ಕುಣಿಗಲ್: ಇನ್ನೊಂದು ತಿಂಗಳಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ನೀರಾವರಿ ಸಮಸ್ಯೆಗೆ ಪರಿಹಾರವಾಗಿ ಲಿಂಕ್ ಕೆನಾಲ್ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಶುಕ್ರವಾರ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ತರೇದಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಕೊತ್ತಗೆರೆಕೆರೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಾವರಿ ಸಮಸ್ಯೆ ಬಗೆಹರಿಸಲು ಇದೆ ಯೋಜನೆಯಡಿಯಲ್ಲಿ 17 ಕೆರೆ ತುಂಬಿಸಲು 17 ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆ ರೂಪಿಸಲಾಗಿದೆ, ತಾಲೂಕಿನ ಬಹುದಿನದ ಬೇಡಿಕೆಯಾದ ಲಿಂಕ್ ಕೆನಾಲ್ ಕಾಮಗಾರಿ ಸರ್ಕಾರದ ಮುಂದಿದ್ದು ಎಲ್ಲಾ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ, ಒಂದು ತಿಂಗಳ ಒಳಗೆ ಕಾಮಗಾರಿ ಚಾಲನೆಗೆ ಅಗತ್ಯ ಕ್ರಮ ಜರುಗಿಸಲಾಗುವುದು, ಮುಂದಿನ ಮೂರು ವರ್ಷದಲ್ಲಿ ತಾಲೂಕಿನಾದ್ಯಂತ ಅಗತ್ಯ ನೀರಾವರಿ, ರಸ್ತೆ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಿಸಲು ಹಲವು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಲಾಗುವುದು ಎಂದರು.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಬಿಜೆಪಿ, ಜೆಡಿಎಸ್ ಎಂದು ನೋಡದೆ ಎಲ್ಲಾ ಅರ್ಹರಿಗೂ ಯಾವುದೇ ತಾರತಮ್ಯ ಇಲ್ಲದೆ ಯೋಜನೆ ತಲುಪಿಸಲಾಗಿದೆ, ಆದರೆ ಯೋಜನೆ ಪಡೆದುಕೊಂಡವರೆ ಇಂದು ಯೋಜನೆ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನ, ಮನೆ ನೀಡಿರಲಿಲ್ಲ, ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿವೇಶನ, ಮನೆ ನೀಡಲು ಕ್ರಮ ಕೈಗೊಳ್ಳಲಾಗಿದೆ, ಕೊತ್ತಗೆರೆ ಹೋಬಳಿಯಲ್ಲಿ 41ಎಕರೆ ಪ್ರದೇಶ ಗುರುತಿಸಲಾಗಿದ್ದು ಮತ್ತಷ್ಟು ಜಾಗ ಗುರುತಿಸಲು ಅಧಿಕಾರಿಗಳಿಗೆ ಹೇಳಿದ್ದರೂ ಯಾವುದೇ ಕ್ರಮ ಮಾಡಿಲ್ಲ, 15 ದಿನದೊಳಗೆ ಅಗತ್ಯ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಅಧಿಕಾರಿಗಳು ಬೇರೆ ಜಾಗ ನೋಡಿಕೊಳ್ಳಬಹುದು ಎಂದರು.
ತಾಲೂಕಿನಲ್ಲಿ ಈ ಹಿಂದೆ ನಿವೇಶನ ಪತ್ರ ನೀಡಿದ್ದಾರೆ, ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಇಒ, ಗ್ರಾಪಂ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಇಲ್ಲ, ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಕೆಲಸ ಮಾಡಿಲ್ಲ, ಅಧಿಕಾರಿಗಳು ಜನ ಪರವಾಗಿ ಕೆಲಸ ಮಾಡದೆ ಇದ್ದಲ್ಲಿ ಇಲ್ಲಿಂದ ಹೋಗಬಹುದು, ಬದ್ಧತೆಯಿಂದ ಕೆಲಸ ಮಾಡದ ಅಧಿಕಾರಿಗಳನ್ನು ಕ್ಷಮಿಸುವ ಪ್ರಶ್ನೆ ಇಲ್ಲ, ಗ್ರಾಪಂನಲ್ಲಿ ಯಾವುದೇ ಸೇವೆ ನೀಡಲು ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ಪಿಡಿಒ ಹಣ ಕೇಳಿದಲ್ಲಿ ಕಠಿಣ ಕ್ರಮ ಜರುಗಿಸುವಂತೆ ತಾಪಂ ಇಒಗೆ ಸೂಚಿಸಿದಾಗ ಸ್ಥಳದಲ್ಲಿದ್ದ ಗ್ರಾಪಂ ಸದಸ್ಯರು, ಇಒ ಮೇಲೆ ಆರೋಪಿಸಿದಾಗ ವೇದಿಕೆಯಲ್ಲೆ ತಾಪಂ ಇಒಗೆ ತರಾಟೆಗೆ ತೆಗೆದುಕೊಂಡರು, ಜನಪರ ಆಡಳಿತ ನೀಡಬೇಕೆಂಬುದೆ ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದ್ದು ಜನತೆಗೆ ಸ್ಪಂದಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುವ ಧೋರಣೆ ಸರಿಯಲ್ಲ ಎಂದರು.
ತಾಲೂಕಿನಾದ್ಯಂತ ಎಲ್ಲಾ ಆಸ್ತಿ ಮಾಲೀಕರಿಗೆ ಇ-ಸ್ವತ್ತು ಉಚಿತವಾಗಿ ನೀಡಲು ಯೋಜನೆ ರೂಪಿಸಿದ್ದು ಈಗಾಗಲೆ ರಾಮನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ, ತಾಲೂಕಿನಲ್ಲೂ ಈ ನಿಟ್ಟಿನಲ್ಲಿ ಒಂದು ತಿಂಗಳೊಳಗೆ ಕ್ರಮ ವಹಿಸಲಾಗುವುದು, ಎರಡು ಗ್ರಾಪಂಗೆ ಒಂದರಂತೆ ಮಾದರಿ ಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಐದರಿಂದ ಎಂಟು ಕೋಟಿ ವೆಚ್ಚದಲ್ಲಿ ಖಾಸಗಿ ಶಾಲೆಗೆ ಪೈಪೋಟಿ ನೀಡುವಂತಹ ಗುಣಮಟ್ಟದ ಸರ್ಕಾರಿ ಮಾದರಿ ಶಾಲೆ ನಿರ್ಮಿಸಲಾಗುವುದು, ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕಿದೆ, ಮುಂದಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ಮಹತ್ವದಾಗಿದೆ, ಈಗ ಪಡೆಯಲಾಗಿರುವ ಅರ್ಜಿಗೆ ಇನ್ನೊಂದು ತಿಂಗಳೊಳಗೆ ಜನತೆಗೆ ಸೂಕ್ತ ಪರಿಹಾರ ನೀಡಬೇಕೆಂದು ತಾಕೀತು ಮಾಡಿದ ಸಂಸದರು, ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸದ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಸೂಕ್ತ ದಾಖಲೆ ಕ್ರೂಢೀಕರಿಸಿ ಯೋಜನೆ ತಲುಪುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು, ಗೃಹಜ್ಯೋತಿ ಯೋಜನೆ ಇನ್ನು ಅರ್ಹ ಕುಟುಂಬಗಳಿಗೆ ತಲುಪದಿರುವ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಸಿದ ಅವರು ಫಲಾನುಭವಿಗಳಿಗೆ ಅರಿವು ಮೂಡಿಸುವಂತೆ ಸೂಚಿಸಿದರು, ಗೃಹಲಕ್ಷ್ಮೀ ಯೋಜನೆಯ ಹಣ ಕೆಲವರಿಗೆ ಬಾರದೆ ಇರುವ ಬಗ್ಗೆ ಸಮಗ್ರ ದಾಖಲೆಗಳನ್ನು ಅಂಗನವಾಡಿ ಸಹಾಯಕಿಯವರು ಸಂಗ್ರಹಿಸಿ ಸವಲತ್ತು ಕೊಡಿಸಬೇಕೆಂದರು.
ಸಭೆಯಲ್ಲಿ ಜಮೀನು ಒತ್ತುವರಿ, ರಸ್ತೆ ನಿರ್ಮಾಣ, ನಿವೇಶನ, ಮನೆಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು, ಗ್ರಾಪಂ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ಚೇತನ, ನಿರ್ಮಲ, ಉಮಾ, ಚೈತ್ರ, ಸಿದ್ದಗಂಗಮ್ಮ, ಕಮಲಮ್ಮ, ಗಿರೀಶ್, ಶಾನೆಗೌಡ, ಗಂಗಾಧರಯ್ಯ, ತಹಶೀಲ್ದಾರ್ ವಿಶ್ವನಾಥ್, ತಾಪಂ ಇಒ ಜೋಸೆಫ್ ಇತರರು ಇದ್ದರು.
Comments are closed.