ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ: ಬಿ ಎಸ್ ವೈ

74

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಪರಿಶಿಷ್ಟರ ಅಂತ್ಯಕ್ರಿಯೆಗೆ ಕೊಟ್ಟ ಚೆಕ್ ಬೌನ್ಸ್ ಆಗುವಷ್ಟರ ಮಟ್ಟಿಗೆ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ಜಿಲ್ಲೆಗೆ ಬರ ಅಧ್ಯಯನ ನಡೆಸಲು ಆಗಮಿಸಿದ ಸಂದರ್ಭದಲ್ಲಿ ನಗರದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ಅನಗತ್ಯ ಉಚಿತ ಭಾಗ್ಯಗಳನ್ನು ಕೊಟ್ಟು ಸರ್ಕಾರ ದಿವಾಳಿಯಾಗುತ್ತಿದೆ, ಇದಕ್ಕೆ ಉದಾಹರಣೆಯಾಗಿ ಗೃಹ ಸಚಿವರ ಕ್ಷೇತ್ರದಲ್ಲಿ ಪರಿಶಿಷ್ಟರ ಅಂತ್ಯ ಸಂಸ್ಕಾರದ ಚೆಕ್ ಬೌನ್ಸ್ ಆಗಿದೆ, ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯ ಸರ್ಕಾರದ ಬೊಕ್ಕಸ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಸಹ ಬರ ಪರಿಸ್ಥಿತಿ ವೀಕ್ಷಣೆ ಮಾಡಿಲ್ಲ, ರೈತರ ಬಳಿಗೆ ಹೋಗಿ ಅವರು ನೋವು- ನಲಿವನ್ನು ಆಲಿಸಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ, ತೆರಿಗೆ ಜಾಸ್ತಿ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ, ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ರಾಜ್ಯದಲ್ಲಿ ತೀವ್ರ ಬರ ಬಂದಿದೆ, 3 ಗಂಟೆ ಕೂಡ ರೈತರಿಗೆ ತ್ರಿಫೇಸ್ ವಿದ್ಯುತ್ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗಾಳಿಯೂ ಬೀಸುತ್ತಿಲ್ಲ, ಮಳೆಯೂ ಬಂದಿಲ್ಲ, ಕೈಗಾರಿಕೆಗಳಿಗೂ ಬರದ ಬಿಸಿ ತಟ್ಟಿದೆ, ಬೆಂಗಳೂರು ನಗರಕ್ಕೆ ಕಾವೇರಿ ನೀರನ್ನು ಸಮರ್ಪಕವಾಗಿ ಕೊಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ ಎಂದ ಅವರು ರಾಜ್ಯ ಆರ್ಥಿಕ ದಿವಾಳಿಯಾಗಿ ಬಿಟ್ಟಿದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಜನರ ಕಷ್ಟ ನಿಭಾಯಿಸುವ ಶಕ್ತಿ ಇದೆ, ರಾಜ್ಯ ಸರ್ಕಾರಕ್ಕೆ ಜನರೇ ಚಾಟಿ ಬೀಸಬೇಕಾಗಿದೆ, ಬಡವರಿಗೆ ಉಚಿತ ವಿದ್ಯುತ್ ಕೊಡುವುದು ನ್ಯಾಯವಾಗಿದೆ, ಆದರೆ 2 ಲಕ್ಷ ರೂ. ಸಂಬಳ ಬರುವವರಿಗೂ ಉಚಿತ ವಿದ್ಯುತ್ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
10 ವರ್ಷ ಕಳೆದರೂ ಬೆಸ್ಕಾಂ ಸಮಸ್ಯೆ ಬಗೆಹರಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಗ್ರಾಮಾಂತರ ಕ್ಷೇತ್ರದಲ್ಲಿ ವಿದ್ಯುತ್ ಪರಿವರ್ತಕಗಳನ್ನು 5 ಸಾವಿರ ಕಟ್ಟಿ ಜನ ಪಡೆದಿದ್ದಾರೆ, ಈವರೆಗೂ ಟಿಸಿ ಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಟಿ.ಜೆ.ಗಿರೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಸಂಸ್ಥೆಯ 2000 ಇಸ್ವಿಯಲ್ಲಿ ಪ್ರಾರಂಭಗೊಂಡು ಕಾಲ ಕಾಲಕ್ಕೆ ಬದಲಾವಣೆಯಾಗುವ ನಿಯಮಗಳನ್ನು ಅಳಪಡಿಸಿಕೊಂಡು ಸರ್ಕಾರ ಮತ್ತು ಕೈಗಾರಿಕೆಗಳ ಸೇತುವೆಯಾಗಿ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ, ಜಿಲ್ಲೆಯ ಕೈಗಾರಿಕೆ ಅಭಿವೃದ್ಧಿ ಹೊಂದಲು ಮತ್ತು ಸಮಸ್ಯೆ ಆಲಿಸಲು ಯಡಿಯೂರಪ್ಪನವರು ಬಂದಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಬಿ.ಸಿ.ನಾಗೇಶ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಟಿ.ಆರ್. ಸದಾಶಿವಯ್ಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ಮಲ್ಲೇಶಯ್ಯ, ಸಹ ಕಾರ್ಯದರ್ಶಿ ಪಿ.ಆರ್.ಕುರಂದವಾಡ್, ಖಜಾಂಚಿಗಳಾದ ಶ್ರೀಕಂಠ ಸ್ವಾಮಿ, ರಾಜಗೋಪಾಲ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!