ಕೌಶಲ್ಯತೆಯಿಂದ ಉದ್ಯೋಗ ಪಡೆಯಲು ಸಾಧ್ಯ

ಮಹಿಳೆಯರು ಆಸಕ್ತಿ ಕ್ಷೇತ್ರದಲ್ಲಿ ತರಬೇತಿ ಪಡೆಯಲಿ: ಜ್ಯೋತಿಗಣೇಶ್

107

Get real time updates directly on you device, subscribe now.


ತುಮಕೂರು: ವೃತ್ತಿ ಕೌಶಲ್ಯತೆ ಹೊಂದಿದವರಿಗೆ ಇಂದು ಉದ್ಯೋಗಾವಕಾಶ ವಿಫುಲವಾಗಿವೆ, ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ, ಕೈಗಾರಿಕೆಗಳಿಗೆ ಕೌಶಲ್ಯತೆಯ ಮಾನವ ಸಂಪನ್ಮೂಲದ ಬೇಡಿಕೆಯಿದ್ದು ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಲಿದೆ, ಕೌಶಲ್ಯ ಪರಿಣತಿ ಹೊಂದಿ ಉದ್ಯೋಗ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಗುರುವಾರ ನಗರದ ಸಮರ್ಥ್ ಫೌಂಡೇಷನ್ ಕಚೇರಿಯಲ್ಲಿ ಸಂಸ್ಥೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕೈಗಾರಿಕೆಗಳಲ್ಲಿ ವೃತ್ತಿಪರತೆಯ ಕೌಶಲ್ಯತೆಯ ಪಡೆದವರಿಗೆ ಉದ್ಯೋಗಾವಕಾಶ ಹೆಚ್ಚಾಗಿವೆ, ಈ ಕಾರಣದಿಂದ ಕೌಶಲ್ಯ ತರಬೇತಿಗೆ ಸರ್ಕಾರವೂ ಆದ್ಯತೆ ನಿಡುತ್ತಿದೆ, ಜೊತೆಗೆ ಸಮರ್ಥ್ ಫೌಂಡೇಷನ್ನಂತಹ ಸಂಸ್ಥೆಗಳು ಟೈಲರಿಂಗ್, ಕಂಪ್ಯೂಟರ್, ಬ್ಯೂಟಿಷಿಯನ್ನಂತಹ ವೃತ್ತಿ ಕೌಶಲ್ಯ ತರಬೇತಿ ನೀಡಿ ನೆರವಾಗುತ್ತಿವೆ, ಇವುಗಳ ಕಲಿಕೆಗೆ ಉನ್ನತ ಶಿಕ್ಷಣ ಬೇಕಾಗಿಲ್ಲ, ಸಾಮಾನ್ಯ ಶಿಕ್ಷಣ ಪಡೆದವರೂ ಕೌಶಲ್ಯ ತರಬೇತಿ ಪಡೆಯಬಹುದು ಎಂದು ಹೇಳಿದರು.
ವಿಶೇಷವಾಗಿ ಮಹಿಳೆಯರು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಪಡೆದರೆ ಉದ್ಯೋಗ ಪಡೆಯಬಹುದು, ಇಲ್ಲವೇ ಸ್ವಂತ ಉದ್ದಿಮೆ ಸ್ಥಾಪಿಸಿ ಸ್ವಾವಲಂಭಿಯಾಗಿ ಬೆಳೆಯಬಹುದು, ಮತ್ತಷ್ಟು ಜನರಿಗೆ ಉದ್ಯೋಗ ನೀಡಲೂ ಅವಕಾಶವಿದೆ, ವೃತ್ತಿ ಕೌಶಲ್ಯತೆ ಹೊಂದಿರುವವರಿಗೆ ಸಾಲ ಸೌಲಭ್ಯ ನೀಡಲು ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದೆ, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗುವಂತೆ ಸಲಹೆ ಮಾಡಿದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಕೌಶಲ್ಯ ಎಂಬುದು ವಿಶಿಷ್ಟ ವಿದ್ಯೆ, ಕಲಿತ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ, ಅಂತಹ ಕೌಶಲ್ಯತೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು.

ಶಿಸ್ತು ಶ್ರದ್ಧೆಯಿಂದ ವೃತ್ತಿ ಕುಶಲತೆ ಕಲಿತರೆ ಅದು ದುಡಿಮೆಗೆ ದಾರಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ, ಬಡತನ, ನಿರುದ್ಯೋಗ ನಿವಾರಣೆಗೆ, ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಕೌಶಲ್ಯ ತರಬೇತಿ ಸುಲಭದ ದಾರಿ ಎಂದು ಹೇಳಿದರು.
ಸಮರ್ಥ್ ಫೌಂಡೇಷನ್ ಅಧ್ಯಕ್ಷ ಹಾಗೂ 26ನೇ ವಾರ್ಡ್ನ ನಗರ ಪಾಲಿಕೆ ಸದಸ್ಯ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಶಾಸಕ ಜ್ಯೋತಿಗಣೇಶ್ ಅವರು ನಗರದಲ್ಲಿ ಕುಡಿಯುವ ನೀರಿನ ಸೌಕರ್ಯ, ರಸ್ತೆಗಳ ಅಭಿವೃದ್ಧಿ, ಬಸ್ ನಿಲ್ದಾಣ, ಗ್ರಂಥಾಲಯ, ಕ್ರೀಡಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಿ, ನಗರಲ್ಲೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಜನರ ಮೆಚ್ಚಿನ ಶಾಸಕರಾಗಿದ್ದಾರೆ ಎಂದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ್ಯ ತರಬೇತಿ ಅತ್ಯಗತ್ಯ ಎಂದು ನಂಬಿರುವ ಶಾಸಕರು, ಕೌಶಲ್ಯ ತರಬೇತಿ ಪಡೆದವರಿಗೆ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಸಾಲ ಸೌಲಭ್ಯ ಕೊಡಿಸಿ ಅವರು ಸ್ವಂತ ವ್ಯವಹಾರ ಆರಂಭಿಸಿ ಆರ್ಥಿಕ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ ಎಂದರು.
ಸಮರ್ಥ್ ಫೌಂಡೇಷನ್ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!