ತುಮಕೂರು: ಕನ್ನಡ ನಾಡು ನುಡಿಯ ಏಳ್ಗೆಗಾಗಿ ರಾಜ್ಯ ಸರ್ಕಾರ ಕಂಕಣ ಬದ್ಧವಾಗಿದೆ, ಕನ್ನಡ ನಾಡಿನ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣವಾಗಿ 1ನೇ ನವೆಂಬರ್ 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದ್ದು, ಕರ್ನಾಟಕ ಸಂಭ್ರಮ- 50 ಘೋಷಣೆಯಡಿ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮ ಇಡೀ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಜ್ಯ ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನೇಕ ಮಹತ್ವಗಳನ್ನು ಒಳಗೊಂಡಿರುವ ವಿಶಾಲವಾದ ಜಿಲ್ಲೆಯಾಗಿದೆ, ಮಧುಗಿರಿಯ ಏಕಶಿಲಾ ಬೆಟ್ಟ, ಕೈದಾಳ, ಶಿರಾ, ಮುಂತಾದ ಪ್ರಾಂತ್ಯಗಳು ಜಿಲ್ಲೆಯ ಚಾರಿತ್ರಿಕ ಮಹತ್ವವನ್ನು ಸಾರುತ್ತಿವೆ ಎಂದರು.
ಪ್ರಣಾಳಿಯಲ್ಲಿ ಘೋಷಿಸಿದಂತೆ ನಮ್ಮ ಸರ್ಕಾರ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ, ಈ ಪೈಕಿ ಶಕ್ತಿ ಯೋಜನೆಯಡಿ ತುಮಕೂರು ವಿಭಾಗದಲ್ಲಿ ಪ್ರತಿದಿನ 1.70 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ, ಜೂನ್ 11 ರಿಂದ ಇಲ್ಲಿಯವರೆಗೆ 2.22 ಕೋಟಿ ಮಹಿಳಾ ಪ್ರಯಾಣಿಕರು ಜಿಲ್ಲೆಯಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರತಿ ಫಲಾನುಭವಿಗೆ 10 ಕೆಜಿ ಆಹಾರಧಾನ್ಯ ವಿತರಿಸುವ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಆಹಾರ ಧಾನ್ಯ ನೀಡಿ ಉಳಿದ 5 ಕೆಜಿ ಆಹಾರ ಧಾನ್ಯದ ಬದಲು ಅರ್ಹ ಪಡಿತರ ಚೀಟಿದಾರರ ಪ್ರತಿ ಫಲಾನುಭವಿಗೆ ರೂ.170 ರಂತೆ ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ 2023ನೇ ಜುಲೈ ಮಾಹೆಯಿಂದ ಇಲ್ಲಿಯವರೆಗೆ ಒಟ್ಟು 95,38,34,470 ಕೋಟಿ ರೂ. ಜಮೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸ್ತುತ 7,81,753 ಗೃಹ ಬಳಕೆ ಗ್ರಾಹಕರಿದ್ದು, ಈ ಪೈಕಿ 6,13,371 ಗೃಹ ಬಳಕೆ ಗ್ರಾಹಕರು ಯೋಜನೆಯ ಲಾಭ ಪಡೆದಿರುತ್ತಾರೆ, ಗೃಹಲಕ್ಷ್ಮೀ ಯೋಜನೆಯ ಆರಂಭದಿಂದ ಇಲ್ಲಿಯವರೆಗೆ 5,14,526 ಫಲಾನುಭವಿಗಳ ಖಾತೆಗೆ ರೂ. 2,000 ಗಳಂತೆ ಒಟ್ಟು 102,90,52,000 ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಸೆಪ್ಟೆಂಬರ್ 25 ರಂದು ತುಮಕೂರು ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ಮಾಡಲಾಗಿದ್ದು, ಅಕ್ಟೋಬರ್ 9 ರಂದು ಕುಣಿಗಲ್ ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗಿದೆ, ಜನರ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ನೀಡಲು ಸರ್ಕಾರ ಕಂಕಣ ಬದ್ದವಾಗಿದ್ದು, ಈ ಕಾರ್ಯಕ್ರಮಗಳಿಂದ ಜನರಿಗೆ ಅನುಕೂಲವಾಗಿರುತ್ತದೆ ಎಂದರು.
ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸುವ ಸಂಬಂಧ ಲಭ್ಯವಿರುವ ಸರ್ಕಾರಿ ಜಮೀನುಗಳಲ್ಲಿ 2122.33 ಎಕರೆ ಗುರ್ತಿಸಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ, ಇದೇ ರೀತಿ ಗ್ರಾಮ ಪಂಚಾಯತಿಗಳಲ್ಲಿ ಉದ್ಯಾನವನಕ್ಕೆ 233-11 ಎ/ಗು ಗುರುತಿಸಲಾಗಿದೆ ಹಾಗೂ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನಕ್ಕೆ ಅವಶ್ಯವಿರುವ 539-03 ಎ/ಗು ಸರ್ಕಾರಿ ಜಮೀನುಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.
ತುಮಕೂರು ಜಿಲ್ಲೆಯ ವಸಂತ ನರಸಾಪುರದಲ್ಲಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿ ಆಹಾರ ಸಂಸ್ಕರಣೆ, ಜಪಾನ್ ಟೆಕ್ನಾಲಜಿ ಸೇರಿದಂತೆ ವಿವಿಧ ರೀತಿಯ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಜಿಲ್ಲೆಯ ಜನರಿಗೆ ನೇರವಾಗಿ ಉದ್ಯೋಗ ದೊರಕುತ್ತಿದ್ದು, ಇದರಿಂದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿದೆ, ಇನ್ನು ಹೆಚ್ಚಿನ ಸೌಲಭ್ಯ ನೀಡಿ ತುಮಕೂರು ಜಿಲ್ಲೆಯನ್ನು ಆರ್ಥಿಕವಾಗಿ ಸಧೃಡಗೊಳಿಸಲು ಸರ್ಕಾರದಿಂದ ಎಲ್ಲಾ ರೀತಿಯ ಕ್ರಮ ವಹಿಸಲಾಗಿರುತ್ತದೆ ಎಂದರು.
ಜೆಜೆಎಂ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ 10 ತಾಲ್ಲೂಕು, 330 ಗ್ರಾಮ ಪಂಚಾಯಿತಿಗಳ ಎಲ್ಲಾ ಜನ ವಸತಿಗಳಲ್ಲಿ ಕುಟುಂಬಗಳಿಗೆ ಬಹುಗ್ರಾಮ ಯೋಜನೆ ಹಾಗೂ ಏಕಗ್ರಾಮ ಯೋಜನೆಯಡಿ ಜಲಮೂಲ ಆಧರಿಸಿ ಮನೆ ಮನೆಗೆ ಗಂಗೆ ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲೆಯಲ್ಲಿ ಒಟ್ಟು 3699 ಕಾಮಗಾರಿಗಳನ್ನು ರೂ. 2205,70 ಕೋಟಿ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ, ಯೋಜನೆಯಡಿ ಒಟ್ಟು 292 ಕಾಮಗಾರಿ ಪೂರ್ಣಗೊಂಡಿದ್ದು, 865 ಕಾಮಗಾರಿ ಪ್ರಗತಿಯಲ್ಲಿವೆ, ಪ್ರಸಕ್ತ ವರ್ಷದಲ್ಲಿ 2542 ಕಾಮಗಾರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 99 ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳ್ಳುಳ್ಳ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ, 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ್ಳುಳ್ಳ ತಾಯಿ- ಮಕ್ಕಳ ಆಸ್ಪತ್ರೆ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ 10 ಹಾಸಿಗೆಗಳ್ಳುಳ್ಳ ಪೌಷ್ಠಿಕ ಪುನಃಶ್ಚೇತನ ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ, 100 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನು 200 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ಗೌಡ, ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ ಹಾಜರಿದ್ದರು.
Comments are closed.