you device, subscribe now.


ಮಧುಗಿರಿ: ಕನ್ನಡದ ಹಬ್ಬ ಒಂದು ದಿನಕ್ಕೆ ಸೀಮಿತವಾಗಿರದೇ ವರ್ಷದ ಎಲ್ಲಾ ದಿನಗಳಲ್ಲೂ ಕನ್ನಡ ತೇರು ಎಳೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ನಾಡಿನ ಹಬ್ಬ, ನಮ್ಮ ರಾಜ್ಯದ ಹೆಮ್ಮೆಯ ಹಬ್ಬ, ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿ ಇಂದಿಗೆ 50 ವರ್ಷಗಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಂತೆ ಕನ್ನಡದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ಬಹಳಷ್ಟು ಮಹನೀಯರು ರಾಜ್ಯಕ್ಕಾಗಿ ತ್ಯಾಗ ಮಾಡಿದ್ದಾರೆ, ರಾಷ್ಟ್ರೀಯ ಹಬ್ಬಕ್ಕೆ ಗೌರವ ಸಲ್ಲಿಸುವಂತೆ, ರಾಜ್ಯದ ಹಬ್ಬಕ್ಕೂ ಅದೇ ರೀತಿಯ ಗೌರವ ಸಿಗುವಂತಾಗಬೇಕು, ಪ್ರತೀ ಮಗುವಿನ ಕೈಯಲ್ಲೂ ಕನ್ನಡ ಬಾವುಟ ಇರುವಂತಾಗಬೇಕು, ಈ ಮೂಲಕ ಮಕ್ಕಳ ಮನಸ್ಸಿನಲ್ಲಿ ಕನ್ನಡ ನಾಡಿನ ಬಗ್ಗೆ ಗೌರವ ಮೂಡಿಸುವಂತಾಗಬೇಕು, ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು, ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ತಾಲೂಕಿನ ಕನ್ಮಡ ಭವನಕ್ಕೆ 1 ಕೋಟಿಗೂ ಹೆಚ್ಚು ಅನುದಾನ ನೀಡಿ ಕನ್ನಡ ಭವನ ಪೂರ್ಣಗೊಳ್ಳಲು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಉಪ ವಿಭಾಗಾಧಿಕಾರಿ ಕೃಷಿ ಆನಂದ್ ಮಾತನಾಡಿ, ಕನ್ನಡ ಭಾಷೆಗೆ 2,000 ವರ್ಷಗಳ ಇತಿಹಾಸವಿದೆ ಹಾಗೂ ಕನ್ನಡ ಲಿಪಿಗೆ ಹಲ್ಮಿಡಿ ಶಾಸನದ ಪ್ರಕಾರ 1500 ವರ್ಷಗಳ ಇತಿಹಾಸವಿದೆ, ಈ ನಾಡಿನಲ್ಲಿ ಆಳ್ವಿಕೆ ನಡೆಸಿದ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಮುಂತಾದವರು ದೇವಾಲಯ, ಅರಮನೆ, ಕೋಟೆ, ಸೌಧ ಹಾಗೂ ಸ್ಮಾರಕಗಳನ್ನು ನಿರ್ಮಿಸಿ ಕರ್ನಾಟಕದ ವಾಸ್ತುಶಿಲ್ಪ ಕಲೆಗಳು ಮತ್ತು ಸಂಸ್ಕೃತಿಯನ್ನು ಶ್ರೀಮಂತವಾಗಿರಿಸಿದ್ದಾರೆ, ನಮ್ಮ ಕನ್ನಡ ನಾಡು ಕರಾವಳಿ, ಮಲೆನಾಡು, ಬಯಲು ಸೀಮೆಗಳನ್ನು ಹೊಂದಿರುವ ಈ ನಾಡಿನಲ್ಲಿ ಕೃಷ್ಣೆ, ತುಂಗೆ ಭದ್ರ, ಕಾವೇರಿ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ಶರಾವತಿ ಮುಂತಾದ ನದಿಗಳನ್ನು ಗಿರಿ ಶ್ರೇಣಿಗಳನ್ನು, ಅರಣ್ಯಗಳನ್ನು, ಚಿನ್ನ, ಕಬ್ಬಿಣ, ಯುರೇನಿಯಂ, ತಾಮ್ರಗಳು ಸಿಗುವ ಗಣಿಗಳನ್ನು ಹೊಂದಿದೆ, ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹಸಿರು, ಕನ್ನಡಮ್ಮನ ಉತ್ಸವದ ಈ ದಿನ ಪ್ರತಿ ಮನಸಲ್ಲೂ ಪ್ರತಿ ಉಸಿರಲ್ಲೂ ಕನ್ನಡಕ್ಕೊಂದು ಬಡಿತವಿರಲಿ ಎಂದು ತಮ್ಮ ಸಂದೇಶದಲ್ಲಿ ಕರೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ, ತಾಪಂ ಇಓ ಲಕ್ಷ್ಮಣ್, ಡಿಡಿಪಿಐ ಮಂಜುನಾಥ್, ಡಿವೈಎಸ್ಪಿ ರಾಮಚಂದ್ರಪ್ಪ, ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಬಿಇಓ ಹನುಮಂತರಾಯಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಕಲಾರಂಗದ ಅಧ್ಯಕ್ಷ ಚಿ.ಸು.ಕೃಷ್ಣಮೂರ್ತಿ, ಸಿಡಿಪಿಓ ಅನಿತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮಯ್ಯ, ಮಾಜಿ ಅಧ್ಯಕ್ಷ ಎನ್.ಮಹಾಲಿಂಗೇಶ್, ಪುರಸಭೆ ಸದಸ್ಯ ಸಾದಿಕ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!