ಕುಣಿಗಲ್: ಕನ್ನಡ ಭಾಷೆಯು ಮಕ್ಕಳಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಮಕ್ಕಳು ಕನ್ನಡ ಭಾಷೆ ಬಳಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲೂರು ವೆಂಕಟರಾಯರು, ಚನ್ನವೀರ ಕಣವಿ, ಕುವೆಂಪು ಸೇರಿದಂತೆ ಹಲವು ಮಹನೀಯರು ಕನ್ನಡ ಭಾಷೆಯ ಸಮಗ್ರ ಬೆಳವಣಿಗೆಗೆ ತಮ್ಮದೆ ಆದ ಕೊಡುಗೆ ನೀಡಿದ್ದು, ಕರ್ನಾಟಕ ಏಕೀಕರಣದ ನಂತರ ರಾಜ್ಯವು ಹಲವು ಭಾಷಾ ಸಮಸ್ಯೆ ಎದುರಿಸುವಂತಾಗಿದ್ದು ಎಲ್ಲವನ್ನು ಮೆಟ್ಟಿ ನಿಂತು ಕನ್ನಡ ಭಾಷೆಯು ತನ್ನದೆ ಅದ ಛಾಪು ಮೂಡಿಸಿದೆ. ಕನ್ನಡ ಭಾಷೆಯ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಲು ಭಾಷೆಯ ಮಹತ್ವದ ಬಗ್ಗೆ ಹೇಳುವ ಹಲವು ಕಾರ್ಯಕ್ರಮಗಳಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಮಾಡುವುದರ ಮೂಲಕ ಭಾಷೆಯ ಜೀವಂತಿಕೆ ಮತ್ತಷ್ಟು ಸೊಗಸಾಗುವಂತೆ ಮಾಡಬೇಕಿದೆ ಎಂದರು.
ಧ್ವಜಾರೋಹಣೆ ನೆರವೇರಿಸಿದ ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ಕರುನಾಡು ಕರ್ನಾಟಕವಾಗಲು ಹಲವು ನಾಡೋಜರ ಶ್ರಮ, ಪರಿಶ್ರಮ ಇದೆ, ಕರ್ನಾಟಕದಲ್ಲಿ ವಲಸಿಗರೆ ಹೆಚ್ಚಾಗುತ್ತಿರುವ ಕಾರಣ ಕನ್ನಡ ಭಾಷೆಯ ಬಳಕೆಯ ಬಗ್ಗೆ ಅಸಕ್ತಿ ಕಡಿಮೆ ಯಾಗುತ್ತಿರುವುದು ಆತಂಕಕಾರಿಯಾಗಿದೆ, ಈನೆಲದ ಕನ್ನಡಿಗರು ಪ್ರತಿಯೊಂದು ಹಂತದಲ್ಲೂ ಕನ್ನಡ ಭಾಷೆನ್ನೆ ಬಳಸುವ ಮೂಲಕ ವಲಸಿಗರೂ ನಮ್ಮ ಭಾಷೆ ಕಲಿಯುವ ನಿಟ್ಟಿನಲ್ಲಿ ಪ್ರೇರಪಿಸಬೇಕಿದೆ ಎಂದರು.
ಪಟ್ಟಣದ ಸ್ಟೆಲ್ಲಾಮೇರಿಸ್ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳು ಆರಕ್ಕೂ ಹೆಚ್ಚು ಜಾನಪದ ಕಲಾ ಕುಣಿತದ ಪ್ರಾಕಾರ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು, ಇಒ ಜೋಸೆಫ್, ಡಿವೈಎಸ್ಪಿ ಲಕ್ಷ್ಮೀಕಾಂತ, ಸಿಪಿಐಗಳಾದ ನವೀನಗೌಡ, ಮಾದ್ಯಾ ನಾಯಕ್, ಬಿಇಒ ಬೊರೇಗೌಡ, ಮುಖ್ಯಾಧಿಕಾರಿ ಶಿವಪ್ರಸಾದ್, ಪುರಸಭೆ ಸದಸ್ಯರು, ಕಸಾಪ ಅಧ್ಯಕ್ಷ ರಮೇಶ್ ಇತರರು ಇದ್ದರು.
Comments are closed.