ಕುಣಿಗಲ್: ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ನೀಲಸಂದ್ರ ಗ್ರಾಮದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ಪರಂಪರೆ ಉಳಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ತುಮಕೂರು ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್, ತುಮಕೂರು ವಿಶ್ವವಿದ್ಯಾಲಯ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ ನಾಯ್ಕ ಇತರರು ನಡೆಸಿಕೊಟ್ಟರು. ನೀಸಲಸಂದ್ರಗ್ರಾಮದಲ್ಲಿ ಸಾ.ಶ. 1329ರ ಕಾಲದ ಶಾಸನದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಟ್ಟು ಶಾಸನದ ಪೂರ್ಣ ಮಾಹಿತಿ ಫಲಕ ಮಾಡಿ ಕೊಡಲಾಯಿತು.
ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲು ಆಗದು, ನಮ್ಮ ನಾಡಿನ ಇತಿಹಾಸ ಹಾಗೂ ಇತಿಹಾಸ ಸಾರುವ ಶಾಸನಗಳನ್ನು ಸಂರಕ್ಷಿಸಿ ಅದರ ಸಾರಾಂಶವನ್ನು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು, ಶಾಸನ ಅದು ಶಿಲಾಸಾಸನದ ರೂಪವಾಗಿರಲಿ ಅಥವಾ ಲೋಹ ಪತ್ರದ್ದಾಗಿರಲಿ ಸಂರಕ್ಷಿಸಿ ಅದರ ಮಾಹಿತಿ ಸಮಾಜಕ್ಕೆ ತಿಳುವಳಿಕೆ ಮೂಡಿಸಲು ಶ್ರಮಿಸಬೇಕೆಂದರು.
ಇತಿಹಾಸ ಅಕಾಡೆಮಿ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಧನಪಾಲ್ ಅವರು ಶಾಸನಗಳ ಸಂರಕ್ಷಣೆಯ ಅವಶ್ಯಕತೆ ಹಾಗೂ ಶಾಸನಗಳು ಗ್ರಾಮದ ಇತಿಹಾಸಕ್ಕೆ ಆಧಾರಗಳು ಎಂಬುದನ್ನು ತಿಳಿಸಿಕೊಟ್ಟರು.
ನೀಲಸಂದ್ರ ಗ್ರಾಮದ ಹಿರಿಯರು ಮಾತನಾಡಿ ಈ ಶಾಸನದ ಬಗ್ಗೆ ಸುಮಾರು ಮೂವತ್ತು ವರ್ಷಗಳಿಂದಲೂ ಓದಲು ಪ್ರಯತ್ನಿಸುತ್ತಿದ್ದೇವು, ಆದರೆ ಸಾಧ್ಯವಾಗಿರಲಿಲ್ಲ, ಶಶಿಕುಮಾರ್ ಹಾಗೂ ಯುವರಾಜ್ ಅವರ ಪ್ರಯತ್ನದಿಂದ ನಮಗೆ ನಮ್ಮೂರಿನ ಇತಿಹಾಸದ ಆಧಾರ ಓದಿ ಕೊಟ್ಟಿದ್ದಾರೆ, ಅಲ್ಲದೆ ಅದರ ಪೂರ್ಣ ವಿವರದ ಮಾಹಿತಿ ಫಲಕ ಸಹ ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದು ಶ್ಲಾಸಿದರು.
ಪತ್ತೆಯಾದ ಶಿಲಾ ಶಾಸನದ ಸಾರಾಂಶ
ಈ ಶಾಸನವು ಹೊಯ್ಸಳ ಚಕ್ರವರ್ತಿ ಹೊಯ್ಸಳ ಮೂರನೇ ವೀರ ಬಲ್ಲಾಳನು ಪೃಥ್ವಿ ರಾಜ್ಯವನ್ನು ಪರಿಪಾಲಿಸುತ್ತಿದ್ದಾಗ ಸಾ.ಶ.20 ಜನವರಿ 1329 ರಂದು ದಕ್ಷಿಣ ವಾರಣಾಸಿ ಎನಿಸಿದ ಕುಣಿಗಿಲಿನ ಮಹಾಜನಗಳು, ವೇದಯನ ಮಕ್ಕಳು ಜಿಗಿದೇವ, ಹಿರಿಯೂರ ಸಮಸ್ತ ಹಲವು ಗೌಡರುಗಳ ಸಾಕ್ಷಿಯಾಗಿ ವಡ್ಡ ವ್ಯವಹಾರಿ ನಾನಾದೇಸಿ ಮಲೆಯಾಳ ವರ್ತಕರಲ್ಲಿ ಮುಖ್ಯರಾದ ನೀಲಪ್ಪ ಶೆಟ್ಟಿಯ ಮಗ ರಾಯಪ್ಪ ಶೆಟ್ಟಿಯರು ಕುಣಿಗಿಲ ಸ್ಥಳದೊಳಗಿನ ಹೇರೋಹಳ್ಳಿಯ ಸಾತ್ವಿಗಳಿಗೆ ಕೊಡುಗೆಯಾಗಿ ನೀಲಸಂದ್ರ ಗ್ರಾಮಕ್ಕೆ ಸೇರುವ ಗದ್ದೆ ಬೆದ್ದಲಿನ ಭೂಮಿಯನ್ನು ದಾನವಾಗಿ ನೀಡಲಾಗಿದ್ದು, ಇದು ಸೂರ್ಯ ಚಂದ್ರ ಇರುವ ವರೆಗೂ ಶಾಶ್ವತವಾಗಿರಬೇಕು, ಇದಕ್ಕೆ ತಪ್ಪಿದವರು ಅಥವಾ ದುರುಪಯೋಗ ಪಡಿಸಿಕೊಂಡವರು ಗಂಗಾನದಿ ತೀರದಲ್ಲಿ ಹಸುವನ್ನು ಕೊಂದ ಪಾಪ ಬರುತ್ತದೆ ಎಂಬ ಮಾಹಿತಿ ನೀಡುತ್ತದೆ.
Comments are closed.