ತುಮಕೂರು: ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಕಾಟಾಚಾರಕ್ಕೆ ಪರಿಹಾರ ವಿತರಿಸದರೆ, ವೈಜ್ಞಾನಿಕವಾಗಿ ಪರಿಹಾರ ನೀಡುವಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಸರಕಾರವನ್ನು ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಎರಡನೇ ತಂಡದ ನೇತೃತ್ವ ವಹಿಸಿ ಗುರುವಾರ ತುಮಕೂರು ನಗರ ಸಮೀಪದ ವಡ್ಡರಹಳ್ಳಿ ಗ್ರಾಮದ ಸರ್ವೆ ನಂ.12 ರಲ್ಲಿರುವ ಜಗದೀಶ್, ವಿಜಯಲಕ್ಷ್ಮಿಮ್ಮ ಅವರ ಜಮೀನಿನಲ್ಲಿ ಹಾಕಿದ್ದ ರಾಗಿ ಬೆಳೆ ವೀಕ್ಷಿಸಿ ಮಾತನಾಡಿ, ಸಕಾಲಕ್ಕೆ ಮಳೆಯಾಗದೆ ಹಾಗೂ ವಿದ್ಯುತ್ ಕೊರತೆಯಿಂದ ರೈತರ ಬೆಳೆ ಸಂಪೂರ್ಣ ಒಣಗಿದೆ, ಎನ್ ಡಿ ಆರ್ ಎಫ್ ನೆಪದಲ್ಲಿ ಭಿಕ್ಷೆಯ ರೀತಿ ಪರಿಹಾರ ವಿತರಿಸದರೆ ವೈಜ್ಞಾನಿಕವಾಗಿ ರೈತರಿಗೆ ಆಗಿರುವ ಸಂಪೂರ್ಣ ನಷ್ಟವನ್ನು ಪರಿಹಾರದ ರೂಪದಲ್ಲಿ ವಿತರಿಸಬೇಕೆಂದರು.
ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಇದ್ದಿದ್ದರೆ ಈ ವೇಳೆ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸುತ್ತಿದ್ದರು, ಆದರೆ ಇದುವರೆಗೂ ಶಾಸಕರು, ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿಲ್ಲ, ಒಂದೆಡೆ ಮಳೆಯಿಲ್ಲದೆ ರೈತರ ಬೆಳೆ ಹಾಳಾದರೆ ಬೋರೆವೆಲ್ ನೀರಿನಲ್ಲಿ ಬೆಳೆದಿರುವ ಸಾವಿರಾರು ಎಕರೆ ಬೆಳೆ ವಿದ್ಯುತ್ ಕೊರತೆಯಿಂದ ನೀರುಣಿಸಲಾಗದೆ ನಾಶವಾಗಿದೆ, ಇದಕ್ಕೆ ಸರಕಾರವೇ ನೇರ ಹೊಣೆ, ಪ್ರತಿಯೊಂದಕ್ಕೂ ಕೇಂದ್ರದ ಕಡೆ ಕೈ ಮಾಡಿದರೆ ರಾಜ್ಯ ಸರಕಾರದ ಜವಾಬ್ದಾರಿ ಏನು ಎಂದು ಪ್ರಶ್ನಿಸಿದ ಅವರು ಪಾವಗಡ ತಾಲೂಕು ಒಂದರಲ್ಲಿಯೇ ಸುಮಾರು 22 ಸಾವಿರ ಹೆಕ್ಟೇರ್ನಲ್ಲಿ ಬೆಳೆದ ಬೆಳೆ ನಾಶವಾಗಿದೆ, ಕೇವಲ 17 ಕೋಟಿ ಪರಿಹಾರಕ್ಕೆ ವರದಿ ಕಳುಹಿಸಲಾಗಿದೆ, ಇಂದಿನ ಮಾರುಕಟ್ಟೆಯ ಬೆಲೆಯಂತೆ 110 ಕೋಟಿ ಬೆಳೆ ನಷ್ಟವಾಗಿದ್ದು, ಅಷ್ಟನ್ನೂ ರಾಜ್ಯ ಸರಕಾರ ತುಂಬಿಕೊಡಬೇಕೆಂದು ಆರ್.ಸಿ.ಆಂಜನಪ್ಪ ಆಗ್ರಹಿಸಿದರು.
ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ರಾಜ್ಯದಲ್ಲಿ ಬರ ಇದೆ ಎಂದು ಗೊತ್ತಿದ್ದರೂ ಇದುವರೆಗೂ ರಾಜ್ಯ ಸರಕಾರ ಯಾವುದೇ ಮುಂಜಾಗ್ರತಾ ಕ್ರಮ ವಹಿಸಿಲ್ಲ, ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಉಂಟಾಗಿದ್ದರೂ ಇದುವರೆಗೂ ಮೇವು ಸಂಗ್ರಹಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಗೋಶಾಲೆಗಳ ಅಗತ್ಯವಿದೆ, ಪ್ರತಿಯೊಂದಕ್ಕೂ ಕೇಂದ್ರದತ್ತ ಬೆರಳು ಮಾಡಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ತುಮಕೂರು ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹ ಮೂರ್ತಿ ಮಾತನಾಡಿ, ತುಮಕೂರು ಜಿಲ್ಲೆಯ 10 ತಾಲೂಕು, 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಬರ ಅಧ್ಯಯನವನ್ನು ಪಕ್ಷದ ವತಿಯಿಂದ ಕೈಗೊಳ್ಳಲಾಗಿದೆ, ತುಮಕೂರು ನಗರ, ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ ತಾಲೂಕುಗಳ ಬರ ಅಧ್ಯಯನ ಪ್ರವಾಸವನ್ನು ವಡ್ಡರಹಳ್ಳಿಯಿಂದ ಆರಂಭಿಸಿದ್ದು, ರೈತರಿಗೆ ಸಂತ್ವನದ ಜೊತೆಗೆ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಪಕ್ಷದ ವತಿಯಿಂದ ಮಾಡುತ್ತಿದ್ದು, ನವೆಂಬರ್ 15 ರಂದು ವರದಿಯನ್ನು ಜಿಲ್ಲಾಡಳಿತ ಮತ್ತು ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ರೈತ ಮಹಿಳೆ ವಿಜಯಲಕ್ಷ್ಮಿ ಸಾಲ ಮಾಡಿ ರಾಗಿ ಹಾಕಿದ್ದೇವು, ಮಳೆಯಿಲ್ಲದೆ ರಾಗಿ ಹಾಳಾಗಿದೆ, ಮುಂದಿನ ಭವಿಷ್ಯ ಏನು ಎಂಬ ಚಿಂತೆ ಕಾಡುತ್ತಿದೆ, ಸರಕಾರ ಸೂಕ್ತ ಪರಿಹಾರ ವಿತರಿಸಬೇಕು ಹಾಗೂ ಈ ಭಾಗದಲ್ಲಿ ಎನ್ ಆರ್ ಇ ಜಿ ಎ ಕಾರ್ಯಕ್ರಮ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ತುಮಕೂರು ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್, ಜೆಡಿಎಸ್ ನಗರ ಅಧ್ಯಕ್ಷ ವಿಜಯಗೌಡ, ಬೆಳಗುಂಬ ಗ್ರಾಮ ಪಂಚಾಯಿತಿ ಸದಸ್ಯ ಟಿ.ಡಿ.ರಾಜು, ಮುಖಂಡರಾದ ಭೀಮಣ್ಣ ಮತ್ತಿತರರು ಇದ್ದರು.
Comments are closed.