ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಿ: ಡೀಸಿ

ಕರ್ನಾಟಕ ಏಕೀಕರಣದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ

90

Get real time updates directly on you device, subscribe now.


ತುಮಕೂರು: ನಾಲ್ಕು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಟ್ಟಾಗಿ ಹೋರಾಟ ಮಾಡಿ ಎಲ್ಲಾ ವಿರೋಧಗಳನ್ನು ಲೆಕ್ಕಿಸದೆ ಒಂದಾಗಿ ಅಖಂಡ ಕರ್ನಾಟಕ ಕಟ್ಟಿದ ಇತಿಹಾಸದ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಾದ ತುರ್ತುಅಗತ್ಯವಿದೆ, ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಯ ಶಿಕ್ಷಣ ಇಲಾಖೆ ಏಕೀಕರಣದ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿಸಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಮತ್ತು ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ಕರ್ನಾಟಕದ ಏಕೀಕರಣ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ನಾಡು ನುಡಿಗೆ ವಿಶಾಲವಾದ ಪರಂಪರೆಯಿದ್ದು ದಿನ ಕಳೆದಂತೆ ಅವುಗಳೆಲ್ಲ ಮಾಯವಾಗುತ್ತಿದ್ದು ಇಂದಿನ ಯುವ ಸಮೂಹದಲ್ಲಿ ಕೇವಲ ಮೊಬೈಲ್, ಅಂತರ್ಜಾಲದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಿಷಾದಿಸಿದ ಅವರು ಮೊಬೈಲ್ ಹಿಡಿಯದ ಕೈಗಳು ಪುಸ್ತಕ ಹಿಡಿಯುವ ಕೈಗಳಾಗಬೇಕು, ಆಗ ಮಾತ್ರ ನಮ್ಮ ಪರಂಪರೆಯ ಜ್ಞಾನದ ಆಳ ಅಗಲ ಗೊತ್ತಾಗುತ್ತದೆ ಎಂದು ಯುವ ಸಮೂಹಕ್ಕೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣ ಕೃತಿಯ ಲೇಖಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಕರ್ನಾಟಕದ ಏಕೀಕರಣ ಬೆಂಬಲಿಸಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ಅದನ್ನು ಮರೆಯಿತು, ಆದರೆ ಪರಭಾಷಿಕ ಆಡಳಿತಕ್ಕೆ ಒಳಪಟ್ಟ ಕನ್ನಡ ಭಾಷಿಕ ಜನರ ಸತತ ಹೋರಾಟದ ಪರಿಣಾಮವಾಗಿ 1956 ನವೆಂಬರ್ 1 ರಂದು ಏಕೀಕರಣವಾಗಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು ಎಂದರು.

ಕೃಷಿ ಮತ್ತು ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿ ಮಾದರಿ ಮೈಸೂರಾಗಿತ್ತು, ಕರ್ನಾಟಕ ಏಕೀಕರಣ ಮಾಡಿದರೆ ಮೈಸೂರು ರಾಜ್ಯದ ಶಮಾನದಷ್ಟು ಹಿಂದೆ ಹೋಗುತ್ತದೆ ಎಂದು ಭಾವಿಸಿ ಹಲವಾರು ರಾಜಕೀಯ ಕಾರಣಗಳಿಂದ ಏಕೀಕರಣವನ್ನು ವಿರೋಧಿಸಿದ್ದರು, ಆದರೆ ಕೆಂಗಲ್ ಹನುಮಂತಯ್ಯನವರ ಮತ್ತು ಎಸ್.ನಿಜಲಿಂಗಪ್ಪನವರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು ಎಂದರು.

ಏಕೀಕರಣವಾದ ರಾಜ್ಯಕ್ಕೆ ಸರಿಯಾದ ಹೆಸರು ಪಡೆಯಲು ಹದಿನೈದು ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು, ಆದರೆ ಅನೇಕರ ವಿರೋಧವನ್ನು ಲೆಕ್ಕಿಸದೆ 1973 ಡಿಸೆಂಬರ್ 1 ರಂದು ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕರ್ನಾಟಕ ಭೌತಿಕವಾಗಿ, ರಾಜಕೀಯವಾಗಿ ಒಂದಾದರೂ ಕನ್ನಡ ಮಾಧ್ಯಮ ಆಡಳಿತದಲ್ಲಿ ಕನ್ನಡ ಭಾಷೆ ಸರಿಯಾದ ಯಶಸ್ಸನ್ನು ಕಂಡಿಲ್ಲ, ಆಂಗ್ಲ ಭಾಷಾ ಮಾಧ್ಯಮ ಶಾಲೆಗಳು ಗ್ರಾಮಾಂತರ ಪ್ರದೇಶಗಳಿಗೂ ಲಗ್ಗೆ ಹಾಕಿ ಕನ್ನಡ ಮಾಧ್ಯಮ ಶಾಲೆಗಳನ್ನು ಕಬಳಿಸುತ್ತಾ ಬಂದಿದೆ, ಗ್ರಾಮಾಂತರ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಡಿವಾಳ ಹಾಕಿ ಕನ್ನಡ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ್, ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ, ಹಿರಿಯ ಗಾಂಧಿವಾದಿ ಎಂ.ಬಸವಯ್ಯ, ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಸರ್ವೋದಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಂ.ಸುಬ್ಬರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಉಮಾಮಹೇಶ್, ಸಣ್ಣಹೊನ್ನಯ್ಯ ಕಂಟಲಗೆರೆ, ರಾಣಿ ಚಂದ್ರಶೇಖರ್ ಹಾಜರಿದ್ದರು.
ಸರ್ಕಾರ ನಿಗದಿಪಡಿಸಿರುವ ಐದು ಕನ್ನಡ ಗೀತೆಗಳನ್ನು ಮಂಜು ಮೆಲೋಡೀಸ್ನ ಮಂಜು ಮತ್ತು ತಂಡದವರು ಹಾಡಿದರು.

Get real time updates directly on you device, subscribe now.

Comments are closed.

error: Content is protected !!