ತುಮಕೂರು: ರಾಜ್ಯದ ಪೊಲೀಸರ ಸಂಖ್ಯೆಗೆ ಅನುಗುಣವಾಗಿ ಶೇ.70 ರಷ್ಟು ವಸತಿ ಗೃಹಗಳನ್ನು ನಿರ್ಮಾಣ ಮಾಡುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ, ಈಗಾಗಲೇ ಶೇ.40 ರಷ್ಟು ಮನೆ ನಿರ್ಮಾಣವಾಗಿದೆ, ನಮ್ಮ ರಾಜ್ಯದಲ್ಲಿ ಪೊಲೀಸ್ ವಸತಿ ಕ್ಷೇತ್ರಕ್ಕೆ ನೀಡಿದಷ್ಟು ಪ್ರೋತ್ಸಾಹವನ್ನು ಇತರೆ ಯಾವ ರಾಜ್ಯದಲ್ಲೂ ನೀಡಿಲ್ಲ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ನಗರದ ಬಿ.ಹೆಚ್.ರಸ್ತೆಯ ಅಶೋಕನಗರದಲ್ಲಿರುವ ಎಸ್ ಪಿ ಕಚೇರಿ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ವಸತಿ ಸಮುಚ್ಛಯ ಉದ್ಘಾಟಿಸಿ ಮಾತನಾಡಿ, ಬ್ರಿಟೀಷರ ಕಾಲದಲ್ಲಿ ಪೊಲೀಸ್ ಲೈನ್ ಎಂಬ ಮನೆಗಳನ್ನು ಕಟ್ಟುತ್ತಿದ್ದರು, ಪೊಲೀಸ್ ಲೈನ್ ವಸತಿಗಳನ್ನು ನೋಡಿದರೆ ಬೇಸರವಾಗುತ್ತಿತ್ತು, ಆದ ಕಾರಣ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಳಿ ಪೊಲೀಸರಿಗೆ ವಸತಿ ಗೃಹ ನಿರ್ಮಾಣ ಸಂಬಂಧ ಪ್ರಸ್ತಾಪಿಸಿದ್ದೆ, ಪೊಲೀಸ್ ಗೃಹ ಎಂಬ ಯೋಜನೆಯಡಿ ವಸತಿ ನಿರ್ಮಾಣ ಕಾರ್ಯಕ್ರಮ ಘೋಷಣೆ ಮಾಡೋಣ ಎಂದು ಹೇಳಿದಾಗ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೊಡ್ಡ ಮನಸ್ಸು ಮಾಡಿ ಒಪ್ಪಿಗೆ ನೀಡಿ ಅನುದಾನ ನೀಡಿದರು, ಇದೀಗ ಹಂತ ಹಂತವಾಗಿ ಯೋಜನೆ ಸಾಗಿ ಸುಮಾರು 23 ಸಾವಿರ ಮನೆ ಕಟ್ಟಬೇಕು ಎಂಬ ಯೋಜನೆ ಹಾಕಿಕೊಳ್ಳಲಾಗಿದ್ದು, ಇದೀಗ ಹಂತಹಂತವಾಗಿ 12 ಸಾವಿರ ಮನೆ ಕಟ್ಟಿದ್ದೇವೆ ಎಂದು ಸ್ಮರಿಸಿದರು.
ತುಮಕೂರು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಿಂಭಾಗ 16.04 ಕೋಟಿ ಖರ್ಚು ಮಾಡಿ 72 ವಸತಿ ಗೃಹಗಳನ್ನು ಕಟ್ಟಲಾಗಿದೆ, ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಒಂದು ಲಕ್ಷ ಜನಸಂಖ್ಯೆಗೆ 152 ಜನ ಪೊಲೀಸ್ ಇರಬೇಕು, ಇದು ರಾಷ್ಟ್ರೀಯ ಮಾನದಂಡ, ಆದರೆ ಇಷ್ಟು ಪೊಲೀಸರು ನಮ್ಮ ರಾಜ್ಯವೂ ಸೇರಿದಂತೆ ಯಾವ ರಾಜ್ಯದಲ್ಲಿಯೂ ಇಲ್ಲ, ಇದಕ್ಕೆ ಕಾರಣ ಅನುಮೋದಿತ ಹುದ್ದೆ ಕಡಿಮೆ ಮಾಡಿದ್ದಾರೆ, ರಾಜ್ಯದಲ್ಲಿರುವ ಅಂದಾಜು 1 ಲಕ್ಷ ಪೊಲೀಸರ ಪೈಕಿ 30-40 ಸಾವಿರ ಮಾತ್ರ ಸಿವಿಲ್ ಸೇವೆಗೆ ಪೊಲೀಸರಿದ್ದು, ಉಳಿದವರು ಕೆ ಎಸ್ ಆರ್ ಪಿ ಮತ್ತು ರಿಸರ್ವ್ನಲ್ಲಿದ್ದಾರೆ ಎಂದರು.
ಕಳೆದ ಬಾರಿ ತಾವು ಸಚಿವರಾಗಿದ್ದಾಗ 21 ಸಾವಿರ ವಿವಿಧ ವೃಂದದ ಹುದ್ದೆಗಳಿಗೆ ನೇಮಕಾತಿ ಮಾಡಿದ್ದೆ, ಆದರೆ ಕಳೆದ ನಾಲ್ಕು ವರ್ಷದಿಂದ ಇಲಾಖೆಯಲ್ಲಿ ಯಾವುದೇ ನೇಮಕಾತಿ ಮಾಡಲಾಗಿಲ್ಲ, ಇನ್ನು ಎರಡು ವರ್ಷದೊಳಗಾಗಿ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲಾಗುವುದು, ಈ ಕುರಿತು ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
545 ಸಬ್ ಇನಸ್ಪೆಕ್ಟರ್ ನೇಮಕಾತಿ ಹಗರಣ ಬಗೆಹರಿಸಲು ಆಗಿಲ್ಲ, ಒಂದು ಸಾವಿರಕ್ಕೂ ಹೆಚ್ಚು ಎಸ್ ಐ ಹುದ್ದೆಗಳು ಖಾಲಿ ಉಳಿದಿದ್ದು, ಇವುಗಳನ್ನು ತುಂಬಲು ನಿಯಮಾನುಸಾರ ರೂಲ್ 32 ನಲ್ಲಿ 600 ಮಂದಿ ಎ ಎಸ್ ಐ ಗಳಿಗೆ ಎಸ್ ಐ ಗಳಾಗಿ ಬಡ್ತಿ ನೀಡಲಾಗಿದೆ ಎಂದರು.
ತುಮಕೂರು ವೇಗವಾಗಿ ಬೆಳೆಯುತ್ತಿದೆ, ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೊ ರೈಲು ತರಲು ಪ್ರಯತ್ನ ಮಾಡಲಾಗುತ್ತಿದೆ, ಮುಖ್ಯಮಂತ್ರಿಗಳು ಇದಕ್ಕೆ ಅನುಮೋದನೆ ನೀಡಿದ್ದು, ಇದಕ್ಕೆ ಅನುದಾನ ಹೊಂದಿಸಲಾಗುತ್ತಿದೆ, ಪ್ರತಿದಿನ 30 ಸಾವಿರ ಜನ ಬೆಂಗಳೂರು- ತುಮಕೂರು ನಡುವೆ ಓಡಾಡುತ್ತಾರೆ, ಮುಂದಿನ ದಿನಗಳಲ್ಲಿ ತುಮಕೂರು ಗ್ರೇಟರ್ ಬೆಂಗಳೂರು ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಪೊಲೀಸರಿಗೆ ಅನೇಕ ಸವಾಲುಗಳು ಎದುರಾಗುತ್ತಿದ್ದು, ನೆಮ್ಮದಿ ಬದುಕು ಕಟ್ಟಿಕೊಳ್ಳದೆ ಕಷ್ಟವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಪೊಲೀಸರಿಗೆ ನೆಮ್ಮದಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಸತಿ ಸಮುಚ್ಚಯಗಳು ಸಹಕಾರಿಯಾಗಿವೆ ಎಂದು ಹೇಳಿದರು.
ದಿನೇ ದಿನೆ ಪೊಲೀಸ್ ಇಲಾಖೆಯ ಸವಾಲುಗಳು ಹೆಚ್ಚುತ್ತಿವೆ, ಆರ್ ಟಿ ಐ ಸೇರಿದಂತೆ ಇತರೆ ಕಾಯ್ದೆಗಳನ್ನು ಒಳ್ಳೆ ಹಿತದೃಷ್ಟಿಯಿಂದ ಬಂದಂತಹ ಕಾನೂನುಗಳು ಪೊಲೀಸ್ ವ್ಯವಸ್ಥೆ ಹದಗೆಡಿಸುವಷ್ಟು ಸ್ಥಿತಿಗೆ ತಲುಪಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪೊಲೀಸರು ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಪೊಲೀಸ್ ಇಲಾಖೆ ಘನತೆ ಹೆಚ್ಚಿಸಬೇಕು, ತುಮಕೂರು ನಗರಕ್ಕೆ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಹಾಗೂ ಹೆಚ್ಚುವರಿಯಾಗಿ ಔಟ್ ಪೋಸ್ಟ್ ಗಳನ್ನು ನಿರ್ಮಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಅಧ್ಯಕ್ಷ ಹಾಗೂ ಡಿಜಿಪಿ ಡಾ.ಕೆ.ರಾಮಚಂದ್ರರಾವ್, ಬೆಂಗಳೂರು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಮಹಾ ನಗರ ಪಾಲಿಕೆ ಆಯುಕ್ತೆ ಅಶ್ವಿಜ.ಬಿ.ವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ ಇದ್ದರು.
Comments are closed.