ತುಮಕೂರು: ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು 2023ರ ಡಿಸೆಂಬರ್ 2 ಮತ್ತು 3 ರಂದು ದೆಹಲಿಯಲ್ಲಿ ಪತ್ತಿನ ಸಂಘಗಳ ಬೃಹತ್ ಸಮಾವೇಶವನ್ನು ಸಹಕಾರಿ ಭಾರತಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳ ನಿ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ರಾಜ್ಯದ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳ, ನಿರ್ದೇಶಕ ಹಾಗೂ ರಾಜ್ಯ ಸಂಯೋಜಕ ಜಿ.ಮಲ್ಲಿಕಾರ್ಜುನಯ್ಯ ಮನವಿ ಮಾಡಿದ್ದಾರೆ.
ಗುರುಕುಲ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪತ್ತಿನ ಸಹಕಾರಿ ಸಂಘಗಳು ಡಿಫಾಸಿಟ್ ಇನ್ಸೂರೆನ್ಸ್ ಲಾಭ ಪಡೆಯುವುದು, ಆದಾಯ ತೆರಿಗೆ ಇಲಾಖೆಯ ಕಿರುಕುಳ ತಪ್ಪಿಸುವುದು ಸೇರಿದಂತೆ ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಇವುಗಳ ಕುರಿತು ಚರ್ಚೆ ನಡೆಸಿ ಕೇಂದ್ರದ ಸಹಕಾರಿ ಸಚಿವ ಅಮಿತ್ ಷಾ ಅವರಿಗೆ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಸಮಾವೇಶ ಸಹಕಾರಿಯಾಗಲಿದೆ ಎಂದರು.
ಡಿಸೆಂಬರ್ 2 ಮತ್ತು 3 ರಂದು ದೆಹಲಿಯಲ್ಲಿ ನಡೆಯುವ ಪತ್ತಿನ ಸಹಕಾರಿಗಳ ಸಮಾವೇಶದಲ್ಲಿ ಕನಿಷ್ಠ 10 ಮಂದಿ ಸೇರುವ ನಿರೀಕ್ಷೆಯಿದೆ, ಸಮಾವೇಶದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಷಾ ಅವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ, ಈ ಸಂಬಂಧ ರಾಜ್ಯದ ಸುಮಾರು 2000ಕ್ಕೂ ಹೆಚ್ಚು ಜನ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚಲೋ ದಿಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪತ್ತಿನ ಸಹಕಾರಿಗಳೆಲ್ಲರೂ ಸ್ವಯಂ ಪ್ರೇರಿತರಾಗಿ ಚಲೋ ದಿಲ್ಲಿಯಲಿ ಪಾಲ್ಗೊಳ್ಳುವಂತೆ ಜಿ.ಮಲ್ಲಿಕಾರ್ಜುನಯ್ಯ ಕೋರಿದರು.
ಅಖಿಲ ಭಾರತ ಮಟ್ಟದ ಪತ್ತಿನ ಸಂಘಗಳ ಬೃಹತ್ ಸಮಾವೇಶದಲ್ಲಿ ಸಹಕಾರಿ ಬ್ಯಾಂಕುಗಳಿಗೆ ಇರುವಂತೆ, ಪತ್ತಿನ ಸಹಕಾರಿ ಸಂಘಗಳಿಗೂ ಗ್ರಾಹಕರು ಇಟ್ಟಿರುವ ಡಿಪಾಸಿಟ್ ಗೆ ವಿಮೆ ವಿಸ್ತರಿಸಬೇಕು, ಪತ್ತಿನ ಸಂಘಗಳಿಗೂ ಅದಾಯ ತೆರಿಗೆ 80 ಪಿ(2) ಜೊತೆಗೆ 269 ಎಸ್ಎಸ್ ಮತ್ತು 269 ಟಿ ಗಳನ್ನು ಸಹಕಾರಿ ಬ್ಯಾಂಕು ಮತ್ತು ಪತ್ತಿನ ಸಂಘ ಎಂಬ ಭೇದ ಭಾವವಿಲ್ಲದೆ ದೊರೆಯುವಂತೆ ಮಾಡಬೇಕು, ಪತ್ತಿನ ಸಂಘಗಳು ನಗದು ರೂಪದಲ್ಲಿ ಓರ್ವ ವ್ಯಕ್ತಿಯಿಂದ 2 ಲಕ್ಷದ ಒಳಗೆ ಮಾತ್ರ ಪಡೆಯಲು ಇರುವ ಷರತ್ತು ರದ್ದು ಮಾಡಬೇಕು, ಪತ್ತಿನ ಸಂಘಗಳು ಗ್ರಾಹಕರ ಸಿಬಿಲ್ ಸ್ಕೋರ್ ನೋಡುವಂತಹ ಅವಕಾಶ ಕಲ್ಪಿಸಬೇಕು, ಸಾಲ ವಸೂಲಾತಿಗೆ ಅನುಕೂಲವಾಗುವಂತೆ ಸರ್ ಪೇಸ್ ಗೆ ಅವಕಾಶ ನೀಡಬೇಕು, ಸರಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲು ಅನುಕೂಲ ಕಲ್ಪಿಸಬೇಕು, ಕೇಂದ್ರ ಸರಕಾರದ ಮುದ್ರಾ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಪತ್ತಿನ ಸಂಘಗಳು ನೀಡಲು ಅವಕಾಶ ಕಲ್ಪಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಕುರಿತು ವಿಸ್ಕೃತ ಚರ್ಚೆ ನಡೆಯಲಿದೆ, ಹಾಗಾಗಿ ರಾಜ್ಯದ ಎಲ್ಲಾ ಪತ್ತಿನ ಸಂಘ ಮತ್ತು ಸೊಸೈಟಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ಸಂಯೋಜಕ ಜಿ.ಮಲ್ಲಿಕಾರ್ಜುನಯ್ಯ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗುರುಕುಲ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಜಶೇಖರ್, ಜಗದೀಶ್ ಇದ್ದರು.
Comments are closed.