ತುಮಕೂರು: ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಅಸ್ಪಶ್ಯತೆಯ ಶೋಷಣೆಯ ತೀವ್ರ ತುಳಿತಕ್ಕೊಳಗಾಗಿರುವ ಸವಿತಾ ಸಮಾಜಕ್ಕೆ ವಿಶೇಷ ಮೀಸಲಾತಿ ನೀಡಿ ಸಮುದಾಯವನ್ನು ಮುಖ್ಯ ವಾಹಿನಿಗೆ ತರಬೇಕು ಎಂದು ಒತ್ತಾಯಿಸಿ ಜಿಲ್ಲಾ ಸವಿತಾ ಸಮಾಜದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಜಿಲ್ಲಾ ಸವಿತಾ ಸಮಾಜದ ಮುಖಂಡರು ವಿವಿಧ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಸಮಿತಾ ಸಮಾಜದ ಅಧ್ಯಕ್ಷ ಹೆಚ್.ವಿ.ಮಂಜೇಶ್ ಗಾಂಧಿ ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಸವಿತಾ ಸಮಾಜದವರಿಗೆ ಸರ್ಕಾರ ವಿಶೇಷ ಸೇವಾ ಸವಲತ್ತು ನೀಡಿ ಶೋಷಿತ ವರ್ಗಕ್ಕೆ ನೆರವಾಗಬೇಕು, ವಿಶೇಷ ಮೀಸಲಾತಿ ಜಾರಿ ಮಾಡಿ ಸವಿತಾ ಸಮಾಜದವರಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಶಕ್ತಿ ತುಂಬಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವೈದ್ಯ ವೃತ್ತಿ, ಕ್ಷೌರಿಕ ವೃತ್ತಿ ಮತ್ತು ಡೋಲು, ನಾದಸ್ವರ ನುಡಿಸುವ ವೃತ್ತಿ ಮಾಡಿಕೊಂಡು ಬದುಕುತ್ತಿರುವ ಸವಿತಾ ಸಮಾಜದವರ ಬದುಕಿನ ಸ್ಥಿತಿಗತಿಯು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸುಧಾರಣೆ ಕಂಡಿಲ್ಲ, ಅಲ್ಲದೆ ಸಮಾಜದವರನ್ನು ಅಸ್ಪಶ್ಯತೆಯಿಂದ ಕಾಣುವ ಪರಿಸ್ಥಿತಿ ಬದಲಾಗಿಲ್ಲ, ತೀವ್ರ ಶೋಷಣೆ ಅನುಭವಿಸುತ್ತಿರುವ ಈ ಸಮುದಾಯದ ಜಾತಿ ಪದವನ್ನು ಬೈಗುಳ ಪದವಾಗಿ ಬಳಸಲಾಗುತ್ತಿದೆ, ಇಂತಹ ಪ್ರವೃತ್ತಿ ಕೊನೆಗಾಣಿಸಬೇಕು, ಈ ಬಗ್ಗೆ ಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಿದ ಪರಿಣಾಮ ಸರ್ಕಾರ ಸವಿತಾ ಸಮಾಜದ ಜಾತಿ ನಿಂದನೆ ಪದ ತೆಗೆದಿರುತ್ತದೆ, ಜಾತಿ ನಿಂದನೆ ಮಾಡುವವರನ್ನು ಶಿಕ್ಷಿಸುವ ಕಾನೂನು ಇಲ್ಲದ ಕಾರಣ ಇಂದಿಗೂ ಅನೇಕ ರಾಜಕೀಯ ನಾಯಕರು, ಸಿನಿಮಾ ನಟರು, ಜ್ಯೋತಿಷಿಗಳು ಜಾತಿ ನಿಂದನೆ ಪದ ಬಳಸುತ್ತಿರುವುದು ನಮ್ಮ ಸಮಾಜದವರನ್ನು ಮನಸಿಕವಾಗಿ ಕುಗ್ಗಿಸುತ್ತದೆ, ಸವಿತಾ ಸಮಾಜದ ಜಾತಿ ಪದ ಬಳಸಿ ನಿಂದಿಸುವುದನ್ನು ತಡೆಯಲು ಸರ್ಕಾರ ವಿಶೇಷ ಜಾತಿ ನಿಂದನೆ ಕಾನೂನು ಜಾರಿಗೆ ತಂದು ತಪ್ಪಿತಸ್ಥರನ್ನು ಶಿಕ್ಷಿಸುವಂತಾಗಬೇಕು ಎಂದು ಹೇಳಿದರು.
ಹಳ್ಳಿಗಳಲ್ಲಿ ಸವರ್ಣಿಯರು ಮತ್ತು ಅವರ್ಣಿಯರ ಮಧ್ಯ ಕ್ಷೌರಿಕ ವೃತ್ತಿ ಮಾಡುವುದು ಕಷ್ಟವಾಗಿದೆ, ರಾಜ್ಯದ ಹಲವೆಡೆ ಸವಿತಾ ಸಮಾಜದ ಜನರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿವೆ, ಇವುಗಳನ್ನು ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು, ಸವಿತಾ ಸಮಾಜದವರು ನಿರಾತಂಕವಾಗಿ ಬಾಳುವಂತಹ ವಾತಾವರಣ ನಿರ್ಮಾಣ ಮಾಡಬೇಕು, ತುಮಕೂರು ನಗರದ ಪ್ರಮುಖ ವೃತ್ತಕ್ಕೆ ಸವಿತಾ ಮಹರ್ಷಿಯ ಹೆಸರು ಇಡಬೇಕು, ವೃತ್ತದಲ್ಲಿ ಮಹರ್ಷಿಗಳ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಮಂಜೇಶ್ ಗಾಂಧಿ ಒತ್ತಾಯಿಸಿದರು.
ಸವಿತಾ ಸಮಾಜದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಆಯೋಗಗಳು ಸರ್ಕಾರಕ್ಕೆ ವರದಿ ನೀಡಿದ್ದು, ಇತ್ತೀಚಿನ ವರ್ಷಗಳಲ್ಲಿ ಹೆಚ್.ಕಾಂತರಾಜು ಆಯೋಗ ಮತ್ತು ಕುಲಶಾಸ್ತ್ರ ಅಧ್ಯಯನದ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ, ಈ ಎಲ್ಲಾ ವರದಿಗಳ ಆಧಾರದ ಮೇಲೆ ಸರ್ಕಾರ ಸವಿತಾ ಸಮಾಜಕ್ಕೆ ಸೂಕ್ತ ಮೀಸಲಾತಿ, ಸೌಲಭ್ಯ ಒದಗಿಸಬೇಕು, ರಾಜ್ಯದ ವಿವಿಧೆಡೆ ಕ್ಷೌರಿಕ ತರಬೇತಿ ಕೇಂದ್ರ ಹಾಗೂ ನಾದಸ್ವರ, ಡೋಲು ನುಡಿಸುವ ತರಬೇತಿ ಶಾಲೆ ಸ್ಥಾಪಿಸಬೇಕು, ಸವಿತಾ ಮಹರ್ಷಿಗಳ ಹೆಸರಿನಲ್ಲಿ ಸಮಾಜ ಸಾಧಕರಿಗೆ ಪ್ರಶಸ್ತಿ ನೀಡಬೇಕು, ತಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಹಂಪಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಸವಿತ ಸಮಾಜದಿಂದ ಪಾದಯಾತ್ರೆ ನಡೆಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪಾರ್ಥ ಸಾರಥಿ, ಮುಖಂಡರಾದ ಸುಪ್ರೀಂ ಸುಬ್ಬಣ್ಣ, ಸುರೇಶ್, ಎನ್.ಹರೀಶ್, ನಾಗೇಂದ್ರ, ಮೇಲಾಕ್ಷಪ್ಪ, ಬಸವರಾಜು, ವೇಣುಗೋಪಾಲ್, ಉಮೇಶ್, ನಾಗಭೂಷಣ್, ಸುಬ್ರಹ್ಮಣ್ಯ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Comments are closed.