ಗುಬ್ಬಿ: ವಸತಿ ಶಾಲೆಗಳಲ್ಲಿ ಮಕ್ಕಳ ಆಹಾರ ಮತ್ತು ಶಾಲೆಗಳ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಅವರು ಕಸಬಾ ಹೋಬಳಿ ಹೇರೂರಿನಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯನ್ನು ಸಂಪೂರ್ಣ ಪರಿಶೀಲನೆ ನಡೆಸಿದ ನ್ಯಾಯಾಧೀಶರು ಗೋದಾಮಿನಲ್ಲಿನ ಆಹಾರಗಳಿಗೆ ಹುಳ ಬಿದ್ದಿರುವುದನ್ನು ಕಂಡು ಕೆಂಡಮಂಡಲವಾದರು, ತಕ್ಷಣವೇ ಆಹಾರ ಧಾನ್ಯಗಳನ್ನು ಬದಲಾಯಿಸಿ ಗುಣಮಟ್ಟದ ಆಹಾರ ಧಾನ್ಯಗಳನ್ನು ಬಳಸಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಪ್ರಾಂಶುಪಾಲರನ್ನು ತಾರಾಟೆಗೆ ತೆಗೆದುಕೊಂಡರು.
ಯಾವುದೇ ಕಾರಣಕ್ಕೂ ಹುಳಬಿದ್ದು ಹಾಳಾಗಿರುವ ಆಹಾರ ಧಾನ್ಯಗಳನ್ನು ಬಳಸಬಾರದು, ಮಕ್ಕಳ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪೌಷ್ಟಿಕ ಆಹಾರ ಮುಖ್ಯವಾಗಿರುವುದರಿಂದ ಸಂಬಂಧಪಟ್ಟವರು ಶುದ್ಧ ದಿನಸಿ, ತರಕಾರಿಯಿಂದ ಆಹಾರ ತಯಾರಿಸಿ ಮಕ್ಕಳಿಗೆ ನೀಡಬೇಕು, ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲಾ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವಿಚಾರಿಸಿದ ನ್ಯಾಯಾಧೀಶರು ಶ್ರದ್ಧೆಯಿಂದ ಓದಿ ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದರು, ಯಾವುದೇ ಸಮಸ್ಯೆಯಾದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸುವಂತೆ ಸೂಚಿಸಿದ ನ್ಯಾಯಾಧೀಶರು ಶಾಲೆಯಲ್ಲಿ ಇರುವ ಸಮಸ್ಯೆ ಸರಿಪಡಿಸಿಕೊಂಡು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು, ವಸತಿ ಶಾಲೆಗಳಲ್ಲಿ ಮಕ್ಕಳು ಪೋಷಕರಿಂದ ದೂರ ಉಳಿಯುವುದರಿಂದ ಮಾನಸಿಕ ಮತ್ತು ದೈಹಿಕ ದೃಢತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಯಾವುದೇ ದೂರುಗಳು ಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಚಿದಾನಂದ್, ಕಾರ್ಯದರ್ಶಿ ಸುರೇಶ್, ವಕೀಲರಾದ ರವೀಶ್, ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಹಾಜರಿದ್ದರು.
Comments are closed.