ತುಮಕೂರು: ಸಾಂಪ್ರದಾಯಕ ಕಸುಬುಗಳನ್ನು ಉತ್ತೇಜಿಸಿಲು ಅಂತಹ ಕಸುಬು ಮಾಡುವ ಆಸಕ್ತರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ಪಿಎಂ ಸ್ವ-ನಿಧಿ ಯೋಜನೆ ಪ್ರಯೋಜನಕಾರಿಯಾಗಿದ್ದು ಹೆಚ್ಚು ಜನರು ಯೋಜನೆಯ ಪ್ರಯೋಜನ ಪಡೆಯಲು ವ್ಯಾಪಕ ಪ್ರಚಾರ ಮಾಡಬೇಕು ಎಂದು ಪಿಎಂ ಸ್ವ-ನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಯ ರಾಜ್ಯ ಸಂಚಾಲಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ನಗರದಲ್ಲಿ ಶಾಸಕ ಜ್ಯೋತಿಗಣೇಶ್ ಅವರ ಕಚೇರಿಯಲ್ಲಿ ಶುಕ್ರವಾರ ಪಿಎಂ ಸ್ವ-ನಿಧಿ ಯೋಜನೆಯಡಿ ಕಿರು ಸಾಲ ಸೌಲಭ್ಯ ಪಡೆದಿರುವ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಯೋಜಯ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ರಾಮದಾಸ್, ತುಮಕೂರು ಜಿಲ್ಲೆಯಲ್ಲಿ ಯೋಜಯ ಪ್ರಚಾರ ಹಾಗೂ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶೇಕಡ ನೂರರಷ್ಟು ಪ್ರಗತಿ ಸಾಧಿಸುವ ಅವಕಾಶವಿದೆ, ಹಾಗೆ ಮಾಡಿದರೆ ದೇಶದಲ್ಲೇ ತುಮಕೂರು ಜಿಲ್ಲೆಗೆ ಉತ್ತಮ ಪ್ರಗತಿ ಸಾಧಿಸಿದ ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.
ಕೋವಿಡ್ ಅವಧಿಯಲ್ಲಿ ತೊಂದರೆಗೊಳಗಾದ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯನ್ನು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ, ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ ಕಿರು ಸಾಲ ಸೌಲಭ್ಯವನ್ನು 10 ಸಾವಿರ ರೂ. ವರೆಗೆ ನೀಡುವುದರ ಜೊತೆಗೆ ನಿಯಮಿತ ಸಾಲ ಮರುಪಾವತಿಗೆ ಉತ್ತೇಜಿಸುವುದು ಹಾಗೂ ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹಿಸಿ ಬಹುಮಾನ ನೀಡುವುದು ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ನಗರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡು ಗುರುತಿಸಲ್ಪಟ್ಟ ಹಾಗೂ ಸ್ಥಳೀಯ ಸಂಸ್ಥೆಗಳು ಗುರುತಿನ ಚೀಟಿ ವಿತರಿದ್ದ ಫಲಾನುಭವಿಗಳೂ ಯೋಜನೆಯ ಪ್ರಯೋಜನ ಪಡೆಯಬಹುದು, ಪ್ರತಿ ಬೀದಿ ವ್ಯಾಪಾರಿ 10 ಸಾವಿರ ರೂ. ಗಳನ್ನು ಮೇಲಾಧಾರ ಮುಕ್ತ ಬಂಡವಾಳ ಸಾಲ ಪಡೆಯಲು ಅರ್ಹರಾಗಿರುತ್ತಾರೆ, ಒಂದು ವರ್ಷದ ಅವಧಿವರೆಗೆ ಮಾಹೆಯಾನ ಕಂತು ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ, ಹಣದ ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸುತ್ತದೆ, ಸ್ವಾಯತ್ತ ವಾಣಿಜ್ಯ ಬ್ಯಾಂಕುಗಳು, ಆರ್ ಆರ್ ಬಿ ಗಳು, ಎಸ್ ಎಫ್ ಬಿ ಗಳು, ಸಹಕಾರ ಬ್ಯಾಂಕುಗಳು ಯೋಜನೆಯಡಿ ಸಾಲ ನೀಡುವ ಸಂಸ್ಥೆಗಳಾಗಿವೆ, ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ಮಾಡಲು ಮಾಸಿಕ ಕ್ಯಾಷ್ ಪಡೆಯಲು ಯೋಜನೆ ಉತ್ತೇಜಿಸುತ್ತದೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ನಗರಪಾಲಿಕೆ ಸದಸ್ಯ ವಿಷ್ಣುವರ್ಧನ್, ಬಿಜೆಪಿ ಮುಖಂಡರಾದ ಚಿದಾನಂದ್, ರುದ್ರೇಶ್, ವೆಂಡಿಂಗ್ ಕಮಿಟಿ ಸದಸ್ಯರು, ನಗರದ ಹಲವು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
Comments are closed.