ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಗಳ ತರಬೇತಿ ವಾಹನಗಳೊಂದಿಗೆ ಬೆಂಗಳೂರಿಗೆ ಜಾಥಾ ನಡೆಸಲು ಮೋಟಾರು ವಾಹನ ತರಬೇತಿ ಸಂಸ್ಥೆಗಳ ಒಕ್ಕೂಟ ತೀರ್ಮಾನಿಸಿದೆ.
ನಗರದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಚರ್ಚಿಸಿದ ತರಬೇತಿ ಶಾಲೆಗಳ ಮಾಲೀಕರು ಹಾಗೂ ಪದಾಧಿಕಾರಿಗಳು, ತಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ಮಾಡಲು ತೀರ್ಮಾನಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ ಪಾಟೀಲ್ ಮಾತನಾಡಿ, ಸರ್ಕಾರದ ಕೆಲವು ನಿರ್ಧಾರಗಳಿಂದ ಮೋಟಾರು ವಾಹನ ತರಬೇತಿ ಶಾಲೆಗಳಿಗೆ ಸಮಸ್ಯೆಯಾಗಿದೆ, ಈ ಸಮಸ್ಯೆ ನಿವಾರಣೆಗೆ ಹಾಗೂ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಮನವಿ ಮಾಡಿದ್ದರೂ ಸರ್ಕಾರ ಈವರೆಗೂ ಸ್ಪಂದಿಸಿಲ್ಲದ ಕಾರಣ ಹೋರಾಟ ಮಾಡಬೇಕಾಗಿದೆ ಎಂದರು.
ರಸ್ತೆ ಸುರಕ್ಷತೆ ದೃಷ್ಟಿಯಿಂದ ಪ್ರತಿ ವಾಹನ ಚಾಲನಾ ಪರವಾನಗಿ ಕಡ್ಡಾಯವಾಗಿ ಪರೀಕ್ಷೆಯನ್ನು ವಾಹನ ಚಾಲನಾ ಶಾಲೆಗಳಲ್ಲೇ ನಡೆಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಚಾಲನಾ ಪರವಾನಿಗೆ ಪಡೆಯದ ಪ್ರತಿಯೊಬ್ಬರಿಗೂ ರಸ್ತೆ ನಿಯಮ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಅಗತ್ಯವಿರುವುದು, ಆದ್ದರಿಂದ ಪ್ರತಿ ವಾಹನ ಚಾಲನಾ ಪರವಾನಿಗೆ ಪಡೆಯುವ ಸಾರ್ವಜನಿಕರು ಕಲಿಕಾ ಚಾಲನಾ ಪತ್ರ ಪಡೆಯುವ ಅಭ್ಯರ್ಥಿಗೆ ವಾಹನ ಚಾಲನಾ ತರಬೇತಿ ಶಾಲೆಗಳಿಂದ ಫಾರಂ-14 ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು, ಪ್ರತಿ ಜಿಲ್ಲೆಯಲ್ಲಿ ಮೋಟಾರು ವಾಹನ ತರಬೇತಿ ಶಾಲೆಗಳ ಆಶ್ರಯದಲ್ಲಿ ತರಬೇತಿದಾರರಿಗೆ ಉತ್ತಮ ತರಬೇತಿ ನೀಡಲು ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸಲು ವಾಹನ ಚಾಲನಾ ತರಬೇತಿ ಶಾಲೆಗಳಿಗೆ ಅಗತ್ಯವಿರುವ ಜಮೀನನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ರೋಸ್ ಸ್ಮಾರ್ಟ್ ಕಂಪನಿಯವರು ಸ್ಮಾರ್ಟ್ ಕಾರ್ಡ್ ಹಾಗೂ ಸಾಮಗ್ರಿಗಳನ್ನು ಪೂರೈಸಲು ವಿಫಲವಾಗಿರುವುದರಿಂದ ಕೂಡಲೇ ಅವರ ಒಪ್ಪಂದ ರದ್ದು ಮಾಡಬೇಕು, ಅನಧಿಕೃತ ವಾಹನ ಚಾಲನಾ ತರಬೇತಿ ನೀಡುತ್ತಿರುವ ಶಾಲೆಗಳಿಗೆ ಕಡಿವಾಣ ಹಾಕಬೇಕು, ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರ ಕೊರತೆ ಇದ್ದು ಕೂಡಲೇ ಆ ಸ್ಥಾನಗಳನ್ನು ತುಂಬಬೇಕು, ತರಬೇತಿ ಶಾಲೆಗಳ ವಾಹನ ತರಬೇತಿ ದರಪಟ್ಟಿ ಹೆಚ್ಚಳ ಮಾಡಬೇಕು, ಇನ್ನು ಮುಂತಾದ ಬೇಡಿಕೆ ಈಡೇರಿಸುವಂತೆ ಆನಂದ ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಟಿ.ಆರ್.ಸದಾಶಿವಯ್ಯ, ಕಾರ್ಯದರ್ಶಿ ನಾಗರಾಜು, ಜಿಲ್ಲಾಧ್ಯಕ್ಷ ಡಿ.ಶಿವಕುಮಾರ್, ಕಾರ್ಯದರ್ಶಿ ಬಸವರಾಜಪ್ಪ, ಖಜಾಂಚಿ ಹೆಚ್.ಆರ್.ನಾಗೇಶ್, ಮಧುಗಿರಿ ತಾಲ್ಲೂಕು ಅಧ್ಯಕ್ಷ ಶರತ್ ಹಾಗೂ ವಿವಿಧ ಡ್ರೈವಿಂಗ್ ಸ್ಕೂಲ್ ಗಳ ಮಾಲೀಕರು ಭಾಗವಹಿಸಿದ್ದರು.
Comments are closed.