ಮಧುಗಿರಿ: ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಈ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತುಮಕುರು ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ನಡೆಸಿ ರೈತರ ಸಮಸ್ಯೆ ಆಲಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು, ಇದರಿಂದ ಎಚ್ಚೆತ್ತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲೆಯಲ್ಲಿ ಪ್ರವಾಸ ಬರ ಅಧ್ಯಯನ ಪ್ರವಾಸ ನಡೆಸಿದರು.
ಶಿರಾ, ಕೊರಟಗೆರೆ, ಮಧುಗಿರಿ ತಾಲ್ಲೂಕಲ್ಲಿ ಬರ ಅಧ್ಯಯನ ನಡೆಸಿ ಮಧುಗಿರಿಯ ತಾಲೂಕಿನ ನಿರೀಕ್ಷಣಾ ಮಂದಿರದ ಸಭಾಂಗಣದಲ್ಲಿ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತು ಮಾತನಾಡಿ, ಜಿಲ್ಲೆಯಿಂದ ಜಾನುವಾರುಗಳ ಮೇವು ಹೊರ ಹೋಗದಂತೆ ನಿಷೇಧಿಸಲಾಗುತ್ತಿದೆ ಎಂದು ತಿಳಿಸಿದರು.
ಪಶುಗಳಿಗೆ ಮೇವುಗಳು ಕೊರತೆ ಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಈ ವಾರ ಜಿಲ್ಲೆಯ ರೈತರಿಗೆ ಮೇವು ಬೀಜಗಳನ್ನು ವಿತರಿಸಲು ಸೂಚಿಸಲಾಗಿದೆ, ಜಿಲ್ಲೆಯಲ್ಲಿ ನೀರಿರುವ 9 ಕೆರೆಗಳ ಸದ್ಬಳಕೆ ಮಾಡಿಕೊಂಡು, ಪಶುಗಳಿಗಾಗಿ ಮೇವುಗಳನ್ನು ಬೆಳೆಸಿ ಮುಂದಿನ ಬೇಸಿಗೆಯಲ್ಲಿ ಪಶುಗಳಿಗೆ ಮೇವು ಕೊರತೆಯಾಗದಂತೆ ವಿವಿಧ ಹಂತಗಳಲ್ಲಿ ಮೇವು ಸಂಗ್ರಹಿಸಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜುಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ, ರಾಜ್ಯದ 226 ತಾಲೂಕಗಳಲ್ಲಿ 223 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳನ್ನಾಗಿ ಘೋಷಿಸಲಾಗಿದೆ, ಇಡೀ ರಾಜ್ಯ ಬರ ಪೀಡಿತವಾಗಿದೆ, ರಾಜ್ಯದಲ್ಲಿ ಒಟ್ಟು 37 ಸಾವಿರ ಕೋಟಿ ಬೆಳೆ ನಷ್ಟವಾಗಿದ್ದು, 17 ಸಾವಿರ ಕೋಟಿ ರೂ. ಬರ ಪರಿಹಾರಕ್ಕೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಲಾಗಿದೆ, ಬರ ಪರಿಸ್ಥಿತಿಯ ನಿರ್ವಹಣೆಗಾಗಿ ಎಲ್ಲಾ ಜಿಲ್ಲೆಗಳಿಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ ಹಾಗೂ ಈಗಾಗಲೇ ಜಿಲ್ಲೆಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇದರೊಂದಿಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ 19 ಕೋಟಿ ರೂ. ಅನುದಾನ ಬರ ನಿರ್ವಹಣೆಗಾಗಿ ಬಳಸಿಕೊಳ್ಳಲಾಗುವುದು, ಹಣದ ಕೊರತೆ ಸರ್ಕಾರದಲ್ಲಿ ಇಲ್ಲವಾಗಿದೆ, ಕೇಂದ್ರ ತಂಡದ ವರದಿ ಸಲ್ಲಿಕೆಯಾಗಿದ್ದರು ಕೂಡ ಇದುವರೆವಿಗೂ ಒಂದೂ ನಯ ಪೈಸೆಯು ಬಂದಿಲ್ಲ, ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಹಾಗೂ ಪಶುಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರು ಸೇರಿದಂತೆ ಮೊದಲಾದ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 100 ಜನ ಹಾಗೂ ಪ್ರತಿ ರೈತನಿಗೆ 30ರಿಂದ 50 ಸಾವಿರ ವರೆಗಿನ ಕಾಮಗಾರಿಯಂತೆ ಜಿಲ್ಲೆಯ ಒಂದು ಲಕ್ಷ ರೈತರನ್ನು ನರೇಗಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ, ಪ್ರತಿ ಗ್ರಾಪಂ ನಲ್ಲಿ 100 ಜನರಿಗೆ ಮೇವು ಕಿಟ್ ಗಳನ್ನು ಇನ್ನೊಂದು ವಾರದೊಳಗೆ ವಿತರಿಸಲಾಗುವುದು, ನರೇಗಾ ಯೋಜನೆಯಡಿಯಲ್ಲಿ ಅಂಗನವಾಡಿ, ಶಾಲೆ ಕಟ್ಟಡ, ಮೈದಾನ, ಆಸ್ಪತ್ರೆ, ಇತರೆ ಸರ್ಕಾರಿ ಕಟ್ಟಡ, ರಸ್ತೆ ಮೊದಲಾದ ಸಮುದಾಯ ಆಧಾರಿತ ಕಾಮಗಾರಿಗಳ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ ಬರ ನಿವಾರಣೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ, ನಮ್ಮ ಮುಖ್ಯ ಉದ್ದೇಶ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜೊತೆಯಲ್ಲಿ ಮೂರು ತಿಂಗಳಿಗೆ ಸಾಕಾಗಾವಷ್ಟು ಮೇವು ಇದ್ದು ಹೆಚ್ಚುವರಿಯಾಗಿ ಮೇವು ಕಿಟ್ ವಿತರಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಜಿಲ್ಲಾಧಿಕಾರಿ ಶ್ರೀನಿವಾಸ್.ಕೆ, ಜಿಪಂ ಸಿಇಒ ಜಿ.ಪ್ರಭು, ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶಿಲ್ದಾರ್ ಸಿಬ್ಗತ್ ವುಲ್ಲಾ, ಕೃಷಿ ಇಲಾಖೆ ಉಪ ನಿರ್ದೇಶಕಿ ದೀಪಶ್ರೀ, ಪಶು ಸಂಗೋಪನೆಯ ಜಿಲ್ಲಾ ನಿರ್ದೇಶಕ ಗಿರೀಶ್ ಬಾಬು ರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ವಲಯ ಅರಣ್ಯ ಅಧಿಕಾರಿ ಸುರೇಶ್, ಉಪವಲಯ ಅರಣ್ಯಾಧಿಕಾರಿ ಮುತ್ತುರಾಜ್ ಇತರರು ಇದ್ದರು.
Comments are closed.