ಸರ್ಕಾರ ಜನರನ್ನು ಕತ್ತಲೆಗೆ ದೂಡಿದೆ

ತುಮಕೂರಲ್ಲಿ ಬರ ಅಧ್ಯಯನ ನಡೆಸಿದ ಬಿಎಸ್ವೈ ವಾಗ್ದಾಳಿ

115

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಜನತೆಯನ್ನು ಕತ್ತಲೆಗೆ ದೂಡಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಬಿಜೆಪಿ ಪಕ್ಷದ ವತಿಯಿಂದ ತುಮಕೂರು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬರ ಅಧ್ಯಯನ ಪ್ರವಾಸದ ವೇಳೆ ಬೆಳ್ಳಾವಿ ಗ್ರಾಮದಲ್ಲಿ ಮಾತನಾಡಿ, ವಿದ್ಯುತ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

ಒಂದು ಕಡೆ ಬರಗಾಲ ಜನರನ್ನು ಕಿತ್ತು ತಿನ್ನುತಿದ್ದರೆ, ಸರಕಾರದ ನೀತಿಗಳಿಂದ ವಿದ್ಯುತ್ ಉತ್ಪಾದನೆ ಕುಸಿತ ಕಂಡ ಪರಿಣಾಮ ಮನೆ ಬಳಕೆ ಹಾಗೂ ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ, ಹಾಕಿದ ರಾಗಿ ಬೆಳೆ ತೆನೆಕಟ್ಟುವ ಮೊದಲೇ ಬತ್ತಿ ಹೋಗಿದೆ, ನಮಗೆ ಕುಡಿಯುವ ನೀರೇ ಇಲ್ಲದ ವೇಳೆ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಹರಿಸುವ ಮೂಲಕ ರಾಜ್ಯದ ಜನರ ಹಿತ ಕಡೆಗಣಿಸಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,
ಬರ ಅಧ್ಯಯನದ ಭಾಗವಾಗಿ ತುಮಕೂರು ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆ ನಡೆಸಿದ್ದು, ವಿದ್ಯುತ್ ಸಮಸ್ಯೆಯಿಂದಾಗಿ ಬಹುತೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ, ಕೈಗಾರಿಕೆಗಳು ಅನುಭವಿಸುತ್ತಿರುವ ತೊಂದರೆ ಕುರಿತು ಇದುವರೆಗೂ ಯಾರು ಸಹ ಕ್ರಮ ಕೈಗೊಂಡಿಲ್ಲ, ಜನರ ಕಷ್ಟ ಅರಿಯವು ಉದ್ದೇಶದಿಂದ ನಾನು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ, ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ, ನಮ್ಮ ಸರಕಾರ ಜಾರಿಗೆ ತಂದಿದ್ದ ಕಿಸಾನ್ ಸನ್ಮಾನ್ ಯೋಜನೆಯನ್ನು ಈಗಿನ ಸರಕಾರ ಸ್ಥಗಿತಗೊಳಿಸಿದೆ, ಪ್ರವಾಸದ ವೇಳೆ ಎಲ್ಲಾ ವಿಚಾರವಾಗಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿ, ರೈತರು, ಜನರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಕೊಳವೆ ಬಾವಿಗಳಿದ್ದು,ಇವರಿಗೆ ಬಿಜೆಪಿ ಸರಕಾರವಿದ್ದಾಗ ನಿರಂತರವಾಗಿ 7ಗಂಟೆ ತ್ರಿಪೇಸ್ ವಿದ್ಯುತ್ ನೀಡುತಿದ್ದು, ಈಗ ಕೇವಲ 3-4 ಗಂಟೆ ಮಾಡಲಾಗುತ್ತಿದೆ, ಅದು ಸರಿಯಾದ ಸಮಯ ನಿಗಧಿಯಾಗಿಲ್ಲ, ರಾತ್ರಿ
ವೇಳೆ ತ್ರಿಪೇಸ್ ವಿದ್ಯುತ್ ನೀಡುವುದರಿಂದ ರೈತರು ಕತ್ತಲಿನಲ್ಲಿ ಹೊಲ, ಗದ್ದೆಗಳಿಗೆ ಹೋಗಿ ನೀರು ಹಾಯಿಸಲು ಚಿರತೆ, ಕರಡಿಗಳ ಕಾಟವಿದೆ, ಹಾಗಾಗಿ ಹಗಲಿನಲ್ಲಿಯೇ 7 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಅಕ್ರಮ ಸಕ್ರಮದಲ್ಲಿ ತುಮಕೂರು ಗ್ರಾಮಾಂತರದಲ್ಲಿ ಸುಮಾರು 4-5 ಸಾವಿರ ಜನರು ಟಿಸಿ ಗಾಗಿ ಹಣ ಕಟ್ಟಿ ಐದಾರು ವರ್ಷವಾದರೂ ಟಿಸಿ ನೀಡಿಲ್ಲ, ಅಲ್ಲದೆ ಈ ಹಿಂದಿನ ಸರಕಾರದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 50 ಕೋಟಿ ರೂ ಅನುದಾನ ಕಡಿತ ಮಾಡಿ, ಟ್ರಾನ್ಸ್ ಫಾರ್ಮರ್ ಅಳವಡಿಸುವುದಕ್ಕೂ ಕಲ್ಲು ಹಾಕಿದೆ, ಅಲ್ಲದೆ ಟಿಸಿಗಾಗಿ ಅರ್ಜಿ ಸಲಿಸಿರುವ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಸೋಲಾರ್ ಸಬ್ಸಿಡಿಯಲ್ಲಿ ಸೋಲಾರ್ ಅಳವಡಿಸಿಕೊಳ್ಳುವಂತೆ ಒತ್ತಡ ಹಾಕುತ್ತಿದೆ, ಅಲ್ಲದೆ ನೀರಿನ ಕೊರತೆಯಿಂದ ಕೆರೆ ತುಂಬಿಸುವ ಯೋಜನೆಗಳು ವಿಫಲವಾಗಿವೆ, ಬೆಳ್ಳಾವಿ ಸೇರಿದಂತೆ ಆರು ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯೂ ನೆನೆಗುದಿಗೆ ಬಿದ್ದಿದೆ, ಶಾಲಾ ಕಾಲೇಜು ಮಕ್ಕಳಿಗೆ ಯೂನಿಫಾರಮ್, ಸೈಕಲ್ ಇಲ್ಲ, ಪಠ್ಯ ಪುಸ್ತಕ ಇಲ್ಲ, ವಾರ್ಷಿಕ ಎರಡು ಕೋಟಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಐವತ್ತು ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿದೆ, ಇಷ್ಟು ಸಣ್ಣ ಹಣದಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ ಎಂದರು.

ಪ್ರವಾಸದ ವೇಳೆ ಮಾಜಿ ಸಂಸದ ಮುದ್ದಹನುಮೇ ಗೌಡ, ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಮಾಜಿ ಮಂತ್ರಿ ಬಿ.ಸಿ.ನಾಗೇಶ್, ಎಂ.ಎಲ್.ಸಿ ರವಿಕುಮಾರ್, ಶಾಸಕ ಜೋತಿಗಣೇಶ್, ಮಾಜಿ ಎಂಎಲ್ಸಿ ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮಾಜಿ ಶಾಸಕ ರಾಜೇಶ್ಗೌಡ, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಗ್ರಾಮಾಂತರ ಅಧ್ಯಕ್ಷ ಶಂಕರಣ್ಣ, ಸಿದ್ದೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!