ತುಮಕೂರು: ಜೆಡಿಎಸ್ ಪಕ್ಷದ ವರಿಷ್ಠರ ತೀರ್ಮಾನದಂತೆ ತುಮಕೂರು ಜಿಲ್ಲೆಯ ಬರ ಪೀಡಿತ 10 ತಾಲೂಕುಗಳ ಬರ ಅಧ್ಯಯನ ಪ್ರವಾಸವನ್ನು ನವೆಂಬರ್ 09 ರಿಂದ ಆರಂಭಿಸಲಾಗುವುದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜೆಡಿಎಸ್ ಮುಖಂಡರು ತಮ್ಮ ಜಿಲ್ಲೆಯ ಬರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ತಲಾ ಐದು ತಾಲೂಕುಗಳಿಗೆ ಒಂದು ತಂಡದಂತೆ ಎರಡು ತಂಡಗಳನ್ನು ರಚಿಸಿ ಬರ ಅಧ್ಯಯನ ನಡೆಸಲು ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿದೆ ಎಂದರು.
ನವೆಂಬರ್ 9 ರಂದು ಏಕ ಕಾಲಕ್ಕೆ ಎರಡು ತಂಡಗಳು ಬರ ಅಧ್ಯಯನ ನಡೆಸಿ ನವೆಂಬರ್ 15 ರಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಬರ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲು ಆಗ್ರಹಿಸಲಾಗುದು, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್, ಚಿಕ್ಕನಾಯನಕನ ಹಳ್ಳಿ ತಾಲೂಕುಗಳನ್ನು ಒಳಗೊಂಡ ತಂಡ ಒಂದರಲ್ಲಿ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನ ಹಳ್ಳಿ ಶಾಸಕ ಸಿ.ಬಿ.ಸುರೇಶಬಾಬು, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಕುಣಿಗಲ್ ನ ಮಾಜಿ ಶಾಸಕ ಡಿ.ನಾಗರಾಜಯ್ಯ, ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ನಾಗರಾಜಯ್ಯ, ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿ.ಎಸ್.ನಾಗರಾಜು, ತಿಪಟೂರಿನ ಕೆ.ಟಿ.ಶಾಂತಕುಮಾರ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಸೇರಿದಂತೆ ಹಿರಿಯ ಮುಖಂಡರು ಬರ ಅಧ್ಯಯನ ನಡೆಸಲಿದ್ದಾರೆ ಎಂದರು.
ತುಮಕೂರು, ತುಮಕೂರು ಗ್ರಾಮಾಂತರ, ಕೊರಟಗೆರೆ ಮಧುಗಿರಿ, ಪಾವಗಡ ಮತ್ತು ಶಿರಾ ತಾಲೂಕುಗಳನ್ನು ಒಳಗೊಂಡ ಎರಡನೇ ತಂಡದಲ್ಲಿ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ,ವಿಧಾನಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಪಾವಗಡ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಧುಗಿರಿಯ ವೀರಭದ್ರಯ್ಯ, ಕೊರಟಗೆರೆಯ ಸುಧಾಕರಲಾಲ್, ಎನ್.ಗೋವಿಂದರಾಜು, ಶಿರಾದ ಆರ್.ಉಗ್ರೇಶ್, ತಿಮ್ಮಾರೆಡ್ಡಿ, ನರಸಿಂಹರಾಜು ಸೇರಿದಂತೆ ಜಿಪಂ, ತಾಪಂ ಮುಖಂಡರು ಪಾಲ್ಗೊಳ್ಳಲಿದ್ದಾರೆ, ಎರಡು ತಂಡಗಳ ವರದಿ ಕ್ರೂಡೀಕರಿಸಿ ನವೆಂಬರ್ 15 ರಂದು ಹಿರಿಯ ಮುಖಂಡರೊಂದಿಗೆ ಸೇರಿ ಜಿಲ್ಲಾಧಿಕಾರಿಗಳಿಗೆ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಡಳಿತ ನೀಡಿರುವ ವರದಿ ಪ್ರಕಾರ ಜಿಲ್ಲೆಯ ಸುಮಾರು 2.19 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಿದ್ದು, ಇದರಲ್ಲಿ ಶೇ.90 ರಷ್ಟು ಬೆಳೆ ಸಂಪೂರ್ಣ ಹಾನಿಯಾಗಿದೆ, 1880 ಕೋಟಿ ರೂ. ನಷ್ಟವಾಗಿದೆ, ಆಹಾರ ಬೆಳೆಗಳಾದ ರಾಗಿ, ಜೋಳ, ಶೇಂಗಾ, ತೊಗರಿ, ಅವರೆ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳು ನಷ್ಟವಾಗಿವೆ,ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ, ಆದರೆ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ, ಇದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ, ಪ್ರತಿಯೊಂದಕ್ಕೂ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದಾದರೆ ರಾಜ್ಯ ಸರಕಾರ ಇರುವುದು ಏತಕ್ಕೆ ಎಂದು ಆಂಜನಪ್ಪ ಪ್ರಶ್ನಿಸಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದಿದ್ದು, ಇದುವರೆಗೂ ಅಭಿವೃದ್ಧಿಗೆ ಒಂದು ನಯಾ ಪೈಸೆ ಹಣ ಬಿಡುಗಡೆಯಾಗಿಲ್ಲ, ಪಕ್ಷದ ಐದು ಗ್ಯಾರಂಟಿಗಳ ಸರಿದೂಗಿಸಲು ಹೋಗಿ ಜನರ ಸಮಸ್ಯೆ ನಿರ್ಲಕ್ಷ ಮಾಡಿದೆ, ಬರ ಪರಿಹಾರವನ್ನು ಕೇಂದ್ರದ ಬಳಿ ಪಟ್ಟು ಹಿಡಿದು ಕೇಳುವ ಬದಲು ಶೋಕಿಗಾಗಿ ಮುಖ್ಯಮಂತ್ರಿ ಮತ್ತು ಕೆಲ ಸಚಿವರು ದೆಹಲಿ ಪ್ರವಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನವೆಂಬರ್ 09 ರಿಂದ ನಡೆಯುವ ಬರ ಅಧ್ಯಯನ ಪ್ರವಾಸದ ವೇಳೆ ಆಯಾಯ ಭಾಗದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ವಿಎ, ಆರ್ ಐ ಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಿ, ವಸ್ತುನಿಷ್ಠ ವರದಿ ತಯಾರಿಸಿ, ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಸಲ್ಲಿಸಿ ಎನ್ ಡಿ ಆರ್ ಎಫ್ ನಿಯಮದ ಅನ್ವಯ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರ ಸ್ವಾಮಿ ಅವರೊಂದಿಗೆ ನಿಯೋಗ ಹೋಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಿ.ನಾಗರಾಜಯ್ಯ, ಮುಖಂಡರಾದ ಕೆ.ಟಿ.ಶಾಂತಕುಮಾರ್, ಗುಬ್ಬಿಯ ನಾಗರಾಜು, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಗಂಗಣ್ಣ, ನಗರಾಧ್ಯಕ್ಷ ವಿಜಯಗೌಡ, ಮಧು, ಲೀಲಾವತಿ, ತಾಹೀರಾ ಭಾನು ಸೇರಿದಂತೆ ಎಲ್ಲಾ ತಾಲೂಕುಗಳ ಅಧ್ಯಕ್ಷರು ಪಾಲ್ಗೊಂಡಿದ್ದರು.
Comments are closed.