-ಆನಂದ್ ಸಿಂಗ್.ಟಿ. ಹೆಚ್
ಕುಣಿಗಲ್: ತಾಲೂಕಿನಾದ್ಯಂತ ಸರ್ಕಾರಿ ಸೇರಿದಂತೆ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಸಾವಿರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳಿಗೆ ಇರುವ ಹಕ್ಕುಗಳು ಸೇರಿದಂತೆ ನೆರವು ಪಡೆಯಲು ಸಹಾಯವಾಣಿ ಅನುಷ್ಠಾನ ಮಾಡಿದ್ದು ಸದರಿ ಸಹಾಯವಾಣಿಯ ಬಗ್ಗೆ ಅರಿವು ಮೂಡಿಸದೆ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ತಾಲೂಕಿನಾದ್ಯಂತ 351ಸರ್ಕಾರಿ ಶಾಲೆಗಳ ಪೈಕಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6102, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3356 ಹಾಗೂ ಪ್ರೌಢಶಾಲೆಯಲ್ಲಿ 2237ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ ಖಾಸಗಿ ಶಾಲೆಯಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಒಟ್ಟಾರೆ ಸರಿ ಸುಮಾರು 18 ಸಾವಿರ ಮಕ್ಕಳು ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದ ವರೆಗೂ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ಹಕ್ಕು ರಕ್ಷಣೆ ನಿಟ್ಟಿನಲ್ಲಿ ಸಂವಿಧಾನದ ಆರ್ಟಿಕಲ್ 21-ಎ ಹಾಗೂ 24 ರಡಿಯಲ್ಲಿ ಮಕ್ಕಳ ಮೇಲಿನ ಶೋಷಣೆ, ಯಾವುದೇ ರೀತಿಯ ದೌರ್ಜನ್ಯ ತಡೆಗಟ್ಟಲು ಪ್ರತ್ಯೇಕ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ, ನಿರ್ದೇಶನಾಲಯ ಇವೆಲ್ಲವೂ ಕಾರ್ಯ ನಿರ್ವಹಿಸುತ್ತಿದೆ, ಆದರೆ ಇವು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಾಂವಿಧಾನಿಕವಾಗಿ ಇರುವ ಸಂಸ್ಥೆಗಳೆಂದು ವ್ಯಾಸಂಗ ಮಾಡುತ್ತಿರುವ ಬಹುತೇಕ ಮಕ್ಕಳಿಗೆ ಅರಿವೆ ಇಲ್ಲ.
ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತುಸ್ಪಂದನಾ ದೂರವಾಣಿ ಸಂ.112 ಮಕ್ಕಳಿಗೆ ಕಾಣುವ ಹಾಗೆ ಪ್ರದರ್ಶಿಸುವಂತೆ ಹಲವು ಸುತ್ತೋಲೆಗಳಿದ್ದರು ಶಾಲೆಯ ಉಸ್ತುವಾರಿ ನೋಡಿಕೊಳ್ಳುವ ಹಲವು ಅಧಿಕಾರಿಗಳ ಜಾಣ ನಿರ್ಲಕ್ಷ್ಯದಿಂದ ಇಲಾಖೆ ಸೂಚನೆ ಸುತ್ತೋಲೆಗೆ ಸೀಮಿತವಾಗಿದೆ, ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು, ಅಧ್ಯಕ್ಷರು ಕಾಲ ಕಾಲಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಆಯೋಗದ ಸದಸ್ಯರು, ಅಧ್ಯಕ್ಷರು ಭೇಟಿ ನೀಡುವಾಗ ಹಾಕಲಾಗುವ ಫಲಕ, ಭೇಟಿ ನಂತರ ಕಾಣೆಯಾಗುತ್ತದೆ ಎನ್ನಲಾಗುತ್ತಿದೆ, ಬಹುತೇಕ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ್ ನಡೆಯುತ್ತಿದ್ದರು ಮಕ್ಕಳು ಮನೆಯಲ್ಲೂ ಹೇಳಲಾರದೆ ಯಾರಿಗೆ ಹೇಳಬೇಕೆಂಬ ಮಾಹಿತಿ ಇಲ್ಲದೆ ತಮ್ಮೊಳಗೆ ನೋವು ತಿಂದು ಕಾಲ ಕಳೆಯುವಂತಾಗಿದೆ, ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಹೆಣ್ಣು ಮಕ್ಕಳು ಯಾವುದೇ ರೀತಿಯ ತೊಂದರೆಯಾದರೂ ಮನೆಯಲ್ಲಿ ಹೇಳದೆ ಮೂಕ ವೇದನೆ ಅನುಭವಿಸುವ ಅಸಹಾಯಕ ಸ್ಥಿತಿಗೆ ಒಳಗಾಗುವಂತಾಗಿದೆ. ಮನೆಯಲ್ಲಿ ಆಚೆ ತೊಂದರೆ ಬಗ್ಗೆ ಪ್ರಸ್ತಾಪಿಸಿದರೆ ವಿದ್ಯಾಭ್ಯಾಸ ಮೊಟಕು ಮಾಡುತ್ತಾರೆಂಬ ಭಯ ಕಾಡುತ್ತಿದೆ, ಕಳೆದ ಕೆಲ ತಿಂಗಳ ಹಿಂದೆ ಶಾಲೆಯೊಂದರಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ದೌರ್ಜನ್ಯಕ್ಕೆ ಒಳಗಾದ ಮಕ್ಕಳೆ ಪ್ರತಿಭಟನೆ ನಡೆಸಿ ಗ್ರಾಮಸ್ಥರು ದೌರ್ಜನ್ಯ ನಡೆಸಿದ ಶಿಕ್ಷಕನ ಮೇಲೆ ಹಲ್ಲೆಗೆ ಮುಂದಾದಾಗ ಮಕ್ಕಳ ದೂರಿಗಿಂತ ಮುಂಚೆಮೇ ಶಿಕ್ಷಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆಯಿತು, ಇನ್ನಾದರೂ ತಾಲೂಕಿನ ಆಯ ಕಟ್ಟಿನ ಶಿಕ್ಷಣ ಅಧಿಕಾರಿಗಳು ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸಂಭಾವ್ಯ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ 1098, ತುರ್ತು ಸ್ಪಂದನಾ ದೂರವಾಣಿ ಸಂಖ್ಯೆ 112 ಎಲ್ಲಾ ಶಾಲೆಯಲ್ಲೂ ಮಕ್ಕಳಿಗೆ ಕಾಣುವ ಹಾಗೆ ಪ್ರದರ್ಶನ ಮಾಡಲು ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಆಗ್ರಹವಾಗಿದ್ದು, ಇದಕ್ಕೆ ಶಿಕ್ಷಣ ಇಲಾಖಾಧಿಕಾರಿಗಳು ಎಷ್ಟರ ಮಟ್ಟಿಗೆ ಸ್ಪಂದಿಸುವರೆಂದು ಕಾದು ನೋಡಬೇಕಿದೆ.
Comments are closed.