ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ಸರ್ವೆ ನಂಬರ್ 34ರಲ್ಲಿ ಹೊಸದಾಗಿ ಜೆಲ್ಲಿ ಕ್ರಷರ್ ನಡೆಸಲು ನೀಡಿರುವ ಅನುಮತಿ ರದ್ದುಪಡಿಸುವಂತೆ ಒತ್ತಾಯಿಸಿ ಮಾಚನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಕೆಸರುಮಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಬೊಮ್ಮನಹಳ್ಳಿ ಕಾಲೋನಿಯ ಮಾರೇಗೌಡ ಮಾತನಾಡಿ, ಮಾಚನಹಳ್ಳಿಯಲ್ಲಿ ಜನವಸತಿ ಸಮೀಪವೇ ಕ್ರಷರ್ ನಡೆಸಲು ಅನುಮತಿ ನೀಡಿರುವುದು ಸರಿಯಲ್ಲ, ಕೂಡಲೇ ಕ್ರಷರ್ ಅನುಮತಿ ರದ್ದು ಪಡಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅವರು ಕ್ರಮ ತೆಗೆದುಕೊಂಡಿಲ್ಲ ಎಂದು ಆಪಾದಿಸಿದರು.
ಕ್ರಷರ್ ನಡೆಸುತ್ತಿರುವ ಸ್ಥಳ ಜನವಸತಿ ಪ್ರದೇಶದಿಂದ ಕೇವಲ 150 ಅಡಿ ಹತ್ತಿರದಲ್ಲಿದೆ, ಇಲ್ಲಿ ಸುಮಾರು 300 ಮನೆಗಳಿದ್ದು, ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಬಡವರು ವಾಸಿಸುತ್ತಿದ್ದಾರೆ, ಕ್ರಷರ್ ಶುರುವಾದರೆ ಅದರ ಧೂಳು, ಶಬ್ದ, ಮತ್ತಿತರ ಸಮಸ್ಯೆಗಳಿಂದ ಗ್ರಾಮದ ನಿವಾಸಿಗಳು ಭಯ, ಆತಂಕದಲ್ಲಿ ಬಾಳುವಂತಾಗುತ್ತದೆ, ಜೊತೆಗೆ ವಿವಿಧ ಮಾರಕ ಕಾಯಿಲೆಗಳಿಗೆ ಬಲಿಯಾಗಬೇಕಾಗುತ್ತದೆ, ಇಂತಹ ಅಪಾಯಗಳ ನಡುವೆ ಕ್ರಷರ್ ನಡೆಸಲು ಅನುಮತಿ ಕೊಟ್ಟಿರುವುದು ಜನವಿರೋಧಿ ಕ್ರಮವಾಗಿದೆ, ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿ ಕ್ರಷರ್ ಆರಂಭಿಸಲು ನೀಡಿರುವ ಅನುಮತಿಯನ್ನು ಕೂಡಲೇ ರದ್ದು ಪಡಿಸುವಂತೆ ಒತ್ತಾಯಿಸಿದರು.
ಮಾತಾ ಕ್ರಷರ್ ನ ಭಾರತಿದೇವಿಯವರು ಇಲ್ಲಿ ಕ್ರಷರ್ ನಡೆಸಲು ಅನುಮತಿ ಪಡೆದು ಈಗಾಗಲೇ ಕೆಲಸ ಶುರು ಮಾಡಿದ್ದಾರೆ, ಯಾವುದೇ ಕಾರಣಕ್ಕೂ ಇಲ್ಲಿ ಕ್ರಷರ್ ಆರಂಭ ಮಾಡಕೂಡದು, ಈಗ ನೀಡಿರುವ ಅನುಮತಿ ರದ್ದು ಮಾಡದಿದ್ದರೆ ಮಾಚನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಸೇರಿ ಉಗ್ರ ಹೋರಾಟ ಮಾಡುವುದಾಗಿ ಮಾರೇಗೌಡ ಎಚ್ಚರಿಕೆ ನೀಡಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಕೆಸರುಮಡು ಗ್ರಾಮ ಪಂಚಾಯಿತಿ ಸದಸ್ಯ ಸಂಪತ್ಕುಮಾರ್, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲಕೃಷ್ಣ, ಹನುಮಂತರಾಜು, ಮುಖಂಡರಾದ ದೇವರಾಜು, ಮುಜಾಯಿದ್ ಪಾಷಾ, ಪದ್ಮನಾಭ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Comments are closed.