ಮಧುಗಿರಿ: ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಶೇ.95 ರಷ್ಟು ಬೆಳೆ ನಾಶವಾಗಿದ್ದು ರಾಜ್ಯ ಸರ್ಕಾರ ಬರಗಾಲ ನಿರ್ವಹಿಸಲು ವಿಫಲವಾಗಿದೆ ಎಂದು ಸರ್ಕಾರದ ನಡೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಂಡಿಸಿದರು.
ಮಧುಗಿರಿ, ಕೊರಟಗೆರೆ ತಾಲ್ಲೂಕಲ್ಲಿ ಬರ ಅಧ್ಯಯನ ನಡೆಸಿ ಮಾತನಾಡಿ, ತಾಲ್ಲೂಕಿನ ಕೊಡ್ಲಾಪುರ ಗ್ರಾಮದಲ್ಲಿನ ರಸ್ತೆಯ ಎರಡು ಬದಿಗಳಲ್ಲಿನ ರೈತರ ಜಮೀನುಗಳಿಗೆ ಭೇಟಿ ನೀಡಲಾಗಿದ್ದು ಜಮೀನುಗಳಲ್ಲಿನ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ನಾಶ ಆಗಿವೆ, ಬಿತ್ತನೆ ಬೀಜ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ, ರೈತ ಕಂಗಾಲಾಗಿದ್ದಾನೆ, ಮುಂದಿನ ಜೀವನ ಏನು ಅಂತ ಯೋಚನೆ ಮಾಡುವ ದುಃಸ್ಥಿತಿಗೆ ಬಂದಿದ್ದಾನೆ, ಯಾವುದೇ ಸಚಿವರು ಸ್ಥಳ ಪರಿಶೀಲನೆ ಮಾಡಿ ರೈತರಲ್ಲಿ ವಿಶ್ವಾಸ ಮೂಡಿಸುತ್ತಿಲ್ಲ, ನಾನು ಬರ ಪ್ರವಾಸ ಆರಂಭಿಸಿದ ಮೇಲೆ ಅವರು ಈಗ ಹೊರಡೋಕೆ ಆರಂಭಿಸಿದ್ದಾರೆ ಎಂದರು.
ರೈತರ ಪಾಲಿಗೆ ಸರ್ಕಾರ ಬದುಕಿದಿಯೋ ಸತ್ತಿದ್ಯೋ ಎಂದು ತಿಳಿಯದ ಪರಿಸ್ಥಿತಿ ನಿರ್ಮಾಣ ಆಗಿದೆ, ವಾಸ್ತವ ಸ್ಥಿತಿ ಗತಿಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಹರಿಸುವಂತೆ ಮಾಡಲಾಗುವುದು, ರೈತರಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ, ಅಲ್ಲಿಯ ವರೆವಿಗೂ ರೈತರು ಅಲ್ಲಿಯವರೆಗೆ ಧೃತಿಗೆಡಬಾರದು, ಕೊರಟಗೆರೆ, ಮಧುಗಿರಿ ಈ ಭಾಗದಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಲಾಗಿದ್ದು ಅವರ ಸ್ಥಿತಿಗಳನ್ನ ಗಮನಿಸಿದ್ದೇನೆ, ಭಿತ್ತನೆ ಮಾಡಿದ ಬೆಳೆಗಳೆಲ್ಲ ನಾಶವಾಗಿವೆ, ಜಾನುವಾರುಗಳಿಗೆ ಮೇವು ಕೂಡ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ, ಇಷ್ಟೆಲ್ಲಾ ಅವಾಂತರ ನಡೆದರು ಸರ್ಕಾರ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಪರಮೇಶ್ವರ್ ಮೇಲೆ ಗೌರವ ಇದೆ, ಆದರೆ ಅವರ ಜಿಲ್ಲೆಯಲ್ಲಿ, ಅವರದ್ದೇ ಕ್ಷೇತ್ರವಾದ ಕೊರಟಗೆರೆಯಲ್ಲಿನ ಪರಿಶಿಷ್ಟ ಸಮುದಾಯದವರಿಗೆ ಅಂತ್ಯ ಸಂಸ್ಕಾರಕ್ಕೆ ನೀಡಲಾಗುವ ಚೆಕ್ ಬೌನ್ಸ ಆಗಿದೆ, ಇದಕ್ಕೆ ಕಾರಣವೆಂದರೆ ಸರ್ಕಾರ ಸಂಪೂರ್ಣ ದಿವಾಳಿಯಾಗಿ ಖಜಾನೆಯು ಖಾಲಿಯಾಗಿದ್ದು ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ, ಗ್ಯಾರೆಂಟಿ ಯೋಜನೆಗಳಿಂದ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮೋಸ ಮಾಡಲಾಗುತ್ತಿದೆ ಎಂದರು.
ಸರಿಯಾಗಿ ಮಳೆಯಾಗದ ಕಾರಣ ರಾಗಿ, ಮೆಕ್ಕೆಜೋಳ, ಶೇಂಗಾ ಸಂಪೂರ್ಣ ನಾಶವಾಗಿವೆ, ಬೋರ್ ವೆಲ್ ಸೌಲಭ್ಯವಿರುವ ಜಮೀನುಗಳಿಗೂ ಭೇಟಿ ನೀಡಲಾಗಿದ್ದು ಸಮರ್ಪಕವಾಗಿ ವಿದ್ಯುತ್ ವಿತರಣೆಯಾಗದೆ ಇರುವುದರಿಂದ ಅಲ್ಲಿಯೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ, ನಿನ್ನೆ ಸ್ವಲ್ಪ ಮಳೆಯಾಗಿರುವುದರಿಂದ ರೈತರಿಗೆ ಸ್ವಲ್ಪ ನೆಮ್ಮದಿ ದೊರೆಯಲಿದೆ, ದೊಡ್ಡೇರಿ ಹೋಬಳಿಯ ಬಡವನಹಳ್ಳಿಯಲ್ಲಿ ಸಂಪೂರ್ಣ ಬೆಳೆ ನೆಲಕಚ್ಚಿರುವ ದೃಶ್ಯ ಕಂಡಿದ್ದೇನೆ, ಸರ್ಕಾರ ಜನರಿಗೆ ಪೂರೈಕೆ ಮಾಡುತ್ತಿರುವ ರಾಗಿಯು ಕಳಪೆಯಿಂದ ಕೂಡಿದೆ, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ, ಆದರೆ ರಾಜ್ಯ ಸರ್ಕಾರ ಕೇವಲ 3 ಕೆಜಿ ಅಕ್ಕಿ 2 ಕೆಜಿ ರಾಗಿ ವಿತರಣೆ ಮಾಡುತ್ತಿದೆ ಎಂದರು.
ಕೇಂದ್ರದ ಬರಗಾಲ ವೀಕ್ಷಣೆಯ ತಂಡದ ವರದಿ ಇನ್ನೂ ಕೊಟ್ಟಿಲ್ಲ ಎಂದು ಮಾಧ್ಯಮವರು ಪ್ರಶ್ನಿಸಿದಾಗ ನಾವೂ ಕೂಡ ಪ್ರಧಾನಿಯವರಿಗೆ ಪತ್ರ ಬರೆಯಲಾಗಿದ್ದು, ಇನ್ನೆರೆಡು ದಿನಗಳಲ್ಲಿ ವರದಿ ಬರುವ ಸಾಧ್ಯತೆಯಿದೆ, ರಾಜ್ಯದ ಸ್ಥಿತಿಗತಿ ಬಗ್ಗೆ ಪ್ರಧಾನಿ ಮೋದಿಗೆಯವರಿಗೆ ಮನವರಿಕೆ ಮಾಡಿಸುತ್ತೇನೆ ಎಂದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ. ಗಳನ್ನು ರೈತರಿಗೆ ನೀಡಲಾಗುತ್ತಿತ್ತು, ರಾಜ್ಯ ಸರ್ಕಾರ 4 ಸಾವಿರ ರೂ. ನೀಡಲಾಗುತ್ತಿತ್ತು, ಆದರೆ ಈ ಸರ್ಕಾರ ಹಣ ವಿತರಣೆ ಮಾಡುವುದನ್ನು ಸ್ಥಗಿತ ಗೊಳಿಸಿದೆ ಎಂದರು.
ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಮುಖಂಡರಾದ ಎಲ್.ಸಿ.ನಾಗರಾಜು, ಅನಿಲ್ ಕುಮಾರ್, ಮಂಡಲಾಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ಮರಿಸ್ವಾಮಿ, ಮಿಡಗೇಶಿ ಕೃಷ್ಣ ಮೂರ್ತಿ, ರಾಮಯ್ಯ, ಪವನ್, ಲತಾ ಪ್ರದೀಪ್, ರತ್ನಮ್ಮ, ನಾಗೇಂದ್ರ ಇದ್ದರು.
Comments are closed.